ಬಳ್ಳಾರಿ ಚುನಾವಣೆ ಅಖಾಡ ಚುರುಕುಕೈ-ಕಮಲ ನಾಯಕರ ವಾಕ್ಕ್ಸ ಸಮರ

KannadaprabhaNewsNetwork |  
Published : Apr 03, 2024, 01:30 AM IST
ಬಳ್ಳಾರಿಯ ಎಪಿಎಂಸಿ ಆವರಣದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರು ಚುನಾವಣೆ ಪ್ರಚಾರ ಮಾಡಿದರು. ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಮತ್ತಿತರರಿದ್ದರು.  | Kannada Prabha

ಸಾರಾಂಶ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದೇನೆ. ರಾಜಕೀಯವಾಗಿ ಮುಂದುವರಿಯಲು ನನ್ನನ್ನು ಈ ಬಾರಿ ಗೆಲ್ಲಿಸಬೇಕು ಎಂದು ಶ್ರೀರಾಮುಲು ಅವರು ಮತದಾರರ ಮುಂದೆ ಮೊರೆಯಿಟ್ಟರೆ, ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವುದು ಖಚಿತ. ಕೆಲಸ ಮಾಡದವರಿಗೆ ಜನರು ಮತ ನೀಡುವುದಿಲ್ಲ. ಮತದಾರರು ಪ್ರಜ್ಞಾವಂತರಾಗಿದ್ದು ಅಭಿವೃದ್ಧಿ ಕೆಲಸ ಮಾಡಿದವರನ್ನು ಮಾತ್ರ ನಂಬುತ್ತಾರೆ ಎಂದು ನಾಗೇಂದ್ರ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಕಾರ್ಯ ಚುರುಕು ಪಡೆದುಕೊಳ್ಳುತ್ತಿದ್ದು, ಇದೇ ವೇಳೆ ಕೈ-ಕಮಲ ನಾಯಕರ ವಾಕ್ಸಮರಕ್ಕೆ ನಾಂದಿ ಹಾಡಿದಂತಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ನಡುವಿನ ಮಾತಿನ ದಾಳಿ-ಪ್ರತಿದಾಳಿಗಳು ಮುಂದುವರಿದು ಚುನಾವಣೆ ಅಖಾಡ ಮತ್ತಷ್ಟು ರಂಗೇರಿದೆ.

ತಾಲೂಕಿನ ಮೋಕಾ ಗ್ರಾಮದಲ್ಲಿ ಪ್ರಚಾರ ವೇಳೆ ಮಾತನಾಡಿರುವ ಸಚಿವ ಬಿ. ನಾಗೇಂದ್ರ ಅವರು, ಚುನಾವಣೆ ಹತ್ತಿರ ಬಂದಾಗ "ಅಣ್ಣಾ, ಮಾವ ಎಂದು ಬರುವ ಜನರನ್ನು ನಂಬಬೇಡಿ. ಅವರ ಬಣ್ಣದ ಮಾತುಗಳಿಗೆ ಮರುಳಾಗಬೇಡಿ " ಎಂದು ಪರೋಕ್ಷವಾಗಿ ಬಿ.ಶ್ರೀರಾಮುಲು ವಿರುದ್ಧ ಹರಿಹಾಯ್ದಿದ್ದಾರಲ್ಲದೆ, ಮೋಕಾ ಗ್ರಾಮ ನಮ್ದು. ತಾಕತ್ತಿದ್ದರೆ ಬರಲಿ. ಒಂದೇ ಒಂದು ಮತ ಲೀಡ್ ಪಡೆದುಕೊಳ್ಳಲಿ ನೋಡೋಣ ಎಂದು ಬಿ.ಶ್ರೀರಾಮುಲುಗೆ ಸಚಿವ ನಾಗೇಂದ್ರ ಸವಾಲು ಹಾಕಿದ್ದಾರೆ.

ನಗರದ ಎಪಿಎಂಸಿ ಆವರಣದಲ್ಲಿ ಜರುಗಿದ ಪ್ರಚಾರ ವೇಳೆ ಮಾತನಾಡಿರುವ ಬಿ. ಶ್ರೀರಾಮುಲು, ಸಚಿವ ನಾಗೇಂದ್ರಗೆ ತಿರುಗೇಟು ನೀಡಿದ್ದಾರೆ. ಮಧ್ಯರಾತ್ರಿಯಲ್ಲಿ ನಾಯಕರಾದವರು ನನ್ನ ವಿರುದ್ಧ ಏನೇ ಮಾತನಾಡಿದರೂ ಮರುಳಾಗಬೇಡಿ ಎಂದರಲ್ಲದೆ, ನಾಗೇಂದ್ರರನ್ನು ಭೂತ, ಮದವೇರಿದ ಆನೆ, ಮಧ್ಯರಾತ್ರಿಯಲ್ಲಿ ಹುಟ್ಟಿದ ನಾಯಕ, ನರಿಯಂತೆ ಕುತಂತ್ರ ಬುದ್ಧಿಯುಳ್ಳವ ಎಂದು ಶ್ರೀರಾಮುಲು ಜರಿದಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದೇನೆ. ರಾಜಕೀಯವಾಗಿ ಮುಂದುವರಿಯಲು ನನ್ನನ್ನು ಈ ಬಾರಿ ಗೆಲ್ಲಿಸಬೇಕು ಎಂದು ಶ್ರೀರಾಮುಲು ಅವರು ಮತದಾರರ ಮುಂದೆ ಮೊರೆಯಿಟ್ಟರೆ, ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವುದು ಖಚಿತ. ಕೆಲಸ ಮಾಡದವರಿಗೆ ಜನರು ಮತ ನೀಡುವುದಿಲ್ಲ. ಮತದಾರರು ಪ್ರಜ್ಞಾವಂತರಾಗಿದ್ದು ಅಭಿವೃದ್ಧಿ ಕೆಲಸ ಮಾಡಿದವರನ್ನು ಮಾತ್ರ ನಂಬುತ್ತಾರೆ ಎಂದು ನಾಗೇಂದ್ರ ಹೇಳಿದ್ದಾರೆ.

ಒಂದು ಕಾಲದಲ್ಲಿ ಒಂದೇ ಪಕ್ಷದಲ್ಲಿದ್ದವರು ಇದೀಗ ಪರಸ್ಪರ ರಾಜಕೀಯ ಎದುರಾಳಿಗಳಾಗಿರುವ ಸಚಿವ ನಾಗೇಂದ್ರ ಹಾಗೂ ಶ್ರೀರಾಮುಲು, ಲೋಕಸಭಾ ಚುನಾವಣೆಯಲ್ಲಿ ಮಾತಿನ ವಾಕ್ಸಮರ ತೀವ್ರಗೊಳಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನಾಗೇಂದ್ರ ಅವರು ಬಿಜೆಪಿ ಅಭ್ಯರ್ಥಿಯಾಗಿ ಅಖಾಡದಲ್ಲಿದ್ದ ಶ್ರೀರಾಮುಲು ವಿರುದ್ಧ ವಾಗ್ಬಾಣಗಳನ್ನು ಹರಿಸಿದ್ದರು. ಇಬ್ಬರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪ, ಟೀಕೆ, ಪ್ರತಿಟೀಕೆಗಳನ್ನು ಮಾಡಿ, ಗಮನ ಸೆಳೆಯುತ್ತಿದ್ದರು. ಇದೀಗ ಲೋಕಸಭಾ ಚುನಾವಣೆಯಲ್ಲೂ ಈ ಇಬ್ಬರು ನಾಯಕರ ನಡುವಿನ ವಾಕ್ಸಮರ ಮುಂದುವರಿದು ಗೆಲುವಿನ ಗುದ್ದಾಟಕ್ಕೆ ಮುನ್ನುಡಿ ಬರೆದಿದ್ದಾರೆ.

ಮತಬೇಟೆ ಶುರುಗೊಳಿಸಿರುವ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು, ಮತದಾರರ ಮನವೊಲಿಸಲು ತಮ್ಮ ಪಕ್ಷಗಳು ಹಾಗೂ ಸರ್ಕಾರಗಳ ಸಾಧನೆಯನ್ನು ಮತದಾರರ ಮುಂದಿಡುತ್ತಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ