ಕನ್ನಡಪ್ರಭ ವಾರ್ತೆ ತುಮಕೂರು
ಜಿಲ್ಲಾ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ ಸ್ವಾಮಿ ವಿವೇಕಾನಂದರ 162ನೇ ಜನ್ಮದಿನವನ್ನು ಜಿಲ್ಲಾ ಕಚೇರಿಯಲ್ಲಿ ಪುಷ್ಪ ನಮನ ಸಲ್ಲಿಸುವ ಮೂಲಕ ಸಿಹಿ ಹಂಚಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ತುಮಕೂರು ಜಿಲ್ಲಾ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್, ಸ್ವಾಮಿ ವಿವೇಕಾನಂದರು ಯುವಕರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು, ‘ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ’ಎಂಬ ಪ್ರಖರ ಸಂದೇಶದಿಂದ ಅಂಧಕಾರದಲ್ಲಿ ಮುಳುಗಿದ್ದ ಭಾರತದ ಯುವ ಜನತೆಯನ್ನು ಬೆಳಕಿನಲ್ಲಿ ಪ್ರಜ್ವಲಿಸುವಂತೆ ಮಾಡಿದ ಯುಗಪುರುಷರು.
ಸ್ವಾಮಿ ವಿವೇಕಾನಂದರ ಹೆಸರು ಕೇಳಿದೊಡನೆ ಮನ ಪುಳಕಿತಗೊಳ್ಳುತ್ತದೆ. ಸ್ಪೂರ್ತಿಯ ಚಿಲುಮೆ ಉಕ್ಕಿ ಹರಿಯುತ್ತದೆ. ದೇಶದ ಸಹಬಾಳ್ವೆಯನ್ನು ಬೆಳಗಲು ಅವತರಿಸಿದ ಯುಗ ಪುರುಷರು. ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕಿದೆ ಎಂದರು.
ತುಮಕೂರು ಜಿಲ್ಲಾ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಎಸ್. ರಾಮಚಂದ್ರರಾವ್ ಮಾತನಾಡಿ, ಸದಾ ಯುವಜನತೆಯನ್ನು ಉರಿದುಂಬಿಸುತ್ತಿದ್ದ ಸ್ವಾಮಿ ವಿವೇಕಾನಂದರು, ಆಧ್ಯಾತ್ಮಿಕದತ್ತ ಹೆಚ್ಚಿನ ಒಲವು ಹೊಂದಿದ್ದರು. ಹೀಗಾಗಿ ಎಲ್ಲಾ ಲೌಕಿಕ ಸುಖಗಳನ್ನು ತ್ಯಜಿಸಿ ಸನ್ಯಾಸಿಯಾದರು. ೧೮೯೩ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣ ಇಂದಿಗೂ ಪ್ರಸ್ತುತ. ಆ ಭಾಷಣದಿಂದ ಇಡೀ ವಿಶ್ವವು ಭಾರತವನ್ನು ನೋಡುವ ದೃಷ್ಟಿಯೇ ಬದಲಾಯಿತು ಎಂದು ತಿಳಿಸಿದರು.
ತುಮಕೂರು ಜಿಲ್ಲಾ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಇಂದ್ರಕುಮಾರ್.ಡಿ.ಕೆ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಬ್ಬೀರ್ ಅಹ್ಮದ್,ಯುವ ಘಟಕದ ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ನಾರಾಯಣ್,ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್.ಎನ್.ವಿ, ಪದಾಧಿಕಾರಿಗಳಾದ ಕಿರಣ್, ಗೋವಿಂದರಾಜು ಕೆ, ಸುರೇಶ್ ಕುಮಾರ್, ಶ್ರೀನಿವಾಸ್‌ರಾವ್ ಉಪಸ್ಥಿತರಿದ್ದರು.