ವಸ್ತುಪ್ರದರ್ಶನದ ಶಾಶ್ವತ ಮಳಿಗೆ ನಿರ್ಮಿಸಲು ಶ್ರಮಿಸುವೆ

KannadaprabhaNewsNetwork | Published : Dec 27, 2023 1:31 AM

ಸಾರಾಂಶ

ಗೊಡಚಿ ವೀರಭದ್ರೇಶ್ವರ ಜಾತ್ರೆಯ ವಸ್ತು ಪ್ರದರ್ಶನ ಉದ್ಘಾಟಿಸಿ ಅಶೋಕ ಪಟ್ಟಣ ಮಾತನಾಡಿ ವಸ್ತುಪ್ರದರ್ಶನದ ಶಾಶ್ವತ ಮಳಿಗೆ ನಿರ್ಮಿಸಲು ಶ್ರಮಿಸುವೆ ಎಂದು ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಮುಂದಿನ ವರ್ಷದ ಗೋಡಚಿ ಜಾತ್ರೆಯೊಳಗಾಗಿ ವಸ್ತುಪ್ರದರ್ಶನಕ್ಕೆ ಶಾಶ್ವತ ಮಳಿಗೆ ನಿರ್ಮಿಸಲು ಶ್ರಮಿಸುತ್ತೇನೆ. ವಸ್ತು ಪ್ರದರ್ಶನವನ್ನು ಇನ್ನಷ್ಟು ಅಚ್ಚುಕಟ್ಟಾಗಿ ಮಾಡಲು ಎಲ್ಲರೂ ಶ್ರಮಿಸೋಣ ಎಂದು ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.

ತಾಲೂಕಿನ ಸುಕ್ಷೇತ್ರ ಗೊಡಚಿ ವೀರಭದ್ರೇಶ್ವರ ಜಾತ್ರೆಯ ಪ್ರಯುಕ್ತ ಜಿಲ್ಲಾ ಪಂಚಾಯತ ಬೆಳಗಾವಿ, ತಾಲೂಕು ಪಂಚಾಯತ ರಾಮದುರ್ಗ ಹಾಗೂ ಗ್ರಾಮ ಪಂಚಾಯತಿ ಗೋಡಚಿ ಸಹಯೋಗದಲ್ಲಿ ಏರ್ಪಡಿಸಿದ್ದ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು,

ಜಾತ್ರೆಗೆ ಬರುವ ಯಾತ್ರಿಕರು ವಸ್ತು ಪ್ರದರ್ಶನದಲ್ಲಿನ ಕೃಷಿ ಸಲಕರಣೆಗಳ, ತಂತ್ರಜ್ಞಾನದ ಮಾಹಿತಿ ಪಡೆದು, ಕೃಷಿಯಲ್ಲಿ ಅವುಗಳನ್ನು ಅಳವಡಿಸಿ ಹೆಚ್ಚು ಉತ್ಪಾದನೆಗೆ ಮಾಡಬೇಕು ಎಂದು ರೈತರಿಗೆ ಸಲಹೆ ನೀಡಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕುಮಾರ ಸಾಲಿ ಮಾತನಾಡಿ, ವಸ್ತು ಪ್ರದರ್ಶನ ಇನ್ನಷ್ಟು ಅಚ್ಚುಕಟ್ಟಾಗಿ ನಡೆಯಲು ತಾಲೂಕಿನ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಸಹಕಾರ ಮತ್ತು ಸಲಹೆ ಅಗತ್ಯವಿದೆ ಎಂದರು.

ಗ್ರಾಮದ ಹಿರಿಯ ಪತ್ರೆಪ್ಪ ಮಲ್ಲಾಪೂರ ಮಾತನಾಡಿ, ವೀರಭದ್ರೇಶ್ವರ ಆಶೀರ್ವಾದದಿಂದ ಜನತೆ ಆರೋಗ್ಯವಾಗಿದ್ದಾರೆ. ಶಾಸಕರು ಮುತವರ್ಜಿ ವಹಿಸಿ, ನೆನೆಗುದಿಗೆ ಬಿದ್ದಿರುವ ವೀರಭದ್ರೇಶ್ವರ ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಕಿಲ್ಲಾ ತೊರಗಲ್ ಗಚ್ಚಿನ ಹಿರೇಮಠದ ಶ್ರೀ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ರಾಮದುರ್ಗ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿನಿ ವೈಶಾಲಿ ಅಕ್ಕನವರು ಆತ್ಮಶುದ್ಧಿಗೆ ಪರಮಾತ್ಮನ ಜ್ಞಾನದ ಕುರಿತು ಮಾತನಾಡಿದರು. ಮುಪ್ಪಯ್ಯ ಶಾಸ್ತ್ರಿಗಳು ಹಿರೇಮಠ, ವಿರೇಶ ಹಿರೇಮಠ ನೇತೃತ್ವ ವಹಿಸಿದ್ದರು.

ಗ್ರಾಪಂ ಅಧ್ಯಕ್ಷೆ ಲಕ್ಕವ್ವ ವಗ್ಗರ ಅಧ್ಯಕ್ಷತೆ ವಹಿಸಿದ್ದರು. ವೀರಭದ್ರೇಶ್ವರ ದೇವಸ್ಥಾನದ ಧರ್ಮದರ್ಶಿ ಶ್ರೀಮಂತ ಎಸ್.ಪಿ ಶಿಂದೆ, ಗ್ರಾಪಂ ಉಪಾಧ್ಯಕ್ಷ ಶಿವಲಿಂಗಯ್ಯ ಪೂಜೇರ, ತಹಸೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಎಇ ಕಿರಣ ಸಣ್ಣಕ್ಕಿ, ತಾಲೂಕು ಮಟ್ಟದ ಅಧಿಕಾರಿ ಸಂಗೀತಾ ಕುರೇರ, ಶ್ರೀನಿವಾಸ್ ವಿಶ್ವಕರ್ಮ, ಎನ್.ಕೆ ನಿಜಗುಲಿ, ಶಿವಪ್ರಕಾಶ ಕರಡಿ, ಪರಶುರಾಮ ಪತ್ತಾರ, ಗಿರೀಶ ಪಾಟೀಲ, ಶಿವಕ್ಕ ಮಾದರ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಿ.ಕೆ.ಕೊಪ್ಪದ, ಮುಖಂಡ ರಾಯಪ್ಪ ಕತ್ತಿ, ಜಿ.ಬಿ. ರಂಗನಗೌಡ್ರ, ಬಾಳನಗೌಡ ಪಾಟೀಲ, ಬಸನಗೌಡ ದ್ಯಾಮನಗೌಡ್ರ, ನಾಗನಗೌಡ ಜಾಮದಾರ, ಸಂಜು ಹಳ್ಳಿ, ಈರನಗೌಡ ಪಾಟೀಲ ಗ್ರಾ.ಪಂ ಸದಸ್ಯರು ಸೇರಿದಂತೆ ಇತರರಿದ್ದರು.

Share this article