ಕನ್ನಡಪ್ರಭ ವಾರ್ತೆ ಬೆಳಗಾವಿ
ಮೇಲಿಂದ ಮೇಲೆ ಬರ ಬೀಳಲಿ, ಬರಗಾಲ ಬಂದರೆ ಸಾಲ ಮನ್ನಾ ಆಗುತ್ತದೆ ಎಂದು ರೈತರು ನಿರೀಕ್ಷೆ ಮಾಡುತ್ತಾರೆ ಎಂಬ ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ನೀಡಿರುವ ಉಡಾಫೆ ಹೇಳಿಕೆ ಖಂಡಿಸಿ ರೈತರು ಮಂಗಳವಾರ ಬೆಳಗಾವಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ಮಾಡಿದರು.ಗಣೇಶಪುರದಲ್ಲಿರುವ ಸಕ್ಕರೆ ಸಂಸ್ಥೆ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು, ರೈತರ ಪಾಲಿಗೆ ಶಿವಾನಂದ ಪಾಟೀಲ ಸತ್ತಿದ್ದಾನೆ ಎಂದು ಕಚೇರಿಗೆ ಭಂಡಾರ ತೂರಿದರು. ರೈತರ ಕೈಯಲ್ಲಿರುವ ಭಂಡಾರದ ಚೀಲಗಳನ್ನು ಕಸಿದುಕೊಳ್ಳಲು ಪೊಲೀಸರು ಮುಂದಾದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾನಿರತ ರೈತರ ನಡುವೆ ತಳ್ಳಾಟ, ನೂಕಾಟ ನಡೆದು, ವಾಗ್ವಾದವೂ ನಡೆಯಿತು. ರೈತರು ಸಕ್ಕರೆ ಸಂಸ್ಥೆಗೆ ಬೀಗ ಜಡಿಯಲು ಮುಂದಾದಾಗ, ಪೊಲೀಸರು ತಡೆದರು. ಈ ವೇಳೆ ಪೊಲೀಸರು ರೈತರನ್ನು ತಮ್ಮ ವಶಕ್ಕೆ ಪಡೆದುಕೊಂಡರು. ರೈತರು ಶಿವಾನಂದ ಪಾಟೀಲ ಸತ್ತಿದ್ದಾನೆ ಎಂದು ಬೊಬ್ಬೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಚೂನಪ್ಪ ಪೂಜಾರಿ ಮಾತನಾಡಿ, ಸಚಿವ ಶಿವಾನಂದ ಪಾಟೀಲ ರೈತರಿಗೆ ಅವಮಾನ ಮಾಡಿದ್ದಾರೆ. ಹಾಗಾಗಿ ನಾವು ಸಕ್ಕರೆ ಸಂಸ್ಥೆಗೆ ಭಂಡಾರ ಎರಚಿದ್ದೇವೆ. ರೈತರ ಬಗ್ಗೆ ನಾಲಿಗೆ ಹರಿದು ಬಿಟ್ಟ ಶಿವಾನಂದ ಪಾಟೀಲ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರೈತರ ಬಗ್ಗೆ ಪದೇ ಪದೆ ಅವಹೇಳನಕಾರಿ ಹೇಳಿಕೆ ನೀಡುತ್ತಲೇ ಇದ್ದಾರೆ. ಇಂತಹ ಬುದ್ದಿಗೇಡಿ ಹೇಳಿಕೆ ನೀಡಿ ರೈತರಿಗೆ ಅವಮಾನ ಮಾಡಿರುವ ಪಾಟೀಲ ಅವರಿಂದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಪಡೆಯಬೇಕು. ಇಲ್ಲದಿದ್ದರೆ, ಶಿವಾನಂದ ಪಾಟೀಲ ಎಲ್ಲಿ ಹೋಗುತ್ತಾರೋ ಅಲ್ಲಿ ನಾವು ಅವರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.