ಬೆಳ್ತಂಗಡಿ: ಕಿಂಡಿ ಅಣೆಕಟ್ಟುಗಳಲ್ಲಿ ಮರಮಟ್ಟು, ತ್ಯಾಜ್ಯ ಸಂಗ್ರಹ

KannadaprabhaNewsNetwork |  
Published : May 29, 2025, 01:51 AM IST
ಕಿಂಡಿ | Kannada Prabha

ಸಾರಾಂಶ

ಈ ಬಾರಿ ಮೇ ತಿಂಗಳು ಮುಗಿಯುವ ಮೊದಲೇ ಬೆಳ್ತಂಗಡಿ ತಾಲೂಕಿನ ನೇತ್ರಾವತಿ, ಮೃತ್ಯುಂಜಯ, ಕಪಿಲಾ, ಫಲ್ಗುಣಿ ಸೋಮಾವತಿ ನದಿಗಳು, ನೆರಿಯ, ಅಣಿಯೂರು ಹೊಳೆಗಳು ಸೇರಿದಂತೆ ತಾಲೂಕಿನ ಹಳ್ಳ ತೋಡುಗಳು ತುಂಬಿ ಹರಿದಿದ್ದು ಕೆಲವೆಡೆ ಸಾಮಾನ್ಯ ಪ್ರವಾಹ ಸ್ಥಿತಿ ಕಂಡುಬಂದಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ತಾಲೂಕಿನ ಹಲವು ಭಾಗಗಳಲ್ಲಿರುವ ಕಿಂಡಿ ಅಣೆಕಟ್ಟುಗಳಲ್ಲಿ ಕಳೆದ ನಾಲ್ಕು ದಿನಗಳಿಂದ ನದಿಗಳು ತುಂಬಿ ಹರಿದ ಪರಿಣಾಮ ಮರಮಟ್ಟು ಮತ್ತು ತ್ಯಾಜ್ಯ ಜಮೆಯಾಗಿದ್ದು ನೀರಿನ ಹರಿವಿಗೆ ಅಡ್ಡಿಯಾಗಿದೆ.

ಈ ಬಾರಿ ಮೇ ತಿಂಗಳು ಮುಗಿಯುವ ಮೊದಲೇ ತಾಲೂಕಿನ ನೇತ್ರಾವತಿ, ಮೃತ್ಯುಂಜಯ, ಕಪಿಲಾ, ಫಲ್ಗುಣಿ ಸೋಮಾವತಿ ನದಿಗಳು, ನೆರಿಯ, ಅಣಿಯೂರು ಹೊಳೆಗಳು ಸೇರಿದಂತೆ ತಾಲೂಕಿನ ಹಳ್ಳ ತೋಡುಗಳು ತುಂಬಿ ಹರಿದಿದ್ದು ಕೆಲವೆಡೆ ಸಾಮಾನ್ಯ ಪ್ರವಾಹ ಸ್ಥಿತಿ ಕಂಡುಬಂದಿದೆ.

ನದಿಗಳಲ್ಲಿ ಹೆಚ್ಚಿನ ನೀರು ಬಂದಾಗ ಇದರೊಂದಿಗೆ ತೇಲಿ ಬಂದ ಮರಮಟ್ಟು, ತ್ಯಾಜ್ಯ ಕಿಂಡಿ ಅಣೆಕಟ್ಟುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜಮೆಯಾಗಿದೆ. ಇಷ್ಟೊಂದು ಪ್ರಮಾಣದ ಮರಮಟ್ಟು ಜಮೆಯಾಗಿರುವುದರಿಂದ ಸಮೀಪದ ತೋಟಗಳಲ್ಲೂ ಕೃತಕ ನೆರೆ ಕಂಡುಬಂದಿದೆ.

ಜೂನ್ ಆರಂಭಕ್ಕೆ ಮೊದಲೇ ಈ ರೀತಿ ಮರಮಟ್ಟು ಜಮೆಯಾಗಿದ್ದು ಇದನ್ನು ತೆರವುಗೊಳಿಸದಿದ್ದರೆ ಮುಂದೆ ಮಳೆಗಾಲದಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.ಕಿಂಡಿ ಅಣೆಕಟ್ಟುಗಳಿಗೆ ಬಂದು ಬಡಿಯುವ ಮರಮಟ್ಟು ಅವುಗಳು ಶಿಥಿಲಾವಸ್ಥೆ ತಲುಪಲು ಕಾರಣವಾಗುತ್ತದೆ.

ಕೆಲವೊಂದು ಕಿಂಡಿ ಅಣೆಕಟ್ಟುಗಳ ಹಲಗೆ ತೆರವು ಕೆಲಸ ಬಾಕಿ ಇದ್ದು, ಈಗ ಇವುಗಳಲ್ಲಿ ಮರಮಟ್ಟು ತುಂಬಿರುವದರಿಂದ ಹಲಗೆ ತೆರವು ಕಾರ್ಯಕ್ಕೆ ಇನ್ನಷ್ಟು ಅಡ್ಡಿ ಉಂಟಾಗಿದೆ.

ನದಿ, ಹೊಳೆಗಳು ತುಂಬಿ ಹರಿಯುತ್ತಿದ್ದು ತಿಂಡಿ ಅಣೆಕಟ್ಟುಗಳ ಮೇಲ್ಭಾಗದಲ್ಲಿ ಹಲವು ಅಡಿ ನೀರು ಇದ್ದು ಹಲಗೆ ತೆರವಿಗೆ ಅಣೆಕಟ್ಟುಗಳ ವಿಳಂಬವಾಗುತ್ತಿದೆ.

ಕಿಂಡಿ ಅಣೆಕಟ್ಟುಗಳ ಹಲಗೆ ತೆರವುಗೊಳ್ಳದಿದ್ದರೆ ಮಳೆಗಾಲದಲ್ಲಿ ನದಿ,ಹೊಳೆಗಳು ತುಂಬಿ ಹರಿದಾಗ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಲಿದೆ.

ನದಿಗಳ ನೀರು ತಗ್ಗಿದ ತಕ್ಷಣ ಕಿಂಡಿ ಅಣೆಕಟ್ಟುಗಳ ಹಲಗೆಗಳನ್ನು ತೆರೆವುಗೊಳಿಸಲು ಸಂಬಂಧಪಟ್ಟ ಇಲಾಖೆಗೆ ತಿಳಿಸಲಾಗಿದೆ ಎಂದು ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಂ ತಿಳಿಸಿದ್ದಾರೆ. ...........................

ಬೃಹತ್ ಹೊಂಡ ನಿರ್ಮಾಣ

ನಿಡಿಗಲ್ ಕಿಂಡಿ ಅಣೆಕಟ್ಟಿನಲ್ಲಿ ಮರಮಟ್ಟು ಸಿಲುಕಿಕೊಂಡು ಪರಿಣಾಮ ನದಿ ನೀರು ಕಿಂಡಿ ಅಣೆಕಟ್ಟಿನ ತಡೆಗೋಡೆ ಬದಿಯಲ್ಲಿ ಹರಿದು ಹೋಗಿ ಬೃಹತ್ ಗಾತ್ರದ ಹೊಂಡ ನಿರ್ಮಾಣವಾಗಿದೆ. ತಡೆಗೋಡೆ ಬದಿಯಲ್ಲಿ ಸುಮಾರು 8 ಅಡಿ ಅಗಲದ, 5ಅಡಿ ಆಳದ ಹೊಂಡ ಸೃಷ್ಟಿಯಾಗಿದ್ದು ಇನ್ನೊಮ್ಮೆ ನದಿಯಲ್ಲಿ ಹೆಚ್ಚಿನ ನೀರು ಹರಿದರೆ ಕಿಂಡಿ ಅಣೆಕಟ್ಟಿಗೆ ಅಪಾಯ ಉಂಟಾಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್‌ ಗೆಲ್ಲುತ್ತೆ: ಸುರ್ಜೇವಾಲಾ ವಿಶ್ವಾಸ
ದಾವಣಗೆರೆ ಟಿಕೆಟ್‌ ಘೋಷಣೆ ಮುನ್ನವೇ ಕೈ ನಾಮಪತ್ರ