ಮಹಾಶಿವರಾತ್ರಿಗೆ ಗಣಿಜಿಲ್ಲೆ ಬಳ್ಳಾರಿ ಸಜ್ಜು

KannadaprabhaNewsNetwork |  
Published : Feb 26, 2025, 01:03 AM IST
ಮಹಾಶಿವರಾತ್ರಿ ಅಂಗವಾಗಿ ಬಳ್ಳಾರಿಯ ಶ್ರೀಕೋಟೆ ಮಲ್ಲೇಶ್ವರಸ್ವಾಮಿ ದೇವಸ್ಥಾನ ಮುಂಭಾಗ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವುದು ಕಂಡು ಬಂತು.  | Kannada Prabha

ಸಾರಾಂಶ

ಶಿವನನ್ನು ಆರಾಧಿಸುವ ವಿಶೇಷ ದಿನವಾದ ಮಹಾಶಿವರಾತ್ರಿಗೆ ಗಣಿ ಜಿಲ್ಲೆ ಬಳ್ಳಾರಿ ಸಜ್ಜುಗೊಂಡಿದೆ. ಹಬ್ಬದ ಹಿನ್ನೆಲೆ ಜಿಲ್ಲೆಯ ಶಿವನ ದೇವಾಲಯಗಳಲ್ಲಿ ಹಬ್ಬದ ಸಿದ್ಧತೆಗಳು ನಡೆಯುತ್ತಿದ್ದು, ಶಿವಭಕ್ತರು ಮಹಾಶಿವರಾತ್ರಿಯ ಜಾಗರಣೆಗೆ ಅಣಿಯಾಗುತ್ತಿದ್ದಾರೆ.

ಎಲ್ಲೆಲ್ಲೋ ಶಿವನಾಮ ಸ್ಮರಣೆಕನ್ನಡಪ್ರಭ ವಾರ್ತೆ ಬಳ್ಳಾರಿ

ಶಿವನನ್ನು ಆರಾಧಿಸುವ ವಿಶೇಷ ದಿನವಾದ ಮಹಾಶಿವರಾತ್ರಿಗೆ ಗಣಿ ಜಿಲ್ಲೆ ಬಳ್ಳಾರಿ ಸಜ್ಜುಗೊಂಡಿದೆ. ಹಬ್ಬದ ಹಿನ್ನೆಲೆ ಜಿಲ್ಲೆಯ ಶಿವನ ದೇವಾಲಯಗಳಲ್ಲಿ ಹಬ್ಬದ ಸಿದ್ಧತೆಗಳು ನಡೆಯುತ್ತಿದ್ದು, ಶಿವಭಕ್ತರು ಮಹಾಶಿವರಾತ್ರಿಯ ಜಾಗರಣೆಗೆ ಅಣಿಯಾಗುತ್ತಿದ್ದಾರೆ.

ನಗರದ ಆರಾಧ್ಯದೈವ ಶ್ರೀಕೋಟೆ ಮಲ್ಲೇಶ್ವರಸ್ವಾಮಿ, ಪಾರ್ವತಿನಗರದ ಅನಾದಿಲಿಂಗೇಶ್ವರ, ಬೆಂಗಳೂರು ರಸ್ತೆಯ ನಗರೇಶ್ವರಸ್ವಾಮಿ, ತೇರುಬೀದಿಯ ನೀಲಕಂಠೇಶ್ವರಸ್ವಾಮಿ ಸೇರಿದಂತೆ ವಿವಿಧ ಶಿವನ ದೇವಾಲಯಗಳು ಶಿವರಾತ್ರಿ ಆಚರಣೆಗೆ ಸಜ್ಜಾಗಿವೆ. ದೇವರ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸುವುದರಿಂದ ದೇವಸ್ಥಾನ ಆಡಳಿತ ಮಂಡಳಿಗಳು ಪೂರಕ ಸಿದ್ಧತೆ ಮಾಡಿಕೊಂಡಿವೆ. ಬೆಳಗಿನ ಜಾವ 5 ಗಂಟೆಯಿಂದಲೇ ಶಿವನ ದೇವಾಲಯಗಳಲ್ಲಿ ಶಿವಲಿಂಗಪೂಜೆ, ರುದ್ರಾಭಿಷೇಕ, ಪಂಚಾಭಿಷೇಕ, ಕ್ಷೀರಾಭಿಷೇಕ ಪೂಜೆಗಳು ನಡೆಯಲಿದ್ದು, ಶಿವನ ಮೂರ್ತಿಯನ್ನು ಬಿಲ್ವಪತ್ರೆಗಳಿಂದ ವಿಶೇಷವಾಗಿ ಅಲಂಕರಿಸಲಾಗುತ್ತಿದೆ. ವಿವಿಧ ಭಜನಾ ತಂಡಗಳು ದೇವಾಲಯಗಳಲ್ಲಿ ಭಜನೆ, ಪ್ರಸಾದ ವಿನಿಯೋಗ ನಡೆಯಲಿವೆ. ಹಬ್ಬದ ಹಿನ್ನೆಲೆ ದೇವಸ್ಥಾನಗಳನ್ನು ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿದೆ.

ಇನ್ನು ಗ್ರಾಮೀಣ ಪ್ರದೇಶದಲ್ಲೂ ಹಬ್ಬದ ಸಂಭ್ರಮ ಮನೆಮಾಡಿದೆ. ಗ್ರಾಮೀಣ ಭಾಗದ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅನೇಕ ದೇವಸ್ಥಾನಗಳಲ್ಲಿ ನಡೆಯುತ್ತಿರುವ ಶಿವಪುರಾಣವು ಬುಧವಾರ ಮಹಾಮಂಗಳಗೊಳ್ಳಲಿದೆ. ಶಿವರಾತ್ರಿ ನಿಮಿತ್ತ ನಗರದ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಹೂವು, ಹಣ್ಣು, ವಿವಿಧ ಪೂಜಾ ಸಾಮಗ್ರಿಗಳ ಖರೀದಿ ಪ್ರಕ್ರಿಯೆ ಕಂಡು ಬಂತು. ಇಲ್ಲಿನ ಬೆಂಗಳೂರು ರಸ್ತೆ, ಬ್ರಾಹ್ಮಣಬೀದಿ, ಶ್ರೀಕನಕ ದುರ್ಗಮ್ಮ ದೇವಸ್ಥಾನದ ಬಳಿಯ ಮೈದಾನ ಸೇರಿದಂತೆ ನಾನಾ ಕಡೆ ಹೂವು, ಹಣ್ಣುಗಳ ಖರೀದಿಯಲ್ಲಿ ಭಕ್ತರು ತೊಡಗಿಸಿಕೊಂಡಿದ್ದರು.

ಇಂದು ಪಂಚಾಮೃತ, ಬಿಲ್ವಪತ್ರೆ ವಿತರಣೆ:

ಶಿವರಾತ್ರಿ ಹಿನ್ನೆಲೆ ಹಚ್ಚೊಳ್ಳಿಯ ಶ್ರೀ ಆರಾಧ್ಯ ರಂಗಬಳಗದಿಂದ ಪ್ರತಿವರ್ಷದಂತೆ ಈ ಬಾರಿಯೂ ಶಿವಭಕ್ತರಿಗೆ ಪಂಚಾಮೃತ ಹಾಗೂ ಬಿಲ್ವಪತ್ರೆಯನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಫೆ.26ರಂದು ಬೆಳಗ್ಗೆ 9 ಗಂಟೆಗೆ ನಗರದ ಶ್ರೀಕನಕ ದುರ್ಗಮ್ಮ ದೇವಸ್ಥಾನ ಬಳಿ ವಿತರಣೆ ಕಾರ್ಯ ನಡೆಯಲಿದ್ದು, ಭಕ್ತರು ಪ್ರಯೋಜನ ಪಡೆದುಕೊಳ್ಳುವಂತೆ ಸಂಘಟಕರು ಕೋರಿದ್ದಾರೆ.

ನಗರದ ದೊಡ್ಡ ಮಾರುಕಟ್ಟೆ ಬಳಿ ನವ ಕರ್ನಾಟಕ ಯುವಶಕ್ತಿ ಸಂಘಟನೆ ಮಹಾರಾತ್ರಿ ಮನರಂಜನೆ ಕಾರ್ಯಕ್ರಮ ಹಮ್ಮಿಕೊಂಡಿದೆ. ನಾಡಿನ ಖ್ಯಾತ ಕಲಾವಿದರು ಪಾಲ್ಗೊಂಡ ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ವಿವಿಧ ಶಿವನ ದೇವಸ್ಥಾನಗಳಲ್ಲಿ ಇಡೀ ರಾತ್ರಿ ಭಜನೆ, ಹರಿಕಥೆ ಹಾಗೂ ಶಿವಮಹಾತ್ಮೆ ಕುರಿತು ಉಪನ್ಯಾಸಗಳು ಜರುಗಲಿವೆ. ಜಿಲ್ಲೆಯ ನಾನಾ ಕಡೆಗಳಲ್ಲಿ ವಿವಿಧ ಸಂಘಟನೆಗಳು ಶಿವರಾತ್ರಿ ಅಂಗವಾಗಿ ಇಡೀ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿವೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ