ಗದಗ: ಉತ್ತರ ಕರ್ನಾಟಕದ ಅಭಿವೃದ್ಧಿಯ ದೃಷ್ಟಿಯಿಂದಲೇ ಪ್ರತಿವರ್ಷವೂ ನೂರಾರು ಕೋಟಿ ಖರ್ಚು ಮಾಡಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಸಂಪೂರ್ಣ ವ್ಯರ್ಥವಾಗಿದೆ. ಇದೊಂದು ಅಭಿವೃದ್ಧಿ ಶೂನ್ಯ ಹಾಗೂ ದ್ವೇಷದ ರಾಜಕಾರಣ ಮಾಡುವ ತುಘಲಕ್ ಸರ್ಕಾರವಾಗಿದೆ ಎಂದು ನರಗುಂದ ಶಾಸಕ, ಮಾಜಿ ಸಚಿವ ಸಿ.ಸಿ. ಪಾಟೀಲ ಆರೋಪಿಸಿದರು.
ಸದಸ್ಯರ ಬೇಡಿಕೆಗಳಿಗೆ ಸ್ಪಂದಿಸಲಿಲ್ಲ. ನಯಾಪೈಸೆ ಅನುದಾನ ಘೋಷಿಸಲಿಲ್ಲ. ಕೋಟ್ಯಂತರ ರುಪಾಯಿ ಖರ್ಚು ಮಾಡಿ ನಡೆಸಿದ ಅಧಿವೇಶನದಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಸುಮಾರು ₹80 ಕೋಟಿ ಮೌಲ್ಯದ 5 ಎಕರೆ ಅತಿಕ್ರಮಿತ ಜಾಗವನ್ನು ಸರ್ಕಾರ ವಶಪಡಿಸಿಕೊಂಡಿರುವುದು ಸ್ವಾಗತಾರ್ಹ. ಆದರೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಈ ಕಾರ್ಯಾಚರಣೆಯನ್ನು ಉತ್ತರ ಪ್ರದೇಶ ಮಾದರಿಯ ಬುಲ್ಡೋಜರ್ ಸರ್ಕಾರ ಎಂದು ಟೀಕಿಸಿರುವುದು ಸರಿಯಲ್ಲ. ದೇಶದ್ರೋಹಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಉತ್ತರ ಪ್ರದೇಶದ ಕ್ರಮಕ್ಕೂ, ಇಲ್ಲಿನ ಅತಿಕ್ರಮಣ ತೆರವಿಗೂ ಹೋಲಿಕೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರ ಕರೆ ಬರುತ್ತಿದ್ದಂತೆ ಸಿದ್ದರಾಮಯ್ಯ ಮಾತಿನ ಧಾಟಿ ಬದಲಾಗಿದೆ. ಕೇವಲ 400 ಜನರ ಓಲೈಕೆಗಾಗಿ ರಾಜ್ಯದ 6 ಕೋಟಿ ಜನರ ಹಿತಾಸಕ್ತಿಯನ್ನು ಬಲಿ ಕೊಡಲಾಗುತ್ತಿದೆ. ರಾಜ್ಯ ಸರ್ಕಾರವನ್ನು ನಡೆಸುತ್ತಿರುವುದು ಸಿದ್ದರಾಮಯ್ಯನವರೋ ಅಥವಾ ಸೂಪರ್ ಸಿಎಂ ವೇಣುಗೋಪಾಲರಾ? ಕೇರಳ ಸಿಎಂ ಪಿಣರಾಯಿ ವಿಜಯನ್ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಲೇವಡಿ ಮಾಡಿದರು.
ರಾಜ್ಯದ ಆಡಳಿತದಲ್ಲಿ ಕೆ.ಸಿ. ವೇಣುಗೋಪಾಲ್ ಅವರ ಹಸ್ತಕ್ಷೇಪ ಹೆಚ್ಚಾಗಿದೆ. ಅವರು ಈಗ ಕರ್ನಾಟಕದ ಸೂಪರ್ ಸಿಎಂ ಆಗಿದ್ದಾರೆ. ಈ ಸರ್ಕಾರದಲ್ಲಿ ಆಡಳಿತವೂ ಇಲ್ಲ. ಜನಪರ ಕಾಳಜಿಯೂ ಇಲ್ಲ. ದಿನ ಬೆಳಗಾದರೆ ಸಿಎಂ ಕುರ್ಚಿ ಉಳಿಸಿಕೊಳ್ಳುವ ಚರ್ಚೆಯೇ ನಡೆಯುತ್ತಿದೆ. ಕೇರಳದ ಅಲ್ಪಸಂಖ್ಯಾತರನ್ನು ಓಲೈಸಲು ಹೋಗಿ ದಕ್ಷಿಣದ ರಾಜ್ಯಗಳ ನಡುವೆ ಜಗಳ ತಂದಿಡುತ್ತಿದ್ದಾರೆ ಎಂದು ಸಿ.ಸಿ. ಪಾಟೀಲ ಆರೋಪಿಸಿದರು.ಪೊಲೀಸ್ ವೈಫಲ್ಯ: ರಾಜ್ಯದಲ್ಲಿ ಡ್ರಗ್ ಮಾಫಿಯಾ ನೋಡಿದರೆ ಗಾಬರಿ ಮೂಡಿಸುತ್ತದೆ. ಮಹಾರಾಷ್ಟ್ರ ಪೊಲೀಸರು ಇಲ್ಲಿಗೆ ಬಂದು ಎರಡು ಬಾರಿ ಡ್ರಗ್ ಮಾಫಿಯಾ ಪತ್ತೆ ಮಾಡುತ್ತಾರೆ ಎಂದರೆ ನಮ್ಮ ಪೊಲೀಸರು ಮತ್ತು ಗುಪ್ತಚರ ವಿಭಾಗ ಏನು ಮಾಡುತ್ತಿದೆ? ಅವರ ಕೈಯನ್ನು ಯಾರು ಕಟ್ಟಿ ಹಾಕಿದ್ದಾರೆ ಎನ್ನುವ ಅನುಮಾನ ಮೂಡುತ್ತದೆ. ಡ್ರಗ್ ಪೆಡ್ಲರ್ ಮತ್ತು ಕೋಟ್ಯಂತರ ರು. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಗೃಹ ಸಚಿವರು ಸದನದಲ್ಲಿ ಉತ್ತರ ನೀಡಿದ್ದಾರೆ. ಆದರೆ ಡ್ರಗ್ ತಯಾರಕರನ್ನು ಹಿಡಿಯುತ್ತಿಲ್ಲ. ಇದೆಂಥ ವಿಪರ್ಯಾಸ ಎಂದು ಸರ್ಕಾರವನ್ನು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಪ್ರಧಾನ ಕಾರ್ಯದರ್ಶಿ ಲಿಂಗರಾಜಗೌಡ ಪಾಟೀಲ, ಮುಖಂಡರಾದ ಎಂ.ಎಸ್ . ಕರಿಗೌಡ್ರ, ಸಿದ್ದಪ್ಪ ಪಲ್ಲೇದ, ವಿಜಯಲಕ್ಷ್ಮೀ ಮಾನ್ವಿ, ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ, ಪ್ರಶಾಂತ ನಾಯ್ಕರ್, ಶಿವರಾಜಗೌಡ ಹಿರೇಮನಿ ಪಾಟೀಲ ಇತರರು ಉಪಸ್ಥಿತರಿದ್ದರು.ಬೆಳಗ್ಗೆ 6 ಕ್ಕೆ ಬಾರ್ ಒಪನ್ ಅಂತೆಹೊಸ ವರ್ಷಾಚರಣೆಗೆ ಬೆಂಗಳೂರಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಿರುವುದು ತೀರಾ ಹಾಸ್ಯಾಸ್ಪದ ಸಂಗತಿಯಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.
ಹೊಸ ವರ್ಷಾಚರಣೆ ದಿನ ತಡರಾತ್ರಿಯವರೆಗೂ ಮದ್ಯ ಮಾರಾಟಕ್ಕೆ ಅವಕಾಶ ಕೊಡುತ್ತಾರೆ. ರಾತ್ರಿ ಬರುವಾಗ ಊದಿಸಿ ಟೆಸ್ಟ್ ಮಾಡಿ ಕುಡಿದು ರೈಡ್ ಮಾಡುತ್ತೀರಾ ಎಂದು ದಂಡ ಹಾಕುತ್ತಾರೆ ಎಂದು ವ್ಯಂಗ್ಯವಾಡಿದರು.