ಮದುವೆ ಆಗುವುದಾಗಿ ನಂಬಿಸಿ ಕಿರುತರೆ ಸಹಕಲಾವಿದೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ನಟ ಮಡೆನೂರು ಮನು ಅವರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು : ಮದುವೆ ಆಗುವುದಾಗಿ ನಂಬಿಸಿ ಕಿರುತರೆ ಸಹಕಲಾವಿದೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ನಟ ಮಡೆನೂರು ಮನು ಅವರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ನಾಗರಬಾವಿಯಲ್ಲಿ ನೆಲೆಸಿರುವ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿದ ಪೊಲೀಸರು, ಹಾಸನ ಜಿಲ್ಲೆ ಮಡೆನೂರು ಬಳಿ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆ ತಂದಿದ್ದಾರೆ. ಖಾಸಗಿ ಸುದ್ದಿವಾಹಿನಿಯ ಹಾಸ್ಯ ಕಾರ್ಯಕ್ರಮದಲ್ಲಿ ಪರಿಚಿತಳಾದ ಸಂತ್ರಸ್ತೆಯನ್ನು ಲೈಂಗಿಕವಾಗಿ ಮನು ಶೋಷಣೆ ಮಾಡಿದ್ದರು ಎಂದು ಆರೋಪಿಸಲಾಗಿದೆ.
ತಾನು ನಾಯಕನಾಗಿ ನಟಿಸಿ ಪ್ರಥಮ ಸಿನಿಮಾ ‘ಕುಲದಲ್ಲಿ ಕೀಳ್ಯಾವುದೋ’ ಶುಕ್ರವಾರ ಬೆಳ್ಳಿ ಪರದೆಯಲ್ಲಿ ತೆರೆ ಕಾಣುವ ಮುನ್ನ ಅತ್ಯಾಚಾರ ಆರೋಪ ಹೊತ್ತು ಮನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೆರೆಮನೆ ಸೇರಿದ್ದಾರೆ.
ದೂರಿನ ವಿವರ ಹೀಗಿದೆ:
2022ರ ನ.29 ರಂದು ಶಿಕಾರಿಪುರದ ಹೋಟೆಲ್ ರೂಮಿನಲ್ಲಿದ್ದಾಗ ನನಗೆ ಸಂಭಾವನೆ ನೀಡುವ ನೆಪದಲ್ಲಿ ರೂಮಿಗೆ ಬಂದು ನನ್ನ ಮೇಲೆ ಆತ್ಯಾಚಾರ ಮಾಡಿದ್ದರು. ಇದಾದ ಮೇಲೆ ಅದೇ ವರ್ಷದ ಡಿ.3 ರಂದು ನನ್ನ ಮನೆಗೆ ಬಂದು ಬಲವಂತದಿಂದ ನನಗೆ ತಾಳಿ ಕಟ್ಟಿದ್ದರು. ಆ ಮನೆಯಲ್ಲಿ ನನ್ನ ಮೇಲೆ ಹಲವು ಬಾರಿ ಆತ್ಯಾಚಾರ ಮಾಡಿದ್ದಾರೆ. ಈ ನಡುವೆ ನಾನು ಗರ್ಭವತಿಯಾದೆ. ಇದನ್ನು ತಿಳಿದು ಮನೆಗೆ ಬಂದು ನನಗೆ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದರು. ಇದಾದ ಮೇಲೆ ಮತ್ತೆ ನಾನು ಗರ್ಭವತಿಯಾದೆ. ಆಗಲೂ ಗರ್ಭಪಾತ ಮಾಡಿಸಿದರು ಎಂದು ದೂರಿದ್ದಾರೆ.
5 ವರ್ಷಗಳಿಂದ ಬನಶಂಕರಿ 3ನೇ ಹಂತದ ಕಾಮಾಕ್ಯ ಸಮೀಪ ವಾಸವಾಗಿದ್ದೆ. ನಂತರ ನಾಗಬಾವಿ ಬಳಿ ಮನೆಯನ್ನು ಮನು ಮಾಡಿಕೊಟ್ಟರು. 2018ನೇ ಸಾಲಿನಲ್ಲಿ ನನಗೆ ಖಾಸಗಿ ಕನ್ನಡ ವಾಹಿನಿಯ ‘ಕಾಮಿಡಿ ಕಿಲಾಡಿ’ ಕಾರ್ಯಕ್ರಮದಲ್ಲಿ ಮನು ಪರಿಚಯವಾದರು. ಬಳಿಕ ನಾವು ಇಬ್ಬರು ಸ್ನೇಹಿತರಾದ್ದೆವು. ಆ ವೇಳೆಗೆ ದಿವ್ಯಾ ಎಂಬುವರನ್ನು ಮನು ವಿವಾಹವಾಗಿದ್ದು, ಅವರಿಗೆ ಹೆಣ್ಣು ಮಗು ಸಹ ಇತ್ತು ಎಂದು ಸಂತ್ರಸ್ತೆ ಹೇಳಿದ್ದಾರೆ.
ಹೀಗಿರುವಾಗ ತರುವಾಯ ಅವರು ನಾಗರಬಾವಿ ಮನೆಗೆ ನನ್ನನ್ನು ಕರೆತಂದು ಇರಿಸಿದರು. ಆಗ ನನ್ನ ಮೇಲೆ ಆತ್ಯಾಚಾರ ಮಾಡಿ ಖಾಸಗಿ ವಿಡಿಯೋವನ್ನು ಪೋನ್‌ನಲ್ಲಿ ಮನು ಚಿತ್ರೀಕರಿಸಿಕೊಂಡರು. ನನ್ನ ಮೇಲೆ ಹಲ್ಲೆ ನಡೆಸಿ ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದರು. ಮನು ನಟಿಸಿದ ಚಲನಚಿತ್ರಕ್ಕೆ ಲಕ್ಷಾಂತರ ಹಣದ ಸಹಾಯ ಮಾಡಿದ್ದೇನೆ. ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ವಂಚಿಸಿದ ಮನು ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಂತ್ರಸ್ತೆ ಆಗ್ರಹಿಸಿದ್ದಾರೆ. ಈ ದೂರಿನ್ವಯ ಅತ್ಯಾಚಾರ ಪ್ರಕರಣ ದಾಖಲಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.