ಕನ್ನಡಪ್ರಭ ವಾರ್ತೆ ನಾಪೋಕ್ಲು
ಪ್ರತಿಯೊಬ್ಬ ಗುರುವೂ ತನ್ನ ನೋವು ಮರೆತು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಬಯಸುತ್ತಿರುತ್ತಾರೆ. ಅಂತಹ ಗುರುಗಳನ್ನು ವಂದಿಸಿ ಅಭಿನಂದಿಸಿದಾಗ ವಿದ್ಯಾರ್ಥಿಯ ಜೀವನ ಸಾರ್ಥಕವಾಗುತ್ತದೆ ಎಂದು ಮೈಸೂರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪಟ್ಟಡ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.ಮದೆನಾಡು ಗ್ರಾಮದ ಬೆಳಕು ಮಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸುವರ್ಣ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಸಮಾರೋಪದ ನುಡಿಗಳನ್ನಾಡಿದರು.
ವಿದ್ಯಾರ್ಥಿ ಎಷ್ಟು ಎತ್ತರಕ್ಕೆ ಏರುತ್ತಾನೋ ಅಷ್ಟೇ ವಿಧೇಯರಾಗಿ ಗುರುಗಳ ಮುಂದೆ ನಡೆದುಕೊಳ್ಳಬೇಕು. ಗುರುಗಳ ಮಾರ್ಗದರ್ಶನದಿಂದ ಜೀವನದಲ್ಲಿ ಎದುರಾಗುವ ಯಾವುದೇ ಸೋಲುಗಳನ್ನು ಹಿಮ್ಮೆಟ್ಟಿಸಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.ಶಾಲೆಯ ಸ್ಥಾಪಕ ಶಿಕ್ಷಕಿ ಗೌರಮ್ಮ ಸಮಾರಂಭವನ್ನು ಉದ್ಘಾಟಿಸಿದರು. ಮದೆಮಹೇಶ್ವರ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿ.ಆರ್. ಜೋಯಪ್ಪ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾದ ಮೇಲೆ ಕ್ರಮೇಣ ಜನರು ಬಡತನದಿಂದ ಹೊರಬಂದು ಜೀವನ ರೂಪಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.
ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಎನ್. ಎಸ್ ಪ್ರವೀಣ್, ರಾಘವೇಂದ್ರ, ಪತ್ರಕರ್ತ ಕೆ.ಎಲ್. ಗಿರೀಶ್ ವಿದ್ಯಾರ್ಥಿ ಜೀವನವನ್ನು ಸ್ಮರಿಸಿದರು.ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಬೈನೆರವನ ಇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಎನ್.ಟಿ. ಸೋಮಯ್ಯ, ಮದೆ ಮಹೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಎಂ.ಎಸ್. ಶಿವರಾವ್, ಬಿಆರ್‌ಸಿ ಮಂಜುಳಾ ಚಿತ್ರಾಪುರ, ಶಾಲೆಯ ಹಳೆ ವಿದ್ಯಾರ್ಥಿಗಳಾದ ಬಿ.ಎಂ. ಪ್ರಮೀಳಾ, ಧನಂಜಯ ಅಗೋಳಿಕಜೆ, ಕ್ಯಾಪ್ಟನ್ ಹುಲಿ ಮನೆ ಹರೀಶ್ ಕುಮಾರ್ ಅತಿಥಿಗಳಾಗಿ ಪಾಲ್ಗೊಂಡರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಮಲಾಕ್ಷಿ, ಶಾಲೆಯ ಮುಖ್ಯ ಶಿಕ್ಷಕಿ ಭಾಗ್ಯಲಕ್ಷ್ಮಿ, ಎಸ್‌ಡಿಎಂಸಿ ಅಧ್ಯಕ್ಷ ರಾಧಾಕೃಷ್ಣ , ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೈನೆರವನ ಯಶೋದಿನಿ, ಸದಸ್ಯರಾದ ರಾಮಯ್ಯ, ಸಜನ್, ಶಾಲಾ ಸಂಸ್ಥಾಪಕರ ಪುತ್ರ ಪಿ .ಆರ್ ರಮೇಶ್ ಹಾಜರಿದ್ದರು.ಶಾಲೆಯಲ್ಲಿ ಕಳೆದ 50 ವರ್ಷಗಳಲ್ಲಿ ಸೇವೆ ಸಲ್ಲಿಸಿದ ಸುಮಾರು 30ಕ್ಕೂ ಅಧಿಕ ಗುರುಗಳನ್ನು ಸನ್ಮಾನಿಸಲಾಯಿತು.
ಮದೆಮಹೇಶ್ವರ ಪ್ರೌಢಶಾಲೆಯ ಶಿಕ್ಷಕ ದಿ. ತೊತ್ತಿಯನ ಮಂದಣ್ಣ, ಬಿ.ಆರ್. ಜೋಯಪ್ಪ, ಎಂ.ಎಸ್ ಶಿವರಾಮ್ ಅವರನ್ನು ಸನ್ಮಾನಿಸಲಾಯಿತು. ನಾಡಿನ ಬೇರೆ ಬೇರೆ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಾಲೆಯ ಹಳೆ ವಿದ್ಯಾರ್ಥಿಗಳಾದ ಪಟ್ಟಡ ಶಿವಕುಮಾರ್, ಡಾ. ಪ್ರವೀಣ್ ಎನ್. ಎಸ್, ಡಾ. ರಾಘವೇಂದ್ರ, ಗಿರೀಶ್ ಕೆ. ಎಲ್, ಪ್ರಮೀಳಾ ಬಿ.ಎಂ., ಧನಂಜಯ ಅಗೋಳಿ ಕಜೆ, ಕ್ಯಾಪ್ಟನ್ ಹುಲಿ ಮನೆ ಡಿ. ಹರೀಶ್ ಕುಮಾರ್ ,ಕಿರಿಯ ಪ್ರತಿಭೆಗಳಾದ ರಾಷ್ಟ್ರಮಟ್ಟದ ತ್ರೋಬಾಲ್ ಆಟಗಾರ್ತಿ ಅನುಶ್ರೀ ಬಿ.ಎಸ್.,ಯೋಗ ಪಟು ಸಿಂಚನ ಕೀರ್ತಿ ಕುಮಾರ್ ಅವರನ್ನು ಅಭಿನಂದಿಸಲಾಯಿತುಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಕ್ರೀಡಾಕೂಟಕ್ಕೆ ಮದೆ ಮಾಧುರಪ್ಪ ದೇವಾಲಯದ ಆವರಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಮಲಾಕ್ಷಿ ಚಾಲನೆ ನೀಡಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು.
ಸುವರ್ಣ ಮಹೋತ್ಸವ ಸಮಿತಿ ಪದಾಧಿಕಾರಿಗಳಾದ ಸುರೇಶ್, ತಾರಾನಾಥ್ ಬಿ.ಎಸ್, ಪುಂಡರಿಕ ಎಂ.ಎಲ್, ಕೃಷ್ಣಪ್ಪ ಬಿ.ಜೆ. ಇನ್ನಿತರರು ಪಾಲ್ಗೊಂಡಿದ್ದರು.50 ವರ್ಷಗಳ ಅವಧಿಯ ಶಿಕ್ಷಕರು ವಿದ್ಯಾರ್ಥಿಗಳು ಒಂದೆಡೆ ಕಲೆತು ತಮ್ಮ ಹಳೆಯ ದಿನಗಳ ಮೆಲುಕು ಹಾಕುತ್ತಾ ಫೋಟೋ ತೆಗೆದು ಸಂಭ್ರಮಿಸಿದರು.