ಮೈಸೂರಿನಲ್ಲಿ ನಡೆದ ಜಂಟಿ ಸಭೆಯಲ್ಲಿ ಒಡಂಬಡಿಕೆಗೆ ಸಹಿ ಹಾಕಿದ ಎರಡು ಜಿಲ್ಲೆಗಳ ಸಂಸ್ಥೆಗಳ ಅಧ್ಯಕ್ಷರು
ವಾಣಿಜ್ಯ ಮತ್ತು ಕೈಗಾರಿಕೆಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಪರಸ್ಪರ ಸಹಕಾರ ನೀಡಲು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಮೈಸೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜೊತೆಯಲ್ಲಿ ಜಂಟಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಹಾಗೂ ಮೈಸೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜ್ ಮೈಸೂರಿನಲ್ಲಿ ನಡೆದ ಜಂಟಿ ಸಭೆಯಲ್ಲಿ ಒಡಂಬಡಿಕೆಗೆ ಸಹಿ ಮಾಡಿದ್ದಾರೆ.ಇದೇ ವೇಳೆ ಮಾತನಾಡಿದ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಕೇವಲ ವ್ಯಾಪಾರ–ವಾಣಿಜ್ಯಕ್ಕೆ ಸೀಮಿತವಾಗದೇ ಯುವಶಕ್ತಿಗೆ ಭವಿಷ್ಯ ರೂಪಿಸಿಕೊಳ್ಳಲು ಪೂರಕವಾಗಿ ಸ್ಕಿಲ್ ಡೆವಲಪ್‌ಮೆಂಟ್, ದೇಶದ ಬೆನ್ನೆಲುಬಾಗಿರುವ ರೈತರಿಗೆ ಉಚಿತವಾಗಿ ರೈತಣ್ಣನ ಊಟ, ರೈತಣ್ಣನ ಕ್ಲಿನಿಕ್ ಮತ್ತು ರೈತಣ್ಣನ ಹಾಸಿಗೆ ಜನಪ್ರಿಯ ಸೇವಾ ಯೋಜನೆಗಳನ್ನು ನಿರ್ವಹಿಸುತ್ತಿದೆ. ಈ ಯೋಜನೆಗಳಿಗೆ ಸಮಾಜದ ಎಲ್ಲಾ ವರ್ಗಗಳಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಾಣಿಜ್ಯ ಮತ್ತು ಕೈಗಾರಿಕಾ ಅಭಿವೃದ್ಧಿಗಾಗಿ ಮೈಸೂರು ಮತ್ತು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳು ಜಂಟಿಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಒಡಂಬಡಿಕೆಗೆ ಸಹಿ ಹಾಕಿರುವುದು, ಸೇವಾ ಕ್ಷೇತ್ರದಲ್ಲೂ ಹೊಸ ಅವಕಾಶಗಳಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸಲಿದೆ ಎಂದರು.
ಮೈಸೂರು ಜಿಲ್ಲಾ ಹೋಟಲ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ, ಮೈಸೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ನಾರಾಯಣಗೌಡ ಮಾತನಾಡಿ, ಮೈಸೂರಿನಲ್ಲಿ 34 ಪ್ರವಾಸಿ ಸ್ಥಳಗಳಿದ್ದು, 25ಕ್ಕೂ ಹೆಚ್ಚು ಸ್ಟಾರ್ ಹೋಟೆಲ್‌ಗಳು, 450ಕ್ಕೂ ಹೆಚ್ಚು ಲಾಡ್ಜ್‌ಗಳು, ರೆಸ್ಟೋರೆಂಟುಗಳು ಇದ್ದು, ಪ್ರತ್ಯಕ್ಷ-ಪರೋಕ್ಷವಾಗಿ 25 ಸಾವಿರಕ್ಕೂ ಹೆಚ್ಚಿನ ಜನರು ಹೋಟೆಲ್ ಉದ್ಯಮದಲ್ಲಿ ಪಾಲ್ಗೊಂಡಿದ್ದಾರೆ. ಪ್ರವಾಸೋದ್ಯಮವೇ ಜಿಲ್ಲೆಯ ಜೀವಾಳ. ಮೈಸೂರು ಮತ್ತು ಬಳ್ಳಾರಿ ಸಂಸ್ಥೆಗಳ ಒಡಂಬಡಿಕೆಯು ಪರಸ್ಪರರಲ್ಲಿ ಹೊಸ ಅವಕಾಶಗಳ ಸೃಷ್ಟಿಗೆ ಅವಕಾಶ ನೀಡಲಿದೆ ಎಂದರು.
ಎರಡು ಸಂಸ್ಥೆಗಳ ವಿವಿಧ ಉಪ ಸಮಿತಿಗಳ ಚೇರ್ಮೆನ್‌ಗಳು ಕೈಗಾರಿಕೆ, ವಾಣಿಜ್ಯ, ಸೇವಾ ವಲಯ ಮತ್ತು ಇನ್ನಿತರೆ ವಿಚಾರಗಳ ಕುರಿತು ವಿಚಾರಗಳನ್ನು ವಿನಿಯಮ ಮಾಡಿಕೊಂಡರು.