ಕೊಪ್ಪಳ: ಬಿಎಸ್ ಪಿಎಲ್ ಕಾರ್ಖಾನೆ ಸ್ಥಾಪನೆ ಕೈಬಿಡಬೇಕು ಮತ್ತು ಕೊಪ್ಪಳಕ್ಕಿರುವ ಕಾರ್ಖಾನೆ ಗೋಳನ್ನು ನಿಗಿಸಬೇಕು ಎಂದು ಆಗ್ರಹಿಸಿ ಬೆಳಗಾವಿ ಸುರ್ವಣ ಸೌಧದೆದರು ಕೊಪ್ಪಳ ಬಚಾವೋ ಆಂದೋಲನ ಸಮಿತಿ ಹಾಗೂ ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ಸಮಿತಿ ಮಂಗಳವಾರ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಈಗಾಗಲೇ ತಜ್ಞರ ಸಮಿತಿ ಅಧ್ಯಯನ ಐಐಎಸ್ಸಿ ಮಾಡಿದೆ ಎಂದು ಹೇಳಿದ್ದು, ಅನುಮಾನ ಹುಟ್ಟಿಸುತ್ತದೆ. ತಜ್ಞರ ಸಮಿತಿಯಲ್ಲಿ ಸ್ಥಳೀಯ ಬಾಧಿತರ ಪ್ರತಿನಿಧಿಗಳು, ಹೋರಾಟ ಸಮಿತಿ ಮುಖಂಡರು ಒಳಗೊಂಡಿರಬೇಕು ಎಂದು ಆಗ್ರಹಿಸಲಾಯಿತು.
ಬಲ್ಡೋಟಾ ವಿಸ್ತರಣೆ ಈ ಕೂಡಲೇ ನಿಲ್ಲಬೇಕು ಎಂದು ಘೋಷಣೆ ಕೂಗಿದಾಗ ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಸಮಾಧಾನಪಡಿಸಲು ಮುಂದಾದಾಗ ಸಚಿವ ಶಿವರಾಜ ತಂಗಡಗಿ ಅವರ ನಡೆ ಖಂಡಿಸಿ ಕೈಗಾರಿಕಾ ಮಂತ್ರಿಗಳಿಗೆ ಮೊದಲು ತಿಳಿ ಹೇಳಿ, ಅಧಿವೇಶನದಲ್ಲಿ ಮಾತನಾಡಿ ಎಂದು ಒತ್ತಡ ಹಾಕಲಾಯಿತು.ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅಲ್ಲಮಪ್ರಭು ಬೆಟ್ಟದೂರು, ನಗರದ ಹತ್ತಿರ ಬಲ್ಡೋಟಾ (ಬಿ.ಎಸ್.ಪಿ.ಎಲ್) ಸೇರಿದಂತೆ ತಾಲೂಕಿನ ನಾಲ್ಕು ಬೃಹತ್ ಕಾರ್ಖಾನೆಗಳ ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗೆ ಅನುಮತಿ ಕೊಡಬಾರದು, ತುಂಗಭದ್ರಾ ವಿಷಗೊಳಿಸುವ 28 ಕಾರ್ಖಾನೆ ಬಂದ್ ಮಾಡಬೇಕು, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತವಾಗಿಸಬೇಕು ಎಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಅಧಿವೇಶನ ಅಂಗವಾಗಿ ಬೆಳಗಾವಿಯಲ್ಲಿ ಧರಣಿ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈಗ ಕೊಪ್ಪಳ ಹತ್ತಿರ ₹54 ಸಾವಿರ ಕೋಟಿ ವೆಚ್ಚದ ಕಾರ್ಖಾನೆ ಆರಂಭವಾದರೆ ಒಂದುವರೆ ಲಕ್ಷ ಜನರ ಬದುಕು ಸಂಕಷ್ಟಕ್ಕೆ ಈಡಾಗಲಿದೆ. ಈ ಹಿಂದೆ ಸದನದಲ್ಲಿ ಕೈಗಾರಿಕಾ ಸಚಿವರು ಮಾಲಿನ್ಯದ ಕುರಿತು ತಂತ್ರಜ್ಞರ ಸಮಿತಿಯಿಂದ ಅಧ್ಯಯನ ಆಗಿದೆ ಎಂದು ಹೇಳಿದ್ದಾರೆ. ಆದರೆ ಅಧ್ಯಯನ ಸಂದರ್ಭದಲ್ಲಿ ಬಾಧಿತ ಹಳ್ಳಿಗಳ ಜನ ಹಾಗೂ ನಮ್ಮ ಹೋರಾಟ ವೇದಿಕೆಯ ಪ್ರತಿನಿಧಿಗಳಿಲ್ಲದೆ ಪಾರದರ್ಶಕವಾಗಿ ಅಧ್ಯಯನ ನಡೆಸಿರಲು ಸಾಧ್ಯವಿಲ್ಲ ಎಂದು ಆರೋಪಿಸಿದರು.
ಮಂಗಳೇಶ ರಾಠೋಡ, ಹನಮಂತ ಕಟ್ಟಗಿ, ಮಹಾದೇವಪ್ಪ ಮಾವಿನಮಡು, ಚಾರಣ ಬಳಗದ ಚಂದ್ರಗೌಡ ಪಾಟೀಲ, ಶಿವಪ್ಪ ಹಡಪದ, ರಾಜ್ಯ ರೈತ ಸಂಘದ ಬಸವರಾಜ ಹೂಗಾರ, ವೀರಣ್ಣ ನಿಂಗೋಜಿ, ಸದಾಶಿವ ಮುದ್ದಾಬಳ್ಳಿ, ಪ್ರಕಾಶ ಮೇದಾರ್, ಹೂಗಾರ ಸಂಘದ ಸತೀಶ ಹೂಗಾರ, ಕುರಿಗಾರ ಸಂಘದ ಹನಮಂತಪ್ಪ ಚಿಂಚಲಿ, ಭೀಮಪ್ಪ ಯಲಬುರ್ಗಾ ಇತರರು ಭಾಗವಹಿಸಿ ಅಧಿವೇಶನದ ಧರಣಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.