ಸೌಲಭ್ಯಕ್ಕೂ ಸಿಬಿಐ ತನಿಖೆಗೂ ಏನು ಸಂಬಂಧ?: ಉಪ ಲೋಕಾಯುಕ್ತ ವೀರಪ್ಪ

KannadaprabhaNewsNetwork |  
Published : May 29, 2025, 01:48 AM IST

ಸಾರಾಂಶ

ಸಮಾಜ ಕಲ್ಯಾಣ ಇಲಾಖೆಯಿಂದ ಅಂತರ್ಜಾತಿ ವಿವಾಹವಾದ ಜೋಡಿಗೆ ೩ ಲಕ್ಷ ರು. ಪ್ರೋತ್ಸಾಹಧನ ನೀಡಿದ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಾವ್ಯ ಅವರ ಕಾರ್ಯವೈಖರಿಗೆ ಉಪಲೋಕಾಯುಕ್ತ ಬಿ.ವೀರಪ್ಪ ಮೆಚ್ಚುಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಸ್ವೀಕರಿಸುವ ವೇಳೆ ಸಿವಿಲ್ ವ್ಯಾಜ್ಯಗಳು ಹಾಗೂ ಕಂದಾಯ ಇಲಾಖೆಗೆ ಸಂಬಂಧಪಟ್ಟ ದೂರುಗಳೇ ಹೆಚ್ಚಾಗಿದ್ದವು. ಅದರಲ್ಲಿ ಕೆಲವೊಂದು ಅಪರೂಪದ ಸಂಗತಿಗಳೂ ಕಂಡುಬಂದಿದ್ದು ವಿಶೇಷವಾಗಿತ್ತು.

ನಗರದ ಹೊರವಲಯದಲ್ಲಿರುವ ವಿವೇಕಾನಂದನಗರಕ್ಕೆ ಇದುವರೆಗೂ ಮೂಲಸೌಲಭ್ಯಗಳನ್ನು ಕಲ್ಪಿಸಿಲ್ಲವೆಂದು ಬಡಾವಣೆಯ ನಿವಾಸಿಯೊಬ್ಬರು ಅಹವಾಲು ಸಲ್ಲಿಸಿದರು. ಇದಕ್ಕೆ ಉತ್ತರಿಸಿದ ಮುಡಾ ಆಯುಕ್ತೆ ವೀಣಾ ಅವರು, ಸಿಬಿಐ ತನಿಖೆ ನಡೆಯುತ್ತಿದೆ ಎಂದಾಗ ಉಪ ಲೋಕಾಯುಕ್ತರು ಸಿಡಿಮಿಡಿಗೊಂಡರು.

ಸಿಬಿಐ ತನಿಖೆಗೂ ಮೂಲಭೂತ ಸೌಲಭ್ಯ ಕಲ್ಪಿಸುವುದಕ್ಕೂ ಏನಮ್ಮ ಸಂಬಂಧ. ಸೌಲಭ್ಯ ಕಲ್ಪಿಸಬಾರದೆಂದು ಸಿಬಿಐ ಹೇಳಿದೆಯಾ, ಕೋರ್ಟ್ ಹೇಳಿದೆಯಾ. ನಿಮ್ಮಿಂದ ಸೌಲಭ್ಯ ಕಲ್ಪಿಸಲು ಆಗದಿದ್ದರೆ ಹೇಳಿಬಿಡಿ ಎಂದು ಗದರಿದಾಗ, ಆಯುಕ್ತೆ ವೀಣಾ ಅವರು ಬಡಾವಣೆಗೆ ಸೌಲಭ್ಯ ಕಲ್ಪಿಸಿಕೊಡುವ ಕುರಿತಂತೆ ಪರಿಶೀಲನೆ ನಡೆಸುವುದಾಗಿ ಉತ್ತರಿಸಿದರು.

ಸರ್ಕಾರಿ ಭೂಮಿ ರಕ್ಷಣೆ ನಿಮ್ಮ ಕೆಲಸ:

ಮಂಡ್ಯ ತಾಲೂಕಿನ ಬೇವುಕಲ್ಲು ಗ್ರಾಮದಲ್ಲಿ ಕೈಮಗ್ಗ ಇಲಾಖೆಗೆ ಸೇರಿದ ಜಾಗದಲ್ಲಿ ದನ- ಕರುಗಳನ್ನು ಕಟ್ಟಿಹಾಕುತ್ತಿದ್ದು, ಅದನ್ನು ತಪ್ಪಿಸುವಂತೆ ಪಿಡಿಒಗೆ ಹೇಳಿದರೆ, ಅವರು ಕಟ್ಟಿಹಾಕಿಕೊಂಡರೆ ನಿಮಗೇನ್ರೀ ಎಂದು ನಮ್ಮನ್ನೇ ಪ್ರಶ್ನಿಸುತ್ತಾರೆ ಎಂದು ಸ್ಥಳೀಯರೊಬ್ಬರು ಉಪ ಲೋಕಾಯುಕ್ತರ ಗಮನಕ್ಕೆ ತಂದರು.

ನೀನು ಪಿಡಿಒ ಆಗಿರುವುದು ಏತಕ್ಕೆ. ಸರ್ಕಾರಿ ಭೂಮಿಯನ್ನು ರಕ್ಷಣೆ ಮಾಡುವುದು ನಿಮ್ಮ ಕೆಲಸ ಕಣ್ರೀ. ದನ- ಕರುಗಳನ್ನು ಕಟ್ಟಿಹಾಕಿಕೊಳ್ಳಲಿ ಎಂದು ಈಗ ಬಿಟ್ಟರೆ ಮುಂದೊಂದು ದಿನ ಆ ಜಾಗ ನಮ್ಮದೇ ಎಂದು ನ್ಯಾಯಾಲಯಕ್ಕೆ ಹೋದರೆ ಏನ್ರೀ ಮಾಡ್ತೀರಾ. ಈಗಲೇ ಜಾಗವನ್ನು ಖಾಲಿ ಮಾಡಿಸಿ ರಕ್ಷಣೆ ಮಾಡಿಕೊಳ್ಳುವಂತೆ ಪಿಡಿಒಗೆ ಸೂಚಿಸಿದರು.

ವಸ್ತ್ರಸಂಹಿತೆ ಗೊತ್ತಿದೆಯೇನ್ರೀ..!:

ಸಾರ್ವಜನಿಕರಿಂದ ಬಂದ ದೂರೊಂದಕ್ಕೆ ಉತ್ತರಿಸಲು ಪಾಂಡವಪುರ ತಾಲೂಕು ದೊಡ್ಡ ಬ್ಯಾಡರಹಳ್ಳಿ ವೃತ್ತ ಗ್ರಾಮ ಆಡಳಿತಾಧಿಕಾರಿ ಜೀನ್ಸ್ ಪ್ಯಾಂಟ್ ಧರಿಸಿಕೊಂಡು ಬಂದಿದ್ದನ್ನು ಗಮನಿಸಿದ ಉಪ ಲೋಕಾಯುಕ್ತರು, ನಿಮಗೆ ವಸ್ತ್ರಸಂಹಿತೆ ಬಗ್ಗೆ ಗೊತ್ತಿದೆಯೇನ್ರೀ. ಸರ್ಕಾರಿ ನೌಕರರು ಜೀನ್ಸ್ ಪ್ಯಾಂಟ್-ಟೀ-ಶರ್ಟ್ ಹಾಕುವಂತಿಲ್ಲ. ನಿಯಮ ಪಾಲನೆಯೊಂದಿಗೆ ಶಿಸ್ತುಬದ್ಧವಾಗಿ ಕೆಲಸ ಮಾಡುವುದನ್ನು ಮೊದಲು ರೂಢಿಸಿಕೊಳ್ಳುವಂತೆ ಸೂಚಿಸಿದರು.

ಅಂತರ್ಜಾತಿ ವಿವಾಹಕ್ಕೆ ೩ ಲಕ್ಷ ಪ್ರೋತ್ಸಾಹ ಧನ: ಉಪಲೋಕಾಯುಕ್ತ ಮೆಚ್ಚುಗೆ

ಸಮಾಜ ಕಲ್ಯಾಣ ಇಲಾಖೆಯಿಂದ ಅಂತರ್ಜಾತಿ ವಿವಾಹವಾದ ಜೋಡಿಗೆ ೩ ಲಕ್ಷ ರು. ಪ್ರೋತ್ಸಾಹಧನ ನೀಡಿದ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಾವ್ಯ ಅವರ ಕಾರ್ಯವೈಖರಿಗೆ ಉಪಲೋಕಾಯುಕ್ತ ಬಿ.ವೀರಪ್ಪ ಮೆಚ್ಚುಗೆ ಸೂಚಿಸಿದರು.

ಮಂಡ್ಯ ತಾಲೂಕು ಹೊಸಬೂದನೂರು ಗ್ರಾಮದ ಗೌಂಡರ್ ಜಾತಿಗೆ ಸೇರಿದ ಬಿ.ಎಸ್.ಕೃಷ್ಣಮೂರ್ತಿ ಹಾಗೂ ಬೆಂಗಳೂರಿನ ಪರಿಶಿಷ್ಟ ಜಾತಿಗೆ ಸೇರಿದ ಶಂಕರಿ ಎಂಬುವರು ವಿವಾಹವಾಗಿದ್ದರು. ಅಂತರ್ಜಾತಿ ವಿವಾಹ ಸಂಬಂಧ ನೀಡುವ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಿದ್ದರೂ ಜಾತಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿರಲಿಲ್ಲ. ಆ ಸಮಯದಲ್ಲಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಾವ್ಯ ಅವರು ಶಂಕರಿಗೆ ಸಂಬಂಧಿಸಿದ ವಿದ್ಯಾಭ್ಯಾಸದ ದಾಖಲೆಗಳನ್ನೆಲ್ಲಾ ತರಿಸಿಕೊಂಡು ಜಾತಿ ಪ್ರಮಾಣಪತ್ರವನ್ನು ದೊರಕಿಸಿಕೊಟ್ಟು ಅಫಿಡೆವಿಟ್ ಮಾಡಿಸಿಕೊಟ್ಟಿದ್ದರು. ಉಪ ಲೋಕಾಯುಕ್ತರು ದೂರು ಸ್ವೀಕಾರ ವೇಳೆ ೩ ಲಕ್ಷ ರು. ಪ್ರೋತ್ಸಾಹಧನವನ್ನು ನೀಡುವುದರೊಂದಿಗೆ ಅಧಿಕಾರಿ ಕಾವ್ಯ ಮೆಚ್ಚುಗೆಗೆ ಪಾತ್ರರಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ