ಅತಿಥಿ ಉಪನ್ಯಾಸಕರ ಧರಣಿ ಸ್ಥಳಕ್ಕೆ ಶಾಸಕ ಯತ್ನಾಳ ಭೇಟಿ

KannadaprabhaNewsNetwork | Published : Dec 27, 2023 1:31 AM

ಸಾರಾಂಶ

ಧರಣಿ ನಿರತರ ಉಪನ್ಯಾಸಕರ ಅಹವಾಲು ಆಲಿಸಿದ ನಗರ ಶಾಸಕ ಬಸನಗೌಡ ಪಾಟೀಲ ಪ್ರತಿಭಟನಾನಿರತರಿಂದ ಮನವಿ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಧರಣಿ ಸತ್ಯಾಗ್ರಹ 34ನೇ ದಿನಕ್ಕೆ ಕಾಲಿರಿಸಿದ್ದು, ಧರಣಿ ಸ್ಥಳಕ್ಕೆ ಭೇಟಿ ನೀಡಿದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಧರಣಿ ನಿರತ ಅತಿಥಿ ಉಪನ್ಯಾಸಕರ ಅಹವಾಲು ಆಲಿಸಿದರು.

ಶಿಕ್ಷಣ ಕ್ಷೇತಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಅತಿಥಿ ಉಪನ್ಯಾಸಕರ ಬದುಕು ದುಸ್ತರವಾಗಿದೆ. ಕಡಿಮೆ ಗೌರವಧನದಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ. ಸೇವಾ ಭದ್ರತೆಯಂತೂ ಮರೀಚಿಕೆಯಾಗಿದೆ. ಹೀಗಾಗಿ ಸರ್ಕಾರಿ ಉಪನ್ಯಾಸಕರಿಗೆ ದೊರಕುವ ಎಲ್ಲ ಸೌಲಭ್ಯಗಳನ್ನು ಅತಿಥಿ ಉಪನ್ಯಾಸಕರಿಗೂ ವಿಸ್ತರಿಸಿ ಸೇವಾ ಭದ್ರತೆ ಒದಗಿಸಬೇಕು ಎಂದು ಸರ್ಕಾರದ ಗಮನ ಸೆಳೆಯಬೇಕು ಎಂದು ಧರಣಿ ನಿರತರು ಅಳಲು ತೋಡಿಕೊಂಡರು.

ಮನವಿ ಸ್ವೀಕರಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಶೈಕ್ಷಣಿಕ ಚಟುವಟಿಕೆಗಳಿಗೆ ಅತಿಥಿ ಉಪನ್ಯಾಸಕರು ನೀಡುತ್ತಿರುವ ಕೊಡುಗೆ ಅನನ್ಯ, ಹೀಗಾಗಿ ಈ ಎಲ್ಲ ನ್ಯಾಯಯುತವಾದ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒತ್ತಾಯಿಸುವೆ ಎಂದು ಭರವಸೆ ನೀಡಿದರು.

ಅತಿಥಿ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ಡಾ.ಆನಂದ ಕುಲಕರ್ಣಿ, ಸುರೇಶ ಡಬ್ಬಿ, ರಮೇಶ ಕಡೇಮನಿ, ಡಾ.ರಾಜು ಚವ್ಹಾಣ, ಎಂ.ಬಿ. ಪಾಟೀಲ, ರಮೇಶ ತೇಲಿ, ರಮೇಶ ನಾಗರಡ್ಡಿ, ರಾಜು ದಾಯಗೊಂಡ, ರೇಣುಕಾ ಹೆಬ್ಬಾಳ, ಸುರೇಖಾ ಪಾಟೀಲ, ಭಾರತಿ ಇನಾಮದಾರ, ಭಾರತಿ ಹಿರೇಮಠ, ಶಿಲ್ಪಾ ಉಕ್ಕಲಿ, ವೀಣಾ ಕಡಕೆ, ಭಾರತಿ ಹೊನವಾಡ, ಎಸ್.ಐ. ಯಂಭತ್ನಾಳ, ಎಲ್.ಎ. ಪಾಟೀಲ, ಎಂ.ಆರ್. ತಿಪಶೆಟ್ಟಿ, ಮಂಜುಳಾ ಭಾವಿಕಟ್ಟಿ, ಉಮೇಶ ಹಿರೇಮಠ, ಮಹಾಲಕ್ಷ್ಮೀ ಪಾಟೀಲ, ಭಾಗ್ಯಶ್ರೀ ಮೊರೆ, ಆನಂದ ಹಿರೇಮಠ, ಸುನೀಲ ಅಂಗಡಿ ಮುಂತಾದವರು ಇದ್ದರು.

Share this article