ಷರತ್ತು ಉಲ್ಲಂಘನೆ: ಕೆಮಿಕಲ್‌ ಕಂಪನಿಗಳಿಗೆ ಅಂತಿಮ ನೋಟೀಸ್‌ ?

KannadaprabhaNewsNetwork |  
Published : May 29, 2025, 01:46 AM IST
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ನೋಟ. | Kannada Prabha

ಸಾರಾಂಶ

Violation of conditions: Final notice to chemical companies?

- ನಿಯಮಗಳ ಉಲ್ಲಂಘಿಸಿದ ಕೈಗಾರಿಕೆಗಳಿಗೆ ಜಿಲ್ಲಾಧಿಕಾರಿ ಪತ್ರ। ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ : ಪರಿಸರ ಮಾಲಿನ್ಯ, ಜೀವಸಂಕುಲಕ್ಕೆ ಧಕ್ಕೆ

- ಕನ್ನಡಪ್ರಭ ಸರಣಿ ವರದಿ ಭಾಗ : 51ಆನಂದ ಬಿ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಕಡೇಚೂರು- ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ 27 ಕಂಪನಿಗಳಿಗೆ ಮೇ 21 ರಂದು ಕಾರಣ ಕೇಳಿ ನೋಟೀಸ್‌ ಜಾರಿ ಮಾಡಿದ್ದ ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ, ಇದೀಗ ಸರ್ಕಾರದ ಷರತ್ತುಗಳ ಹಾಗೂ ನಿಯಮಗಳ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಆರೋಪದಡಿ ಇದೀಗ ಅಲ್ಲಿನ ಕೆಲವು ಕೆಮಿಕಲ್‌-ತ್ಯಾಜ್ಯ ಕಂಪನಿಗಳ ವಿರುದ್ಧ ಅಂತಿಮ ನೋಟಿಸ್‌ ಜಾರಿ ಮಾಡಿದ್ದಾರೆನ್ನಲಾಗಿದೆ.

"ಕನ್ನಡಪ್ರಭ "ಕ್ಕೆ ಬಲ್ಲ ಮೂಲಗಳ ಪ್ರಕಾರ, ಪರಿಸರ ಮಾಲಿನ್ಯ, ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮಗಳ ಕುರಿತು ಸಹಾಯಕ ಆಯುಕ್ತ ಡಾ. ಹಂಪಣ್ಣ ಸಜ್ಜನ್‌ ನೇತೃತ್ವದ ಅಧ್ಯಯಸ ಸಮಿತಿ ನೀಡಿದ ವರದಿ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 152 ರಡಿ ಕಾರಣ ಕೇಳಿ 27 ಕಂಪನಿಗಳಿಗೆ ನೋಟಿಸ್‌ ಜಾರಿ ಮಾಡಿದ್ದ ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ, ಮಹತ್ವದ ಬೆಳವಣಿಗೆಯೊಂದರಲ್ಲಿ ಈಗ ಅಂತಿಮ ನೋಟಿಸ್‌ ನೀಡಿ ವಾರಕಾಲ ಉತ್ತರಿಸುವಂತೆ ಸೂಚಿಸಿದ್ದಾರೆನ್ನಲಾಗಿದೆ.

ಇನ್ನು, ಅಲ್ಲಿನ ಜನರ ಅಸ್ವಾಭಾವಿಕ ಸಾವು-ನೋವುಗಳು ಜನರ ಆತಂಕ ಮೂಡಿಸಿದೆ. ಯಾವುದೇ ದುಶ್ಚಟಗಳಿರದಿದ್ದರೂ, ಶ್ವಾಸಕೋಶ ಕ್ಯಾನ್ಸರ್‌, ಉಸಿರಾಟದ ತೊಂದರೆ ಮುಂತಾದ ಕಾರಣಗಳಿಂದಾಗಿ ಜೀವ ಕಳೆದುಕೊಳ್ಳುತ್ತಿರುವವ ಸಂಖ್ಯೆ ಹೆಚ್ಚುತ್ತಿರುವುದು ಜನರ ಭೀತಿಗೆ ಕಾರಣವಾಗಿದೆ. ಕೆಮಿಕಲ್‌ ಕಂಪನಿಗಳ ವಿರುದ್ಧ ಅವರ ಆಕ್ರೋಶ ಮಡುಗಟ್ಟಿದೆ.

----

ಕೋಟ್- 1: ಬಾಡಿಯಾಳ ಗ್ರಾಮದಲ್ಲಿ ನಮ್ಮ ಸಂಬಂಧಿಕರೊಬ್ಬರು ಎರಡು-ಮೂರು ತಿಂಗಳ ಕಾಲ ಆಸ್ಪತ್ರೆಗೆ ಅಲೆದಾಡಿ ಲಕ್ಷಾಂತರ ರೂಪಾಯಿಗಳ ಹಣವನ್ನು ಖರ್ಚು ಮಾಡಿದ್ದರು. ಆದರೆ, ಕೆಲ ದಿನಗಳಿಂದೆ ಅವರು ಜೀವ ಕಳೆದುಕೊಂಡರು. ಯಾವುದೇ ದುಶ್ಚಟ ಇರಲಿಲ್ಲ, ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇತ್ತು ಎಂದು ತಿಳಿದು ಬಂದಿದೆ. ಕೆಮಿಕಲ್‌ ತ್ಯಾಜ್ಯ ಕಂಪನಿಗಳಿಂದಾಗುವ ಮಾಲಿನ್ಯದಿಂದ ಈ ಸಾವು ಸಂಭವಿಸಿದೆ ಎಂಬ ಅನುಮಾನವು ಹೆಚ್ಚಾಗಿದೆ.

- ಕಾಶಪ್ಪ ಹಲಿಗಿ, ಹೆಗ್ಗಣಗೇರಾ (28ವೈಡಿಆರ್‌11)

------

ಕೋಟ್- 2: ಕಡೇಚೂರು- ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿತವಾಗಿರುವ ರಾಸಾಯನಿಕ ಕಂಪನಿಗಳು ನಿಯಮಗಳನ್ನು ಗಾಳಿಗೆ ತೂರಿ ತ್ಯಾಜ್ಯವಸ್ತುಗಳ ವಿಲೇವಾರಿ ಮಾಡುತ್ತಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಾಣಿ- ಪಕ್ಷಿಗಳು, ಮತ್ತು ಮಾನವರ ಜೀವಕ್ಕೆ ಈ ಕಂಪನಿಗಳು ಯಮಪಾಶವಾಗಿವೆ. ಇಲ್ಲಿನ ಬಹುಪಾಲು ರೈತಾಪಿ ವರ್ಗವು ಭೂಮಿ ಕಳೆದುಕೊಂಡು ಹಣ ಖರ್ಚು ಮಾಡಿ ಉದ್ಯೋಗವಿಲ್ಲದೆ ಕೆಲವರು ಮಹಾನಗರಗಳಿಗೆ ಗುಳೆ ಹೋದರೆ, ಇನ್ನೂ ಕೆಲವರು ಆನಾರೋಗ್ಯದಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ಸರಕಾರವು ಇತಂಹ ಕೈಗಾರಿಕೆಗಳನ್ನು ತರವು ಬದಲು ರೈತರಿಗೆ ಮರಳಿ ಭೂಮಿ ನೀಡಿದ್ದಾರೆ. ಅನೇಕ ರೈತರ ಜೀವನವು ಸುಖಕರವಾಗಿರುತ್ತದೆ.

- ಮಹಾದೇವಪ್ಪ ದದ್ದಲ್, ಅಧ್ಯಕ್ಷರು, ಪ್ರಾಥಮಿಕ ಪತ್ತಿನ ಸಹಕಾರ ಸಂಘ ನಿಯಮಿತ, ಕಡೇಚೂರು. (28ವೈಡಿಆರ್‌12)

-----

ಕೋಟ್- 3 : ನಮ್ಮ ಕಡೇಚೂರು -ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಫಾರ್ಮಾ ಕಂಪನಿಗಳು ಮತು ಘನತ್ಯಾಜ್ಯ ವಿಲೆವಾರಿ ಘಟಕಗಳನ್ನು ಯಾರ ಉದ್ಧಾರಕ್ಕೆ ಸ್ಥಾಪನೆಗೆ ಸರಕಾರ ಅನುಮತಿ ನೀಡಿದೆಯೋ ತಿಳಿಯುತ್ತಿಲ್ಲ ? ಕಾರಣ, ನಮ್ಮ ಭಾಗದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಆದರಿಂದ ರೈತರು, ಕೂಲಿ ಕಾರ್ಮಿಕರು ದುಡಿದ ಹಣವನ್ನು ಆಸ್ಪತ್ರೆಗೆ ಇಡುತ್ತಿರುವುದಂತೂ ಸುಳ್ಳಲ್ಲ. ಅದಕ್ಕೋಸ್ಕರ ಕಂಪನಿಗಳನ್ನು ಬಂದ್ ಮಾಡಿ, ರೈತರ ಭೂಮಿ ರೈತರಿಗೆ ನೀಡಿ ಹೇಗಾದರು ಮಾಡಿ, ಆರೋಗ್ಯ ಕಾಪಾಡಿಕೊಂಡು ದುಡಿದು ನೆಮ್ಮದಿಯಾಗಿರುತ್ತೇವೆ.

- ರವೀಂದ್ರ ಯಾಟಗಲ್, ಬಾಡಿಯಾಳ. (28ವೈಡಿಆರ್‌13)

-

ಕೋಟ್ -4 : ನಮ್ಮೂರಿನಲ್ಲಿ ಸ್ಥಾಪಿತವಾಗಿರುವ ಈ ಕಂಪನಿಗಳು ದಿನಾನಿತ್ಯ ಹೊರ ಹಾಕುವ ಕಲುಷಿತ ಮತ್ತು ದುರ್ನಾತ ನಮ್ಮ ಜೀವ ಹಿಂಡುತ್ತಿದೆ. ರಾತ್ರಿಯ ವೇಳೆ ನಮ್ಮ ಗ್ರಾಮದ ಪ್ರತೀ ಮನೆಗಳ ಬಾಗಿಲು, ಕಿಟಕಿಯನ್ನು ಮುಚ್ಚಿಕೊಂಡು ಮಲಗುವ ಸ್ಥಿತಿ ಬಂದಿದೆ. ಮುಂದಿನ ದಿನಗಳಲ್ಲಿ ಅಸ್ತಮಾ, ಕ್ಷಯ, ಕಣ್ಣಿನ ತೊಂದರೆ, ಚರ್ಮ ಕಾಯಿಲೆ ಇರುವ ಮನೆಗೊಬ್ಬ ವ್ಯಕ್ತಿ ಹೊರಬರುವ ಸಾಧ್ಯತೆ ಹೆಚ್ಚಾಗಿದೆ. ದಯವಿಟ್ಟು ಸರಕಾರದಲ್ಲಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕಂಪನಿಗಳು ಬಂದ್ ಮಾಡಿ ನಮ್ಮ ಭಾಗದ ಮುಂದಿನ ಪೀಳಿಗೆಯನ್ನು ಉಳಿಸುವ ಕಾರ್ಯಕ್ಕೆ ಅತಿ ತುರ್ತಾಗಿ ಮುಂದಾಗಬೇಕು.

- ಸರಸ್ವತಿ ಬಸವರಾಜ ಸಜ್ಜನ್, ಕಡೇಚೂರು. (28ವೈಡಿಆರ್‌14)

-----

ಕೋಟ್ - 5 : ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಬೆರಳಣಿಕೆಯಷ್ಟು ರಾಸಾಯನಿಕ ಕಂಪನಿಗಳು ಪ್ರಾರಂಭಿಸಿದರ ಪರಿಣಾಮ ಆ ಕಂಪನಿಗಳು ಬಿಡುವ ದುರ್ನಾತ ಮತ್ತು ಕೆಮಿಕಲ್ ಮಿಶ್ರಿತ ನೀರು ಸುತ್ತಮುತ್ತಲಿನ ಕನಿಷ್ಠ 10 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ಜನರ ಮತ್ತು ಪ್ರಾಣಿ ಪಕ್ಷಿಗಳ ಮೇಲೆ ಕೆಟ್ಟ ಪರಿಣಾಮಯುಂಟಾಗುತ್ತದೆ. ಒಂದು ವೇಳೆ ಸರಕಾರ ಉದ್ದೇಶಿತ ಫಾರ್ಮಾ ಹಬ್‍ನ್ನು ಪ್ರಾರಂಭಿಸಿದರೆ ಇದು ಇಡೀ ಜಿಲ್ಲೆಯನ್ನು ಅನಾರೋಗ್ಯ ಪೀಡಿತ ಜಿಲ್ಲೆಯನ್ನಾಗಿ ಮಾಡುವುದು ಗ್ಯಾರಂಟಿಯಾಗಿದೆ. ಯಾರರೂ ಕೂಡ ನೆಮ್ಮದಿಯ ಜೀವನ ಸಾಗಿಸಲು ಕಷ್ಟವಾಗುತ್ತದೆ. ಆದರಿಂದ ಜಿಲ್ಲೆಯ ಎಲ್ಲಾ ಹೋರಾಟಗರು, ಜನಸಾಮನ್ಯರು ಹೆಚ್ಚೆತ್ತುಕೊಳ್ಳಬೇಕಾಗಿದೆ.

- ಮಲ್ಲರೆಡ್ಡಿಗೌಡ ಖಾನಾಪುರ, ಸೈದಾಪುರ. (28ವೈಡಿಆರ್‌15)

----

28ವೈಡಿಆರ್‌10 : ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ನೋಟ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ