ಬಳ್ಳಾರಿ ನಗರದಲ್ಲಿ ಏಕಾಏಕಿ ಬೀಸಿದ ಪ್ರಬಲ ಗಾಳಿ-ಮಳೆಯು ಮಹಾನಗರದ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿವೆ.
ಬಳ್ಳಾರಿ: ಜೂ.1ರಂದು ಸಂಜೆ ಬಳ್ಳಾರಿ ನಗರದಲ್ಲಿ ಏಕಾಏಕಿ ಬೀಸಿದ ಪ್ರಬಲ ಗಾಳಿ-ಮಳೆಯು ಮಹಾನಗರದ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿವೆ. ಮೂರು ದಿನಗಳ ಕಾಲ ಇಡೀ ನಗರ ಕತ್ತಲಲ್ಲೇ ಕಳೆಯುವಂತಾಯಿತು.
ಭಾರಿ ಗಾಳಿಯ ಪರಿಣಾಮ 138ಕ್ಕೂ ಹೆಚ್ಚು ವಿದ್ಯುತ್ ಕಂಬ ಮತ್ತು 150ಕ್ಕೂ ಅಧಿಕ ಮರಗಳು ಧರೆಗುರುಳಿದವು. ಸುಮಾರು 18 ಕಿ.ಮೀ. ವಿದ್ಯುತ್ ಮಾರ್ಗ ಹಾನಿಗೊಳಗಾದ ಪರಿಣಾಮ ನಗರದ ಬಹುತೇಕ ಪ್ರದೇಶಗಳು ಮೂರರಿಂದ ನಾಲ್ಕು ದಿನಗಳವರೆಗೆ ಕತ್ತಲಲ್ಲಿ ಮುಳುಗಿದವು. ಕೆಲವು ಕಡೆ ಮೂರು ದಿನಕ್ಕೆ ವಿದ್ಯುತ್ ಸಂಪರ್ಕವಾದರೆ ಮತ್ತೆ ಕೆಲವೆಡೆ ನಾಲ್ಕು ದಿನವಾದರೂ ಕರೆಂಟ್ ಬಂದಿಲ್ಲ.
ನಿದ್ರೆಯಿಲ್ಲದೆ ಒದ್ದಾಡಿದರು:
ವಿದ್ಯುತ್ ಪೂರೈಕೆ ಸ್ಥಗಿತಗೊಂಡ ಪರಿಣಾಮ ಕುಡಿಯುವ ನೀರು ಹಾಗೂ ಬಳಕೆಯ ನೀರಿನ ಸಮಸ್ಯೆ ಉಲ್ಬಣಿಸಿತು. ಮೋಟರ್‌ಗಳ ಮೂಲಕ ನೀರು ಎತ್ತಲು ಸಾಧ್ಯವಾಗದೆ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದವು. ಉರಿಬಿಸಿಲಿನ ನಡುವೆಯೇ ವಿದ್ಯುತ್ ಇಲ್ಲದೇ ವೃದ್ಧರು, ಮಕ್ಕಳು ಹಾಗೂ ರೋಗಿಗಳು ತೀವ್ರ ತೊಂದರೆ ಅನುಭವಿಸಿದರು. ಹಲವರು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದರೆ, ಕೆಲವರು ಸಮೀಪದ ಸ್ವಗ್ರಾಮಗಳಿಗೆ ತೆರಳಿ ದಿನ ಕಳೆದರು.
ಮೊಬೈಲ್ ಚಾರ್ಜಿಂಗ್‌ಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ವರ್ಕ್ ಫ್ರಂ ಹೋಂ ಮೂಲಕ ಬಳ್ಳಾರಿಯಲ್ಲಿ ನೆಲೆಸಿರುವ ಐಟಿ ಹಾಗೂ ಖಾಸಗಿ ವಲಯದ ಉದ್ಯೋಗಿಗಳು ವಿದ್ಯುತ್ ಕೊರತೆಯಿಂದ ಕೆಲಸ ನಿರ್ವಹಿಸಲು ಸಾಧ್ಯವಾಗಲಿಲಗಲಿಲ್ಲ. ವ್ಯಾಪಾರ ವಹಿವಾಟುಗಳ ಮೇಲೂ ವಿದ್ಯುತ್ ಅಭಾವ ನೇರ ಪರಿಣಾಮ ಬೀರಿತು.
ಖಾಸಗಿ ಆಸ್ಪತ್ರೆಗಳು ಜನರೇಟರ್ ವ್ಯವಸ್ಥೆಯ ನೆರವಿನಿಂದ ಸೇವೆ ಮುಂದುವರಿಸಿದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ವಿದ್ಯುತ್ ವ್ಯತ್ಯಯದಿಂದ ರೋಗಿಗಳು ತೊಂದರೆ ಅನುಭವಿಸಿದರು. ಮತ್ತೊಂದೆಡೆ ಸೋಲಾರ್ ಹಾಗೂ ಜನರೇಟರ್ ಸೌಲಭ್ಯ ಹೊಂದಿದ್ದ ಕೆಲ ಕುಟುಂಬಗಳನ್ನು ಹೊರತುಪಡಿಸಿದರೆ, ಬಡ ಹಾಗೂ ಮಧ್ಯಮ ವರ್ಗದ ಜನರು ಹಲವು ದಿನಗಳ ಕಾಲ ನಿದ್ರೆಯಿಲ್ಲದೇ ಕಾಲ ಕಳೆಯುವಂತಾಯಿತು.
ಜಿಲ್ಲಾಡಳಿತ-ಪಾಲಿಕೆ ವಿಫಲ:
ಜೆಸ್ಕಾಂ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹಗಲಿರುಳು ಶ್ರಮಿಸಿ ಮರಗಳ ತೆರವು ಹಾಗೂ ವಿದ್ಯುತ್ ಮರುಸ್ಥಾಪನೆ ಕಾರ್ಯ ಕೈಗೊಂಡರೂ ಅಗತ್ಯ ಸಿಬ್ಬಂದಿ ಕೊರತೆಯಿಂದ ಕಾರ್ಯಾಚರಣೆ ನಿಧಾನಗತಿಯಲ್ಲಿ ಸಾಗಿತು. ಪ್ರಕೃತಿ ವಿಕೋಪದಂತಹ ತುರ್ತು ಸಂದರ್ಭಗಳಲ್ಲಿ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಿ ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವಲ್ಲಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸಂಪೂರ್ಣ ವಿಫಲವಾಗಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಇದೀಗ ಮುಂಗಾರು ಶುರುವಾಗುತ್ತಿದ್ದು ಮಳೆ-ಗಾಳಿಯಿಂದ ಮತ್ತೆ ವಿದ್ಯುತ್ ಸಮಸ್ಯೆಯಾಗುವ ಸಾಧ್ಯತೆ ಇದೆ. ಜಿಲ್ಲಾಡಳಿತ ಕೂಡಲೇ ಗಮನ ಹರಿಸುವಂತಾಗಬೇಕು. ಭವಿಷ್ಯದಲ್ಲಿ ಇಂತಹ ಅವಾಂತರಗಳನ್ನು ಸಮರ್ಥವಾಗಿ ಎದುರಿಸಲು ದುರಂತ ನಿರ್ವಹಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕಿದೆ.
ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಯಾದ ಮಹಾನಗರ ಪಾಲಿಕೆ ಯುದ್ಧೋಪಾದಿಯಲ್ಲಿ ಕೆಲ ಸಮಾಡಬೇಕು. ಆದರೆ, ಜೂ.1ರಂದು ಜೋರಾಗಿ ಬೀಸಿದ ಗಾಳಿಗೆ ಬಿದ್ದ ಮರಗಳು ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಜನರಿಗೆ ವಿದ್ಯುತ್ ಕೊಡದಿರುವ ಜಿಲ್ಲಾಡಳಿತ ಆಡಳಿತ ವೈಖರಿಗೆ ನಿಜಕ್ಕೂ ಬೇಸರ ತರಿಸಿದೆ ಎನ್ನುತ್ತಾರೆ ಸರ್ ಎಂವಿ ನಗರ ನಿವಾಸಿ ಜಿ.ವೀರೇಂದ್ರ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.