ದಕ್ಷಿಣಕಾಶಿ ಶಿವಗಂಗೆ ಒಳಕಲ್ಲು ತೀರ್ಥದ ಶಕ್ತಿ ಅಪಾರ

KannadaprabhaNewsNetwork | Published : Mar 17, 2025 12:32 AM

ಸಾರಾಂಶ

ದಾಬಸ್‍ಪೇಟೆ: 12 ಜ್ಯೋತಿರ್ಲಿಂಗದ ಸಂಪೂರ್ಣ ಶಕ್ತಿಸಾರ ದಕ್ಷಿಣ ಕಾಶಿ ಶಿವಗಂಗೆ ಒಳಕಲ್ಲು ತೀರ್ಥದಲ್ಲಿದೆ, ಪಂಚಭೂತಗಳ ಮಹಾಶಕ್ತಿ ಹೊಂದಿದವರು ಜಗದ್ಗುರು ರೇಣುಕಾ ಭಗವತ್ ಪಾದರು ಎಂದು ಶಿವಗಂಗಾ ಪ್ರಶಸ್ತಿ ಪುರಸ್ಕೃತ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಬಣ್ಣಿಸಿದ

ದಾಬಸ್‍ಪೇಟೆ: 12 ಜ್ಯೋತಿರ್ಲಿಂಗದ ಸಂಪೂರ್ಣ ಶಕ್ತಿಸಾರ ದಕ್ಷಿಣ ಕಾಶಿ ಶಿವಗಂಗೆ ಒಳಕಲ್ಲು ತೀರ್ಥದಲ್ಲಿದೆ, ಪಂಚಭೂತಗಳ ಮಹಾಶಕ್ತಿ ಹೊಂದಿದವರು ಜಗದ್ಗುರು ರೇಣುಕಾ ಭಗವತ್ ಪಾದರು ಎಂದು ಶಿವಗಂಗಾ ಪ್ರಶಸ್ತಿ ಪುರಸ್ಕೃತ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಬಣ್ಣಿಸಿದರು.

ಸೋಂಪುರ ಹೋಬಳಿಯ ಕಂಬಾಳು ಗ್ರಾಮದ ಶ್ರೀ ಮೇಲಣಗವಿ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಮತ್ತು ಶಿವಗಂಗಾಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಸಕಲ ಜೀವರಾಶಿಯಲ್ಲೂ ಮನುಕುಲಕ್ಕೂ ಶ್ರೇಷ್ಠತೆ ಬಯಸಿದವರು ರೇಣುಕಾ ಭಗವತ್ ಪಾದರು, 12ನೇ ಶತಮಾನದಲ್ಲಿ ಕಾಯಕ ಸೇವೆಯ ಮಹತ್ವ ಸಾರಿದ ಶರಣರು ಪ್ರಾತಃ ಸ್ಮರಣೀಯರು, ದಕ್ಷಿಣಕಾಶಿ ಶಿವಗಂಗೆಯ ಒಳಕಲ್ಲು ತೀರ್ಥ ಪಾವನಗಂಗೆ, 12 ಜ್ಯೋತಿರ್ಲಿಂಗದ ಪುಣ್ಯ ಕ್ಷೇತ್ರದ ಸಾರ ಶಿವಗಂಗೆಯಲ್ಲಿದೆ. ಈ ಪ್ರಶಸ್ತಿ ಶಿವಗಂಗೆಯ ಹೆಸರನಲ್ಲಿರುವುದು ಮತ್ತಷ್ಟು ಸಂತಸ ತಂದಿದೆ. ಡಿಸಿಎಂ ಡಿ.ಕೆ.ಶಿವಕುಮಾರರಿಗೂ ಒಳಕಲ್ಲು ತೀರ್ಥದಲ್ಲಿ ನೀರು ತೆಗೆದುಕೊಂಡು ಹೋಗಿ ಗಂಗಾಸ್ನಾನ ಮಾಡುವಂತೆ ತಿಳಿಸಿದ್ದೆ. ಅವರು ಗಂಗಾಸ್ನಾನ ಮಾಡಿದ ನಂತರ ಅವರಿಗೆ ಒಳ್ಳೆಯದಾಯಿತು ಎಂದು ಹೇಳಿದರು.

ಶಿವಗಂಗೆ ಶ್ರೀ ಪ್ರಶಸ್ತಿ:

ಮೇಲಣಗವಿ ಮಠದ ಡಾ. ಶ್ರೀ ಡಾ.ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರ ಭಾವೈಕ್ಯತೆಯ ಪ್ರತೀಕರಾಗಿದ್ದವರು. ಸಹಸ್ರ ಶಾಖಾ ಮಠ ತೆರೆದು, ಭಕ್ತಿ-ಸಂತ ಪರಂಪರೆಯನ್ನು ಜಗತ್ತಿಗೆ ಸಾರಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲೂ ರೇಣುಕಾಚಾರ್ಯರ ಜಯಂತಿ ಆಚರಿಸಿದ್ದಾರೆ. ಈ ವರ್ಷ ಶಿವಗಂಗಾ ಶ್ರೀ ಪ್ರಶಸ್ತಿಯನ್ನು ನೊಣವಿನಕೆರೆ ಶ್ರೀಗಳ ಪಾದಕಮಲಗಳಿಗೆ ಅರ್ಪಿಸಿದ್ದೇವೆ. ಮೇಲಣಗವಿ ಮಠ ಶೂನ್ಯದಿಂದ ಎತ್ತರಕ್ಕೆ ಬೆಳೆಯುತ್ತಿದೆ ಎಂದು ಹೇಳಿದರು.

ಮಠಗಳ ಪಾತ್ರ ಹಿರಿದು:

ಶಾಸಕ ಶ್ರೀನಿವಾಸ್ ಮಾತನಾಡಿ, ನನ್ನ ವಿಧಾನಸಭಾ ಕ್ಷೇತ್ರದಲ್ಲಿರುವ ಶರಣ ಸಂಸ್ಕೃತಿ ಹೊಂದಿರುವ ಎಲ್ಲಾ ಮಠಗಳು ಸಿದ್ದಗಂಗಾ ಮಠದ ಹಾದಿಯಲ್ಲಿ ತ್ರಿವಿಧ ದಾಸೋಹ ಮಾಡುತ್ತಿವೆ. ಮೇಲಣಗವಿ ಮಠದ ಶಿವಗಂಗಾ ಶ್ರೀ ಪ್ರಶಸ್ತಿ ತನ್ನದೇ ಆದ ಹಿರಿಮೆ ಹೊಂದಿದೆ, ಸದ್ದು ಮಾಡದೆ ಸಾಧನೆಯ ಶಿಖಿರವನ್ನು ಮಠ ಏರುತ್ತಿದೆ, ಅನುಭವ ಮಂಟಪದ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಮಾತನಾಡಲು ಬಯಸಿದ್ದೆ ಆದರೆ ಸಮಯಾವಕಾಶ ದೊರೆಯಲಿಲ್ಲ ಎಂದು ತಿಳಿಸಿದರು.

ಚಿಕ್ಕಬಳ್ಳಾಪುರ ಲೋಕಸಭಾ ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ಪವಾಡ ಪುರುಷರು ಮಾನವ ಧರ್ಮಕ್ಕೆ ಜಯ ಎಂದು ಹೇಳಿದ್ದಾರೆ. ಜಗದ್ಗುರುಗಳು ಅವರ ಸಾಧನೆಗೆ ಅವರೇ ಸಾಟಿ, ಸಮಾಜದಲ್ಲಿ ತ್ರಿವಿಧ ದಾಸೋಹಕ್ಕಾಗಿ ಮಠಗಳ ಮತ್ತು ಮಠಾಧೀಶರ ಕೊಡುಗೆ ಅಪಾರ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ವಿಭೂತಿಪುರ ಮಠದ ಡಾ.ಮಹಂತಲಿಂಗ ಶಿವಾಚಾರ್ಯ ಸ್ವಾಮೀಜಿ, ವನಕಲ್ಲು ಮಠದ ಡಾ. ಶ್ರೀ ಬಸವ ರಮಾನಂದ ಸ್ವಾಮೀಜಿ, ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ ಮಾತನಾಡಿದರು.

ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರದ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿ, ಜಿಪಂ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ, ಮುಖಂಡ ಅಗಳಕುಪ್ಪೆ ಗೋವಿಂದರಾಜು, ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು, ಸದಸ್ಯ ಪ್ರದೀಪ್ ಕುಮಾರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ರೇವಣಸಿದ್ದಯ್ಯ, ತಾಲೂಕು ಅಧ್ಯಕ್ಷ ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ, ಹರೀಶ್ ಆರಾಧ್ಯ, ರಾಜ್ಯ ಕಾರ್ಯದರ್ಶಿ ರಾಜಮ್ಮ, ಮಹಿಳಾ ಘಟಕದ ಅಧ್ಯಕ್ಷೆ ವೇದಾವತಿ, ಮಾಜಿ ಅಧ್ಯಕ್ಷರಾದ ಶಾಂತಕುಮಾರ್, ಅಣ್ಣಪ್ಪ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಪ್ರಭುದೇವ್, ಶಿವಕುಮಾರ್, ಪಂಚಾಕ್ಷರಿ, ಉಮಾಶಂಕರ್, ಹೊನ್ನಗಂಗಶೆಟ್ಟಿ, ಮುಖಂಡರಾದ ನಟರಾಜು, ದಯಾಶಂಕರ್, ಜಗದೀಶ್, ಹುಲಿಕಲ್ ನಟರಾಜು, ನಂಜುಂಡೇಶ್, ಬೃಂಗೇಶ್ ಇತರರಿದ್ದರು.

ಪೋಟೋ 3 :

ಕಂಬಾಳು ಗ್ರಾಮದ ಶ್ರೀ ಮೇಲಣಗವಿ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಅವರಿಗೆ ಹರಗುರು ಚರಮೂರ್ತಿಗಳು ಹಾಗೂ ಶಾಸಕ ಶ್ರೀನಿವಾಸ್ ಶಿವಗಂಗಾ ಶ್ರೀ ಪ್ರಶಸ್ತಿ ಪ್ರದಾನ ಮಾಡಿದರು.

Share this article