ಕುಡಿಯುವ ನೀರಿಗಾಗಿ ಬೇಲೂರಿನ ನೆಟ್ಟೆಕೆರೆ ಗ್ರಾಮಸ್ಥರ ಪ್ರತಿಭಟನೆ

KannadaprabhaNewsNetwork |  
Published : Jun 18, 2024, 12:47 AM IST
17ಎಚ್ಎಸ್ಎನ್19 : ತಾಲೂಕಿನ ಇಬ್ಬೀಡು ಗ್ರಾಪಂ ವ್ಯಾಪ್ತೀಯ ನೆಟ್ಟೆಕೆರೆ ಗ್ರಾಮದಲ್ಲಿ ಮಹಿಳೆಯರು  ಗ್ರಾಪಂ ಪಿಡಿಒ ಹಾಗು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಬೇಲೂರು ತಾಲೂಕಿನ ಇಬ್ಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಟ್ಟೆಕೆರೆ ಗ್ರಾಮದಲ್ಲಿ ಕಳೆದ ೨೦ ದಿನಗಳಿಂದ ಸಮರ್ಪಕವಾಗಿ ಕುಡಿಯುವ ನೀರನ್ನು ಇಲ್ಲಿನ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿದಿಗಳು ನೀಡುತ್ತಿಲ್ಲ ಎಂದು ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದರು.

ಗ್ರಾಮದ ಮಹಿಳೆಯರು ಧರಣಿ । 20 ದಿನಗಳಿಂದ ಸಮರ್ಪಕ ನೀರಿಲ್ಲ ಎಂದು ಆಕ್ರೋಶ । ರಾಜ್ಯ ಸರ್ಕಾರದ ವಿರುದ್ಧ ಕಿಡಿ

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಇಬ್ಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಟ್ಟೆಕೆರೆ ಗ್ರಾಮದಲ್ಲಿ ಕಳೆದ ೨೦ ದಿನಗಳಿಂದ ಸಮರ್ಪಕವಾಗಿ ಕುಡಿಯುವ ನೀರನ್ನು ಇಲ್ಲಿನ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿದಿಗಳು ನೀಡುತ್ತಿಲ್ಲ ಎಂದು ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಗ್ರಾಮದ ಮಹಿಳೆ ಲಕ್ಷ್ಮಿ, ‘ನಮ್ಮ ಗ್ರಾಮದಲ್ಲಿ ಕೆಳಹಟ್ಟಿಯಲ್ಲಿ ಸಮರ್ಪಕವಾಗಿ ನೀರನ್ನು ಬಿಡುತ್ತಾರೆ. ಆದರೆ ನಮ್ಮ ಮೇಲಿನ ಹಟ್ಟಿಗೆ ೧೫ ದಿನಕ್ಕೊಮ್ಮೆ ನೀರು ಬಿಡುತ್ತಾರೆ. ಆ ನೀರಲ್ಲಿ ಹುಳು ಹಾಗೂ ಕೆಸರು ಮಿಶ್ರಿತ ನೀರು ಬಿಡುತ್ತಾರೆ. ನಾವು ಬದುಕುವುದಾದರೂ ಹೇಗೆ? ತಿಂಗಳಿಗೊಮ್ಮೆ ನಮಗೆ ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ. ಈಗಾಗಲೇ ಚಿಕನ್ ಗುನ್ಯಾ ಹಾಗೂ ಡೆಂಘೀ ರೋಗಗಳು ಹೆಚ್ಚಿದ್ದು ನಮ್ಮ ಊರಿನಲ್ಲಿ ಆಶಾ ಕಾರ್ಯಕರ್ತೆಯರು ಬಂದು ಇಂತಹ ನೀರನ್ನು ಹೇಗೆ ಬಳಸುತ್ತೀರೆಂದು ಕೇಳುತ್ತಾರೆ. ಇದರ ಬಗ್ಗೆ ಅಧಿಕಾರಿಗಳ ಬಳಿ ನಮ್ಮ ಸಮಸ್ಯೆ ಹೇಳಿದರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ವಾರಕ್ಕೊಮ್ಮೆ ಹಣ ಕೊಟ್ಟರೆ ನೀರು ಬಿಡುತ್ತಾರೆ. ಅವರಿಗೊಂದು ನ್ಯಾಯ, ಬಡವರಿಗೊಂದು ನ್ಯಾಯ. ನಾವೆಲ್ಲರೂ ಕೂಲಿ ಕಾರ್ಮಿಕರಾಗಿದ್ದು ಬರಿ ನೀರಿಗಾಗಿ ಹೋರಾಟ ಮಾಡುತ್ತ ಕೂತರೆ ನಮ್ಮ ಜೀವನ ಹೇಗೆ ಸಾಗುತ್ತದೆ. ಕೂಡಲೆ ನಮಗೆ ಸಮಸ್ಯೆಗಳನ್ನು ಬಗೆಹರಿಸಬೇಕು’ ಎಂದು ಮನವಿ ಮಾಡಿದರು.

ಗ್ರಾಮಸ್ಥರಾದ ಕೃಷ್ಣಮೂರ್ತಿ ಹಾಗೂ ಮೊಗಪ್ಪ ಮಾತನಾಡಿ, ‘ತಿಂಗಳಿಗೊಮ್ಮೆ ಕುಡಿಯುವ ನೀರನ್ನು ಸಮರ್ಪಕವಾಗಿ ಬಿಡುತ್ತಿಲ್ಲ. ನಮ್ಮ ಗ್ರಾಮದ ಬಳಿ ನೀರಿಗೆ ವ್ಯವಸ್ಥೆ ಇದ್ದರೂ ನಮಗೆ ಕೊಳಕು ನೀರನ್ನು ಬಿಡುತ್ತಿದ್ದಾರೆ. ನಮ್ಮ ಗ್ರಾಮದಲ್ಲಿ ವೃದ್ದರು ಹಾಗೂ ಮಕ್ಕಳೇ ಹೆಚ್ಚಿದ್ದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ನೀರನ್ನು ಉಪಯೋಗಿಸುವುದರಿಂದ ನಮ್ಮ ಗ್ರಾಮದ ಜನರು ಕಾಯಿಲೆಗೆ ತುತ್ತಾಗುತ್ತಿದ್ದು ಅವರು ದುಡಿದ ಹಣವೆಲ್ಲಾ ಆಸ್ಪತ್ರೆಗೆ ಸುರಿಯುತ್ತಿದ್ದಾರೆ. ಇಲ್ಲಿ ನೀರು ಬಿಡುವ ಸಹಾಯಕರನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಕೆಲವರು ಕುಡಿಯುವ ನೀರನ್ನು ಸಹ ಬಿಡದೆ ನಮಗೆ ಸತಾಯಿಸುತ್ತಿದ್ದಾರೆ. ಈ ಬಗ್ಗೆ ಗ್ರಾಪಂಗೆ ಮನವಿ ಮಾಡಿದರೂ ಅದು ಮೂಲೆಯ ಕಸವಾಗಿದೆ. ಕುಡಿಯುವ ನೀರಿಗೆ ಶಾಶ್ವತ ಪರಿಹಾರ ನೀಡದಿದ್ದರೆ ಎಲ್ಲರೂ ಸೇರಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ವಿಷಯ ತಿಳಿದು ದೂರವಾಣಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಶಾಸಕ ಸುರೇಶ್, ‘ನಮ್ಮ ತಾಲೂಕಿನಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ. ಕುಡಿಯುವ ನೀರಿಗೆ ಸಮಸ್ಯೆಗಳು ಬಂದರೆ ಅವರ ಮೇಲೆ‌ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ. ಸ್ಥಳೀಯ ಅಧಿಕಾರಿಗಳಿಗೆ ರಜೆ ಇದ್ದರೂ ಕೂಡ ಅಲ್ಲಿಗೆ ತೆರಳಿ ಸಮಸ್ಯೆ ಬಗೆಹರಿಬೇಕು. ಇಲ್ಲದಿದ್ದರೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತೇನೆ. ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನಗೆ ಬರುವುದರೊಳಗಾಗಿ ಸಮಸ್ಯೆ ಬಗೆಹರಿಸಬೇಕು’ ಎಂದು ಅಧಿಅಕರಿಗಳಿಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಯೊಗೇಶ್, ಬಲರಾಮ್, ಪ್ರಕಾಶ್, ದೇವರಾಜು, ಗೋವಿಂದರಾಜು, ಜ್ಯೋತಿ, ಪುಟ್ಟಲಕ್ಷ್ಮೀ , ಮಂಜುಳಾ, ಕುಮಾರಿ, ಸಾಕಮ್ಮ, ಇತರರು ಹಾಜರಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ