ಧಾರವಾಡ:
ಅಧಿಕಾರ ವಿಕೇಂದ್ರೀಕರಣದ ಮೂಲಕ ಪಂಚಾಯಿತಿಗಳನ್ನು ಶಕ್ತಿಯುತಗೊಳಿಸುವ ದಿಸೆಯಲ್ಲಿ ಧಾರವಾಡ ಜಿಲ್ಲೆಯ ಬೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರಲಕಟ್ಟಿಯಲ್ಲಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿಯೇ ಬೇಲೂರು ಘೋಷಣೆ ಆಗಿದ್ದು ವಿಶೇಷ.2004ರ ಜ. 23ರಂದು ಆಯೋಜಿಸಿದ ಪಂಚಾಯತ್‌ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚಾರಿತ್ರಿಕ ಸಮಾವೇಶ ಪಂಚಾಯಿತಿಗಳ ಸ್ವರೂಪವನ್ನೇ ಬದಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಇದು ಬೇಲೂರು ಸಮಾವೇಶ ಎಂದೇ ರಾಜ್ಯ ರಾಜಕೀಯ ಇತಿಹಾಸದಲ್ಲಿ ದಾಖಲಾಗಿದ್ದು ಹೆಗ್ಗಳಿಕೆ. ಅಲ್ಲದೇ ಎಸ್.ಎಂ. ಕೃಷ್ಣ ಅವರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಪರಮಾಧಿಕಾರ ಘೋಷಣೆ ಬೇಲೂರು ಘೋಷಣೆ ಎಂದೇ ಪ್ರಸಿದ್ಧಿ ಪಡೆಯಿತು.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪಾಲ್ಗೊಂಡ ಸಮಾವೇಶದಲ್ಲಿ ಆಡಳಿತದ ತಾಯಿಬೇರು ಗ್ರಾಮ ಪಂಚಾಯಿತಿಗಳ ಆರ್ಥಿಕ ಬಲವನ್ನು ವೃದ್ಧಿಸುವುದರೊಂದಿಗೆ ಜವಾಬ್ದಾರಿ ಹೆಚ್ಚಿಸುವ ದಿಸೆಯಲ್ಲಿ ನಡೆದ ಸಮಾವೇಶದಲ್ಲಿ ರಾಜ್ಯವಲ್ಲದೇ ಅನ್ಯ ರಾಜ್ಯಗಳ ಪಂಚಾಯಿತಿಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಮಾವೇಶ ರಾಜ್ಯದ ಅಭಿವೃದ್ಧಿಗೆ ಹೊಸ ಆಯಾಮ ನೀಡಿತು. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿಯೂ ಅಧಿಕಾರಕ್ಕೆ ಬರಬೇಕೆಂಬ ಉದ್ದೇಶವನ್ನೂ ಸಮಾವೇಶ ಹೊಂದಿತ್ತು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಪೂರಕವಾಯಿತು.ವ್ಯಾಪಕ ಪ್ರಚಾರ ಪಡೆದಿದ್ದ ಸಮಾವೇಶ:
ಧಾರವಾಡ ಜಿಲ್ಲೆಯ ನೀರಲಕಟ್ಟಿ ಗ್ರಾಮದಲ್ಲಿ ನಡೆದ ಪಂಚಾಯತರಾಜ್ ಸಮಾವೇಶದಲ್ಲಿ ಬೇಲೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರಿಯಮ್ಮ ಮಾದರ ಅವರನ್ನು ವೇದಿಕೆಗೆ ಆಹ್ವಾನಿಸಿದ ಅಂದಿನ ಸಿಎಂ ಎಸ್.ಎಂ. ಕೃಷ್ಣ, ಕರಿಯಮ್ಮ ಅವರನ್ನು ಸೋನಿಯಾ ಗಾಂಧಿ ಪಕ್ಕದ ಆಸನದಲ್ಲಿ ಕೂಡಿಸುವ ಮೂಲಕ ಸಮಾವೇಶದ ಆಶಯವನ್ನು ಸೂಚ್ಯವಾಗಿ ತಿಳಿಸಿದ್ದು ವ್ಯಾಪಕ ಪ್ರಚಾರ ಪಡೆಯಿತು. ಮರುದಿನ ಸೋನಿಯಾ ಗಾಂಧಿ ಹಾಗೂ ಸಿಎಂ ಎಸ್.ಎಂ. ಕೃಷ್ಣ ಕರಿಯಮ್ಮ ಮಾದರ ಕೈ ಹಿಡಿದು ದೀಪ ಪ್ರಜ್ವಲಿಸಿದ ಚಿತ್ರ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಪಡೆದಿದ್ದು ಈಗ ಇತಿಹಾಸ.ಇದಲ್ಲದೇ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಧಾರವಾಡದೊಂದಿಗೆ ಆತ್ಮೀಯ ಸಂಬಂಧವಿತ್ತು. ಸಾಂಸ್ಕೃತಿಕ ಕೇಂದ್ರ ಧಾರವಾಡದೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದ ಕೃಷ್ಣ ಅವರಿಗೆ ಹಿಂದೂಸ್ತಾನಿ ಸಂಗೀತದ ಬಗ್ಗೆ ಅಪಾರ ಒಲವು. ಇಲ್ಲಿನ ಮಲ್ಲಿಕಾರ್ಜುನ ಮನಸೂರ, ಭೀಮಸೇನ ಜೋಶಿ ಹಾಗೂ ಡಾ. ಗಂಗೂಬಾಯಿ ಹಾನಗಲ್ ಅವರ ಗಾಯನವನ್ನು ಆಲಿಸುತ್ತಿದ್ದ ಅವರು ವರಕವಿ ಬೇಂದ್ರೆ ಅವರ ಬಗ್ಗೆ ಅಗಾಧ ಪ್ರೀತಿ ಹೊಂದಿದ್ದರು. ಬೇಂದ್ರೆ ಕಾವ್ಯದ ಸಾಲುಗಳನ್ನು ಉಲ್ಲೇಖಿಸುತ್ತಿದ್ದರು.