ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ವಿದ್ಯಾರ್ಥಿ ಚಿನ್ಮಯ ಜಿ.ಕೆ. ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 624 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಕನ್ನಡದಲ್ಲಿ- 125 ಇಂಗ್ಲಿಷ್- 100, ಹಿಂದಿ-100, ಗಣಿತ- 100 ಸಮಾಜ- 100 ಹಾಗೂ ವಿಜ್ಞಾನದಲ್ಲಿ 99 ಅಂಕಗಳಿಸಿದ್ದಾರೆ.ಬೆಳ್ತಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಗಣೇಶ ರಾಮಚಂದ್ರ ಭಟ್ ಹಾಗೂ ಕಲ್ಮಂಜ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕಿ ಮಾಲಿನಿ ಹೆಗಡೆ ದಂಪತಿ ಪುತ್ರರಾದ ಚಿನ್ಮಯ ಎಲ್‌ಕೆಜಿಯಿಂದ ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ. ಸಾಧಕ ವಿದ್ಯಾರ್ಥಿಯನ್ನು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಗೌರವಿಸಿದರು.
ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರುವ ಚಿನ್ಮಯ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮುಂದಿದ್ದು ಈ ಬಾರಿಯ ಪ್ರತಿಭಾ ಕಾರಂಜಿಯ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ರಾಜ್ಯಮಟ್ಟದ ವಿಜೇತ. ಕಳೆದ ವರ್ಷ ಜರುಗಿದ ರಾಜ್ಯಮಟ್ಟದ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಮಗನ ಸಾಧನೆಗೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ತಂದೆ ಗಣೇಶ ರಾಮಚಂದ್ರ ಭಟ್, ದೈನಂದಿನ ಪಾಠಗಳ ಬಗ್ಗೆ ವಿಶೇಷ ಗಮನಹರಿಸಿ ಹೆಚ್ಚಿನ ಒತ್ತಡವಿಲ್ಲದೆ ವ್ಯಾಸಂಗ ಮಾಡುತ್ತಿದ್ದ. ಶಾಲೆಯ ಎಲ್ಲ ಶಿಕ್ಷಕರು ಹೆಚ್ಚಿನ ಪ್ರೋತ್ಸಾಹ ನೀಡಿರುವುದು ಉತ್ತಮ ಅಂಕ ಗಳಿಸಲು ಕಾರಣವಾಗಿದೆ. ದಿನಚರಿ ರೂಪಿಸಿಕೊಂಡು ಪರೀಕ್ಷೆಗೆ ತಯಾರಾಗಿದ್ದ. ಉತ್ತಮ ಅಂಕ ಗಳಿಸುವ ನಿರೀಕ್ಷೆ ಇತ್ತು, ಅದರಲ್ಲಿ ಯಶಸ್ವಿಯಾಗಿದ್ದಾನೆ ಎನ್ನುತ್ತಾರೆ.ಸಾಂಸ್ಕೃತಿಕ ಚಟುವಟಿಕೆಗಳ ಜತೆ ಓದಿನಲ್ಲೂ ಮುಂದಿದ್ದ ಚಿನ್ಮಯ ಇಂದು ರಾಜ್ಯವೇ ಗುರುತಿಸುವ ಸಾಧನೆ ಮಾಡಿದ್ದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ. ಇತರ ವಿದ್ಯಾರ್ಥಿಗಳಿಗೂ ಕಲಿಕೆಗೆ ಉತ್ತಮ ಪ್ರೋತ್ಸಾಹ ನೀಡುತ್ತಿದ್ದ ಎಂದು ಶಾಲಾ ಮುಖ್ಯ ಶಿಕ್ಷಕಿ ಹೇಮಲತಾ ಎಂ.ಆರ್. ಹೇಳುತ್ತಾರೆ.ಪ್ರತಿ ದಿನ ಬೆಳಗ್ಗೆ 6ರಿಂದ 7ರ ತನಕ ಹಾಗೂ ಸಂಜೆ 7ರಿಂದ 10ರ ತನಕ ಓದುತ್ತಿದ್ದೆ. ದೈನಂದಿನ ಪಾಠಗಳನ್ನು ಅಂದೇ ಕಲಿಯುತ್ತಿದ್ದ ಕಾರಣ ಪರೀಕ್ಷೆ ಎದುರಿಸುವುದು ಕಷ್ಟವಾಗಿಲ್ಲ. ನಿದ್ದೆಗೆಟ್ಟು ಓದುವ ಪರಿಪಾಠ ಇಟ್ಟುಕೊಂಡಿರಲಿಲ್ಲ. ಶಾಸ್ತ್ರೀಯ ಸಂಗೀತದಲ್ಲೂ ಆಸಕ್ತಿ ಇದ್ದು ಇದರಲ್ಲಿ ಹೆಚ್ಚಿನ ಕಲಿಕೆ ಮಾಡುವ ಇರಾದೆ ಇದೆ. ಭವಿಷ್ಯದಲ್ಲಿ ಎಂಜಿನಿಯರ್ ಆಗಬೇಕೆಂದಿದ್ದೇನೆ. ಪೋಷಕರು ಹಾಗೂ ಶಿಕ್ಷಕರ ಪ್ರೋತ್ಸಾಹ ಉತ್ತಮ ಅಂಕ ಗಳಿಸಲು ಕಾರಣವಾಯಿತು
- ಚಿನ್ಮಯ ಜಿ.ಕೆ. ರಾಜ್ಯಕ್ಕೆ 2ನೇ ಸ್ಥಾನಿ