ಧಾರವಾಡ: ಇಲ್ಲಿನ ಉದಯ ಹಾಸ್ಟೆಲ್ ಬಳಿ ಕವಿವಿ ಜಾಗೆಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ದೀನದಯಾಳ ಉಪಾದ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯಗಳ ಕಾಮಗಾರಿಯನ್ನು ಶಾಸಕ ಅರವಿಂದ ಬೆಲ್ಲದ ವೀಕ್ಷಿಸಿದರು.
ಎಲ್ಲ ಜಾತಿಯ ವಿದ್ಯಾರ್ಥಿಗಳಿಗೆ ಒಂದೇ ಹಾಸ್ಟೆಲ್‌ನಲ್ಲಿ ಅವಕಾಶ ಕಲ್ಪಿಸಿರುವುದರಿಂದ ಭಾತೃತ್ವ ಬೆಸೆಯಲು ಸಾಧ್ಯ. ಈ ಆಶಯದೊಂದಿಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಮೇಲೆ ಒತ್ತಡ ತಂದು ಮಂಜೂರಾತಿ ಪಡೆಯಲಾಗಿತ್ತು. ರಾಜ್ಯದಲ್ಲಿ ನಿರ್ಮಿಸಲಾಗುತ್ತಿರುವ ಆರು ಹಾಸ್ಟೆಲ್‌ಗಳಲ್ಲಿ ಧಾರವಾಡ ಕೂಡ ಒಂದು. ಇದೀಗ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ನಗರದ ಮಧ್ಯ ಭಾಗದಲ್ಲಿರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಬೆಲ್ಲದ ಹೇಳಿದರು.
ಕವಿವ ಸಂಘದ ಪರ ಒತ್ತಡ: ಇದೇ ಸಂದರ್ಭದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಜಾಗೆ, ಅಗತ್ಯ ಅನುದಾನ ಪಡೆಯುವುದು ಸೇರಿದಂತೆ ಇತರ ಬೇಡಿಕೆಗಳಿಗಾಗಿ ಸರ್ಕಾರದ ಮೇಲೆ ಒತ್ತಡ ತರುವುದಾಗಿ ಬೆಲ್ಲದ ತಿಳಿಸಿದರು. ಮೈಸೂರು ಮಹಾರಾಜರು ಕೊಟ್ಟ ಆರ್ಥಿಕ ನೆರವಿನಿಂದ ಇದು ಆರಂಭವಾಗಿದೆ. ಅನೇಕ ಮಹನೀಯರು ಸಂಘವನ್ನು ಅತಿ ಕಾಳಜಿಯಿಂದ ಮುನ್ನಡೆಸುತ್ತಿದ್ದಾರೆ. ಇಂತಹ ಸಂಘಕ್ಕೆ ಅಗತ್ಯವಿರುವ ಆರ್ಥಿಕ ನೆರವು ಒದಗಿಸುವುದು ಸರ್ಕಾರದ ಹೊಣೆ. ಈ ಬಗ್ಗೆ ಎರಡು ಬಾರಿ ಸದನದಲ್ಲಿಯೂ ತಾವು ಆಗ್ರಹಿಸಿದ್ದೇವೆ. ಸಂಘದ ಬೇಡಿಕೆಗಳಿಗಾಗಿ ಪ್ರಯತ್ನ ಮಾಡುತ್ತೇನೆ ಎಂದರು.ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ವಿಷ್ಣುಕಾಂತ ಕೊರ್ಲಹಳ್ಳಿ, ಜ್ಯೋತಿ ಪಾಟೀಲ ಇತರರು ಇದ್ದರು.