ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸ್ಪರ್ಧೆಗೆ ಸ್ಥಳೀಯ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಉಂಟಾಗಿದ್ದ ಭಿನ್ನಮತವನ್ನು ಶಮನಗೊಳಿಸುವಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.
ಅತೃಪ್ತ ನಾಯಕರ ಮನವೊಲಿಸಲು ಮಂಗಳವಾರ ರಾತ್ರಿ ಬೆಳಗಾವಿಗೆ ಆಗಮಿಸಿದ್ದ ಯಡಿಯೂರಪ್ಪ ಅವರು ನಗರದ ಹೋಟೆಲೊಂದರಲ್ಲಿ ಬಿಜೆಪಿ ನಾಯಕರ ಜೊತೆಗೆ ಮಹತ್ವದ ಸಭೆ ನಡೆಸಿದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಗೆಲುವಿಗಾಗಿ ಸ್ಥಳೀಯ ನಾಯಕರಿಗೆ ಟಾಸ್ಕ್ ನೀಡಿದ್ದಾರೆ.
ಪಕ್ಷದಲ್ಲಿನ ಭಿನ್ನಮತ, ಅಸಮಾಧಾನ, ಬಣ ರಾಜಕೀಯ ಮರೆತು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕು ಎಂದು ಸೂಚನೆ ನೀಡಿದ್ದಾರೆ. ಈ ವೇಳೆ ಜಿಲ್ಲಾ ನಾಯಕರು ಪಕ್ಷದ ಗೆಲುವಿನ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ಮರಾಠ ಮತಗಳನ್ನು ಗಟ್ಟಿಗೊಳಿಸಬೇಕು ಎಂದು ಯಡಿಯೂರಪ್ಪ ಇದೇ ವೇಳೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಜಾರಕಿಹೊಳಿ ಕುಟುಂಬ ಗೈರು: ಬೆಳಗಾವಿ ಬಿಜೆಪಿ ನಾಯಕರ ಸಭೆಗೆ ಮಾಜಿ ಸಚಿವ, ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸಭೆಗೆ ಗೈರಾಗಿದ್ದರು.
ಸಂಸದೆ ಮಂಗಲ ಅಂಗಡಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ, ರಾಜ್ಯಸಭಾ ಸದಸ್ಯಈರಣ್ಣ ಕಡಾಡಿ, ಶಾಸಕ ಅಭಯ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕರಾದ ಸಂಜಯ ಪಾಟೀಲ, ಜಗದೀಶ ಮೆಟಗುಡ್ಡ, ವಿಶ್ವನಾಥ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.
ಬೆಳಗಾವಿ ಬಿಜೆಪಿ ಟಿಕೆಟ್ ಶೆಟ್ಟರ್ ಅವರಿಗೆ ಘೋಷಣೆಯಾಗುತ್ತಿದ್ದಂತೆ ಹೊರಗಿನ ಅಭ್ಯರ್ಥಿ ವಿಚಾರದಲ್ಲಿ ಜಿಲ್ಲಾ ಬಿಜೆಪಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಗೋ ಬ್ಯಾಕ್ ಶೆಟ್ಟರ್ ಅಭಿಯಾನ ಕೂಡ ತೀವ್ರವಾಗಿತ್ತು.
ವಲಸಿಗರ ಬದಲು ಸ್ಥಳೀಯ ಆಕಾಂಕ್ಷಿಗಳಿಗೆ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರ ಮೇಲೆ ಅತೃಪ್ತ ಬಿಜೆಪಿ ನಾಯಕರು ಒತ್ತಡ ಹೇರಿದ್ದರು. ಸ್ಥಳೀಯ ನಾಯಕರ ವಿರೋಧದ ನಡುವೆಯೂ ಶೆಟ್ಟರ್ ಅವರಿಗೆ ಬಿಜೆಪಿ ಮಣೆಹಾಕಿತು.
ಇದು ಸ್ಥಳೀಯ ನಾಯಕರನ್ನು ಕೆರಳಿಸುವಂತೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಯಡಿಯೂರಪ್ಪ ಅವರು ಬೆಳಗಾವಿಗೆ ಭೇಟಿ ನೀಡಿ ಎಲ್ಲರ ಅತೃಪ್ತಿ ಶಮನಗೊಳಿಸಿದ್ದಾರೆ.