ಬಳ್ಳಾರಿ: ನಗರದಲ್ಲಿನ ಶಾಸಕ ಗಾಲಿ ಜನಾರ್ದನ ರೆಡ್ಡಿ ನಿವಾಸದ ಎದುರು ನಡೆದ ಬ್ಯಾನರ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಭಾನುವಾರ ತನಿಖೆ ಆರಂಭಿಸಿದರು.
ಬಳಿಕ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಿಐಡಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಘಟನೆಯ ದಿನದಂದು ನಡೆದ ಗಲಾಟೆ, ಕಾರಣ, ಬ್ಯಾನರ್ ಅಳವಡಿಸಿದ್ದ ಸ್ಥಳ, ಘಟನೆಯ ದಿನದಂದು ಶಾಸಕ ನಾರಾ ಭರತ್ ರೆಡ್ಡಿ ಅವರು ಇದ್ದ ಜಾಗ, ಫೈರಿಂಗ್ ಆದ ಸ್ಥಳ, ಗುಂಡೇಟಿನಿಂದ ಮೃತಪಟ್ಟ ರಾಜಶೇಖರ ರೆಡ್ಡಿಯ ಹಿನ್ನೆಲೆ, ಮೃತ ವ್ಯಕ್ತಿ ಘಟನಾ ಸ್ಥಳಕ್ಕೆ ಬಂದದ್ದು ಯಾಕೆ? ಗಲಭೆ ವೇಳೆ ಎಷ್ಟು ಜನರಿದ್ದರು? ಗಲಭೆ ನಡೆದು ಎಷ್ಟು ಹೊತ್ತಿನ ಬಳಿಕ ನಗರ ಶಾಸಕರು ಘಟನೆ ಸ್ಥಳಕ್ಕೆ ಬಂದರು. ದಾಳಿ ಎರಡು ಕಡೆಗಳಿಂದ ನಡೆದಿದೆಯಾ? ಘಟನೆಯಲ್ಲಿ ಗಾಯಗೊಂಡವರು ಎಷ್ಟು ಜನರಿದ್ದಾರೆ? ಗಾಯಗೊಂಡವರು ಹಾಗೂ ಪ್ರಕರಣ ದಾಖಲಾದವರ ಪೈಕಿ ಕ್ರಿಮಿನಲ್ ಹಿನ್ನೆಲೆಯುಳ್ಳವರಿದ್ದಾರೆಯೇ? ಎಂಬ ವಿವರಗಳನ್ನು ಸಂಗ್ರಹಿಸಿದರು.
ಇದೇ ವೇಳೆ ಘಟನೆಗೆ ಸಂಬಂಧಿಸಿದಂತೆ ಪೊಲೀಸರ ಬಳಿ ಇದ್ದ ವೀಡಿಯೋ ದಾಖಲೆಗಳನ್ನು ಸಂಗ್ರಹಿಸಿಕೊಂಡರು. 200ಕ್ಕೂ ಅಧಿಕ ವೀಡಿಯೋ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಪತ್ರಿಕೆಗಳ ಅನೇಕ ವರದಿಗಳನ್ನು ಸಹ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಆರೋಪಿಗಳು ಯಾರೇ ಆಗಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮೇಲಧಿಕಾರಿಗಳಿಂದ ಆದೇಶ ಇರುವುದರಿಂದ ಘಟನೆಯ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ತನಿಖಾಧಿಕಾರಿಗಳಿಗೆ ಸಿಐಡಿ ತಂಡ ಸೂಚನೆ ನೀಡಿದ್ದು, ಭಾನುವಾರ ಸುಮಾರು ಆರು ತಾಸಿಗೂ ಅಧಿಕ ಹೊತ್ತು ತನಿಖಾ ಪ್ರಕ್ರಿಯೆ ನಡೆದಿದೆ ಎಂದು ತಿಳಿದು ಬಂದಿದೆ.ನಗರದ ಸಿರುಗುಪ್ಪ ರಸ್ತೆಯಲ್ಲಿನ ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸದ ಬಳಿ ಜ. 1ರಂದು ನಡೆದ ಬ್ಯಾನರ್ ಗಲಭೆಗೆ ಸಂಬಂಧಿಸಿದಂತೆ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಆರು ಪ್ರಕರಣಗಳ ಪೈಕಿ ನಾಲ್ಕು ಪ್ರಕರಣಗಳ ತನಿಖೆಗಾಗಿ ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ.