ಬಳ್ಳಾರಿ: ಡಿಸೆಂಬರ್ ತಿಂಗಳಲ್ಲಿ ಬಳ್ಳಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಆರ್.ಪಾಟೀಲ ತಿಳಿಸಿದರು.
450 ಹಾಸಿಗೆಯುಳ್ಳ ಈ ಆಸ್ಪತ್ರೆಯು 2008ರಲ್ಲಿ ಮಂಜೂರಾಗಿತ್ತು. ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿದ್ದ ಆಸ್ಪತ್ರೆಯನ್ನು 2018ರಲ್ಲಿ ಮರು ಟೆಂಡರ್ ಕರೆಯಲಾಗಿತ್ತು. ಈಗ ನಮ್ಮ ಸರ್ಕಾರಾವಧಿಯಲ್ಲೇ ಪೂರ್ಣಗೊಳಿಸಿ ಡಿಸೆಂಬರ್ ತಿಂಗಳಲ್ಲಿ ಉದ್ಘಾಟನೆಗೊಳಿಸಿ ಸಾರ್ವಜನಿಕರಿಗೆ ಅರ್ಪಿಸಲಾಗುವುದು ಎಂದರು.
ಮೊದಲ ಹಂತದ ಕಾಮಗಾರಿ ಶೇ.97 ಪೂರ್ಣಗೊಂಡಿದೆ. ಎರಡನೇ ಹಂತದ ಕಾಮಗಾರಿ ಸಹ ಶೇ.96ರಷ್ಟು ಮುಗಿದಿದೆ. ಈ ತಿಂಗಳ ಕೊನೆಯ ಹಂತದಲ್ಲಿ ವಿದ್ಯುತ್ ಕಾಮಗಾರಿ ಸೇರಿದಂತೆ ಬಾಕಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.ಕಾರ್ಡಿಯಾಲಜಿ, ಪ್ಲಾಸ್ಟಿಕ್ ಸರ್ಜರಿ, ಡಯಾಲಿಸಿಸ್ ಯಂತ್ರ, ಆರ್‌ಒ ಪ್ಲಾಂಟ್, ಬೆಡ್ ವ್ಯವಸ್ಥೆ ಹಾಗೂ ಇತರೆ ಸಾಮಗ್ರಿ ಅಳವಡಿಕೆ ಕಾರ್ಯ ಪೂರ್ಣಗೊಳಿಸಿ ಜನರಿಗೆ ಉಪಯುಕ್ತ ಆರೋಗ್ಯ ಸೇವೆ ನೀಡಲು ಮುಂದಾಗಬೇಕು. ನ್ಯೂರಾಲಜಿ ಸೇರಿದಂತೆ ಆಸ್ಪತ್ರೆಯಲ್ಲಿ ಖಾಲಿಯಿರುವ ವಿವಿಧ ವಿಭಾಗಗಳ ವೈದ್ಯರು ಮತ್ತು ಗ್ರೂಪ್-ಬಿ, ಸಿ ಹುದ್ದೆಗಳನ್ನು ಗುತ್ತಿಗೆ ಆಧಾರದಡಿ ಪಡೆಯಲು ಕೂಡಲೇ ಕ್ರಮ ವಹಿಸಬೇಕು. ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಆಸ್ಪತ್ರೆಯು ಅನುದಾನದ ಕೊರತೆಯಾದಲ್ಲಿ ಡಿಎಂಎಫ್, ಕೆಎಂಇಆರ್ಸಿ ಹಾಗೂ ಸಿಎಸ್ಆರ್ ಅನುದಾನಕ್ಕಾಗಿ ಜಿಲ್ಲಾಧಿಕಾರಿ ಗಮನಕ್ಕೆ ತರಬೇಕು ಎಂದು ನಿರ್ದೇಶಕರಿಗೆ ಸೂಚನೆ ನೀಡಿದರು.
ವಿದ್ಯುತ್ ಪೂರೈಕೆಯ ಪರಿವರ್ತಕ ಅಳವಡಿಕೆ ಕಾರ್ಯ, ವಿವಿಧ ಅಗತ್ಯ ಸಾಮಗ್ರಿ- ಸಲಕರಣೆ ಪೂರೈಕೆ ಬಾಕಿ ಇದ್ದು, ಉಳಿದಂತೆ ಎಲ್ಲ ಕಾರ್ಯ ಮುಗಿದಿದೆ. ನವೆಂಬರ್ ತಿಂಗಳ ಅಂತ್ಯಕ್ಕೆ ಎಲ್ಲ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಅಗತ್ಯ ಸೌಲಭ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಲಿದೆ ಎಂದು ಸಭೆಗೆ ತಿಳಿದರು.
26 ಎಕರೆ ಪ್ರದೇಶದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ:
ನಮ್ಮ ಸರ್ಕಾರ ಆರೋಗ್ಯ ಸೇವೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಬಳ್ಳಾರಿಯಲ್ಲಿ ಬೇಕಾದ ಆರೋಗ್ಯ ಸಂಬಂಧಿ ಸೇವೆಗಳನ್ನು ನೀಡಲು ಸರ್ಕಾರ ಸಿದ್ಧವಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯ ನಿರ್ವಹಣೆ ಬಳಿಕ ಈ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.
ಬಳ್ಳಾರಿಯ ಬಿಎಂಸಿಆರ್‌ಸಿಗೆ ಭೇಟಿ ನೀಡಿದ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಅವರು ವೈದ್ಯಾಧಿಕಾರಿಗಳ ಜೊತೆ ಚರ್ಚಿಸಿದರು.