ಕೆ.ಎಂ. ಮಂಜುನಾಥ್
ಬಿಸಿಲೂರು ಖ್ಯಾತಿಯ ಜಿಲ್ಲೆಯಲ್ಲಿ ಹಸಿರನ್ನುಟ್ಟ ಬೆಟ್ಟಗಳು ಕಣ್ಮನ ತಣಿಸುತ್ತಿವೆ. ಟ್ರಕ್ಕಿಂಗ್ ಪ್ರಿಯರಿಗೂ ಇಲ್ಲಿ ವೈವಿಧ್ಯಮ ಜಾಗಗಳಿವೆ. ಈ ಎಲ್ಲ ಸಿರಿ ಸಮೃದ್ಧಿಯಿದ್ದರೂ ಜಿಲ್ಲೆಯ ಪ್ರವಾಸೋದ್ಯಮ ಮಾತ್ರ ಮುನ್ನೆಲೆಗೆ ಬಂದಿಲ್ಲ. ಹಾಗಂತ ಇದು ಇತ್ತೀಚಿನ ದಿನಗಳಲ್ಲಿ ಕಂಡುಬರುವ ನಿರ್ಲಕ್ಷ್ಯದ ವ್ಯಾಧಿಯಲ್ಲ. ಈ ಹಿಂದಿನಿಂದಲೂ ಜಿಲ್ಲೆಯ ಪ್ರವಾಸೋದ್ಯಮ ಪ್ರಗತಿಗೆ ತಾತ್ಸಾರ ಇದ್ದು, ಈಗಲೂ ಮುಂದುವರಿದಿದೆ.
ಏನೇನಾಗಬೇಕು?: ಬಳ್ಳಾರಿ ಗುಡ್ಡ ಎಂದೇ ಹೆಚ್ಚು ಪ್ರಚಲಿತದಲ್ಲಿರುವ ಹಾಗೂ ದೇಶದ ಅತಿದೊಡ್ಡ ಏಕಶಿಲಾ ಬೆಟ್ಟ ಎನಿಸಿದ ಐತಿಹಾಸಿಕ ಬಳ್ಳಾರಿ ಕೋಟೆಯನ್ನು ಪ್ರವಾಸೋದ್ಯಮ ಪೂರಕವಾಗಿ ಬಳಸಿಕೊಳ್ಳಬಹುದು. ಈ ಕೋಟೆ ಬರೀ ಐತಿಹ್ಯ ನೆಲೆಯಾಗಿ ನೋಡುವುದಷ್ಟೇ ಅಲ್ಲ; ಚಾರಣಪ್ರಿಯರ ತಾಣವಾಗಿ, ಇತಿಹಾಸ ಆಸಕ್ತರ ಕಲಿಕಾ ಕೇಂದ್ರವಾಗಿ, ಪಿಕ್‌ನಿಕ್ ಪ್ರಿಯರ ನೆಚ್ಚಿನ ಜಾಗವಾಗಿ, ಸಾಹಸ ಚಟುವಟಿಕೆಗಳ ತರಬೇತಿ ಕೇಂದ್ರವಾಗಿ ಬಳಕೆಗೆ ಸೂಕ್ತವಾಗಿದೆ. ಅನೇಕ ಬಗೆಯ ಕೌತುಕಗಳನ್ನು ಹುದುಗಿಸಿಕೊಂಡಿರುವ ಬಳ್ಳಾರಿ ಕೋಟೆ ಇಲ್ಲಿ ನಡೆದಷ್ಟೂ ತೆರೆದುಕೊಳ್ಳುವ ಲೋಕವೂ ಹೌದು. ಆದರೆ, ಕೋಟೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಕನಿಷ್ಠ ಸೌಕರ್ಯಗಳು ಇಲ್ಲಿಲ್ಲ. ರೋಪ್ ವೇ ನಿರ್ಮಿಸಬೇಕು. ಇದರಿಂದ ಎಲ್ಲ ವಯೋಮಾನದವರು ಸುಲಭವಾಗಿ ಕೋಟೆ ಹತ್ತಲು ಸುಲಭವಾಗುತ್ತದೆ ಎಂಬ ಅನೇಕ ವರ್ಷಗಳ ಕೂಗಿಗೆ ಇನ್ನೂ ಬಲ ಬಂದಿಲ್ಲ.ಸಂಡೂರು ಸಿರಿಗಿಲ್ಲ ಪ್ರಗತಿ: ಬಳ್ಳಾರಿ ಜಿಲ್ಲೆಯ ಪ್ರಕೃತಿ ಸೌಂದರ್ಯದ ಕಳಸ ಎನಿಸಿದ ಸಂಡೂರು ತಾಲೂಕಿನಲ್ಲಿ ಐತಿಹಾಸಿಕ ಕ್ಷೇತ್ರಗಳು ಅಷ್ಟೇ ದೊಡ್ಡ ಸಂಖ್ಯೆಯಲ್ಲಿವೆ. ಅರಣ್ಯ ಸಂಪತ್ತು, ಪಕ್ಷಿ ಸಂಕುಲ, ಅಗಾಧವಾದ ಔಷಧೀಯ ಸಸ್ಯಗಳು ಇಲ್ಲಿ ಹೇರಳವಾಗಿವೆ. ಸದಾ ಹಸಿರು ಹೊದ್ದು ಕಣ್ಮನ ಸೆಳೆಯುವ ಬೆಟ್ಟಗುಡ್ಡಗಳು ಪ್ರವಾಸಿಗರನ್ನು ಕೈಬೀಸಿ ಕರೆಯುವಂತೆ ಗೋಚರಿಸುತ್ತವೆ. ನಾರೀಹಳ್ಳ ಜಲಾಶಯವೂ ಈ ಭಾಗದ ಮತ್ತೊಂದು ಪ್ರಮುಖ ಆಕರ್ಷಣಾ ಕೇಂದ್ರ. ಸಂಡೂರಿನ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನವಿಲು ಉದ್ಯಾನವನ, ಜಿಂಕೆ ಪಾರ್ಕ್ ನಿರ್ಮಿಸಬೇಕು ಎಂಬ ಹಲವು ವರ್ಷಗಳ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಧಾರ್ಮಿಕ ತಾಣಗಳಾದ ಕುಮಾರಸ್ವಾಮಿ ದೇವಾಲಯ, ಗಂಡಿ ನರಸಿಂಹಸ್ವಾಮಿ, ನವಿಲುಸ್ವಾಮಿ, ಹರಿಶಂಕರ, ಭೀಮತೀರ್ಥ, ಭೈರವತೀರ್ಥ, ಯಾಣ ಮಾದರಿಯ ಉಬ್ಬಳಗಂಡಿಯ ಶಿಲೆಗಳು ಮತ್ತಷ್ಟು ಜನಾಕರ್ಷಣ ಕೇಂದ್ರಗಳಾಗಿ ಮಾರ್ಪಡಿಸಲಾಗಿಲ್ಲ. ಟ್ರಕ್ಕಿಂಗ್ ಪ್ರಿಯರ ಸ್ವರ್ಗ ಎನಿಸಿದ ರಾಮಘಡ ಪ್ರದೇಶ ಪ್ರಗತಿಯಾಗಿಲ್ಲ.
ಇನ್ನು ನಗರ ಹೊರವಲಯ ಹಚ್ಚಹಸಿರ ಸುಂದರ ತಾಣ ಮಿಂಚೇರಿ ಗುಡ್ಡವೂ ಪೂರಕ ಅಭಿವೃದ್ಧಿಯಿಂದ ದೂರ ಉಳಿದಿದ್ದು, ಈ ಹಿಂದಿನ ಎಲ್ಲ ಸಚಿವರು ಈ ಜಾಗವನ್ನು ಪ್ರವಾಸೋದ್ಯಮ ತಾಣವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ, ಜನನಾಯಕರ ಭರವಸೆಗಳು ಕಾರ್ಯರೂಪ ಪಡೆದಿಲ್ಲ.
ಸಿಎಂಗೆ ಮೊರೆ: ಜಿಲ್ಲೆಯ ಪ್ರವಾಸೋದ್ಯಮ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಅನುದಾನ ನೀಡುವ ನಿರೀಕ್ಷೆಯಿದೆ. ಬಳ್ಳಾರಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ತಿಳಿಸಿದರು.