ಬಂದ್ ವೇಳೆ ಟೈರ್‌ಗೆ ಬೆಂ: ರೇಣು ಸೇರಿ ಹಲವರ ವಶ

KannadaprabhaNewsNetwork |  
Published : Sep 02, 2026, 02:30 AM IST
13 | Kannada Prabha

ಸಾರಾಂಶ

ಗುಟ್ಕಾ-ಪಾನ್ ಮಸಾಲ ನಿಷೇಧ ಹಾಗೂ ಭದ್ರಾ ಡ್ಯಾಂನಿಂದ ಭದ್ರಾ ಮೇಲ್ದಂಡೆಗೆ ಪ್ರಾಯೋಗಿಕವಾಗಿ 3 ಟಿಎಂಸಿ ನೀರು ಬಿಡುಗಡೆ ಆದೇಶ ವಿರೋಧಿಸಿ ಬಿಜೆಪಿ ಹಾಗೂ ಅಡಕೆ ಬೆಳೆಗಾರರ ಒಕ್ಕೂಟದಿಂದ ಮಂಗಳವಾರ ಕರೆ ನೀಡಿದ್ದ ದಾವಣಗೆರೆ ಬಂದ್‌ ವೇಳೆ ಹಳೆ ಟೈರ್‌ಗಳನ್ನು ವಿವಿಧೆಡೆ ಸುಟ್ಟು ಹಾಕಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

- ಭದ್ರಾ ಮೇಲ್ದಂಡೆ ಕಾಲುವೆಗೆ 3 ಟಿಎಂಸಿ ನೀರು, ಗುಟ್ಕಾ ನಿಷೇಧ ವಿರುದ್ಧ ಪ್ರತಿಭಟನೆ - ಬಲವಂತದಿಂದ ಅಂಗಡಿ ಮುಚ್ಚಿಸಲು ಪ್ರಯತ್ನ: ಸ್ಥಳಕ್ಕೆ ಪೊಲೀಸರು ದೌಡು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಗುಟ್ಕಾ-ಪಾನ್ ಮಸಾಲ ನಿಷೇಧ ಹಾಗೂ ಭದ್ರಾ ಡ್ಯಾಂನಿಂದ ಭದ್ರಾ ಮೇಲ್ದಂಡೆಗೆ ಪ್ರಾಯೋಗಿಕವಾಗಿ 3 ಟಿಎಂಸಿ ನೀರು ಬಿಡುಗಡೆ ಆದೇಶ ವಿರೋಧಿಸಿ ಬಿಜೆಪಿ ಹಾಗೂ ಅಡಕೆ ಬೆಳೆಗಾರರ ಒಕ್ಕೂಟದಿಂದ ಮಂಗಳವಾರ ಕರೆ ನೀಡಿದ್ದ ದಾವಣಗೆರೆ ಬಂದ್‌ ವೇಳೆ ಹಳೆ ಟೈರ್‌ಗಳನ್ನು ವಿವಿಧೆಡೆ ಸುಟ್ಟು ಹಾಕಿ, ಆಕ್ರೋಶ ವ್ಯಕ್ತಪಡಿಸಿದರು.

ನಗರದ ವಿದ್ಯಾರ್ಥಿ ಭವನ, ಶಾಬನೂರು ರಸ್ತೆ, ಕಿತ್ತೂರು ಚನ್ನಮ್ಮ ವೃತ್ತ, ರೇಣುಕಾ ಮಂದಿರ, ಈರುಳ್ಳಿ ಮಾರುಕಟ್ಟೆ ವೃತ್ತ, ಹರಳೆಣ್ಣೆ ಕೊಟ್ರಬಸಪ್ಪ ವೃತ್ತ, ಶ್ರೀ ಜಯದೇವ ವೃತ್ತ ಸೇರಿದಂತೆ ಪ್ರಮುಖ ವೃತ್ತ, ರಸ್ತೆಗಳಲ್ಲಿ ಪ್ರತಿಭಟನಾಕಾರರು ನಸುಕಿನಿಂದಲೇ ಹಳೆ ಟೈರ್‌ಗಳನ್ನು ಸುಟ್ಟು ಹಾಕುವ ಮೂಲಕ ದಾವಣಗೆರೆ ಬಂದ್‌ ತೀವ್ರತೆಯನ್ನು ಪ್ರದರ್ಶಿಸಿದರು.

ಪೊಲೀಸರೊಂದಿಗೆ ಮಾತಿನ ಚಕಮಕಿ:

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ಎಂ.ಬಸವರಾಜ ನಾಯ್ಕ, ಬಿ.ಎಸ್.ಜಗದೀಶ, ಮೆಳ್ಳೆಕಟ್ಟೆ ಎ.ಇ.ನಾಗರಾಜ, ಚಂದ್ರಶೇಖರ ಪೂಜಾರ ಇತರರ ನೇತೃತ್ವದಲ್ಲಿ ಕರೆ ನೀಡಿದ್ದ ದಾವಣಗೆರೆ ನಗರ ಬಂದ್‌ ಹಿನ್ನೆಲೆಯಲ್ಲಿ ವಿವಿಧೆಡೆ ರಸ್ತೆ ತಡೆ ನಡೆಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುವ ಮೂಲಕ ಘೋಷಣೆ ಕೂಗಲಾಯಿತು. ಜಿಲ್ಲಾ ಕೇಂದ್ರದ ಬಹುತೇಕ ಕಡೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು.

ಬಂದ್ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆ ಪ್ರದೇಶ, ಅಶೋಕ ರಸ್ತೆ, ಕುವೆಂಪು ರಸ್ತೆ, ಹದಡಿ ರಸ್ತೆ, ನಿಟುವಳ್ಳಿ ರಸ್ತೆ, ಹಳೆ ಪಿಬಿ ರಸ್ತೆ, ಕೆಆರ್ ಮಾರುಕಟ್ಟೆ, ಕಾಳಿಕಾದೇವಿ ರಸ್ತೆ, ಮಂಡಿಪೇಟೆ, ಚಾಮರಾಜಪೇಟೆ, ಚೌಕಿಪೇಟೆ, ಕಾಯಿಪೇಟೆ ಸೇರಿದಂತೆ ಬೆಳಗ್ಗೆಯಿಂದಲೇ ಅಂಗಡಿ ಮುಂಗ್ಗಟ್ಟುಗಳು ಬಂದ್ ಆಗಿದ್ದವು. ಆಟೋ ರಿಕ್ಷಾಗಳು, ಸರಕು ಸಾಗಾಣಿಕೆ, ವಾಹನಗಳು, ನಗರ ಸಾರಿಗೆ ಬಸ್ಸುಗಳು, ಕೆಎಸ್ಸಾರ್ಟಿಸಿ, ಖಾಸಗಿ ಬಸ್ಸುಗಳು, ಗ್ರಾಮೀಣ ಬಸ್ಸುಗಳು ನಿರೀಕ್ಷೆಯಷ್ಟು ಅಲ್ಲದಿದ್ದರೂ ಅಲ್ಲಲ್ಲಿ ಸಂಚರಿಸುತ್ತಿದ್ದುದು ಸಾಮಾನ್ಯವಾಗಿತ್ತು.

ಪ್ರತಿಭಟನಾಕಾರರ ಸಿಟಿ ರೌಂಡ್ಸ್:

ದಾವಣಗೆರೆ ಬಂದ್ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ವ್ಯಾಪಕ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸ್ವತಃ ಎಂ.ಪಿ.ರೇಣುಕಾಚಾರ್ಯ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ಬಿ.ಎಸ್.ಜಗದೀಶ, ಮೆಳ್ಳೆಕಟ್ಟೆ ಎ.ಇ.ನಾಗರಾಜ, ಎಂ.ಬಸವರಾಜ ನಾಯ್ಕ, ಚಂದ್ರಶೇಖರ ಪೂಜಾರ, ಬಿ.ಎಂ.ಸತೀಶ ಕೊಳೇನಹಳ್ಳಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಿಟಿ ರೌಂಡ್ಸ್ ಮಾಡುವ ಮೂಲಕ ಅಂಗಡಿ ಮುಂಗ್ಗಟ್ಟುಗಳನ್ನು ಬಂದ್ ಮಾಡುವಂತೆ, ಹೋರಾಟಕ್ಕೆ ಬೆಂಬಲಿಸುವಂತೆ ಮನವಿ ಮಾಡುತ್ತಾ ಸಾಗಿದರು.

ಬಸ್ಸು ಸಂಚಾರ ಸ್ಥಗಿತಕ್ಕೆ ಮನವಿ:

ಔಷಧಿ ಅಂಗಡಿ, ಹಾಲು, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟನ್ನು ಹೊರತುಪಡಿಸಿ, ಉಳಿದೆಲ್ಲವನ್ನೂ ಬಂದ್ ಮಾಡಿಸುತ್ತಾ ಪ್ರತಿಭಟನಾಕಾರರು ಸಾಗಿದರು. ಅಲ್ಲಲ್ಲಿ ಹಳೆ ಟೈರ್‌ಗೆ ಬೆಂಕಿ ಹಚ್ಚುತ್ತಿರುವುದು ಕಾಣುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸಿ, ಹಳೆ ಟೈರ್‌ನ್ನು ಪಕ್ಕಕ್ಕೆ ಸರಿಸುವುದು ಸಾಮಾನ್ಯವಾಗಿತ್ತು. ಇಲ್ಲಿನ ಹಳೆ ಬಸ್ಸು ನಿಲ್ದಾಣಕ್ಕೆ ತೆರಳಿದ ಪ್ರತಿಭಟನಾಕಾರರು ಬಸ್ಸು ಸಂಚಾರ ಸ್ಥಗಿತಗೊಳಿಸುವಂತೆ ಬಸ್ಸು ಮಾಲೀಕರು, ಚಾಲಕರು, ನಿರ್ವಾಹಕರಿಗೆ ಮನವಿ ಮಾಡಿದರು.

50ಕ್ಕೂ ಹೆಚ್ಚು ಮಂದಿ ವಶ:

ನಂತರ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣಕ್ಕೆ ನುಗ್ಗಿದ ಪ್ರತಿಭಟನಾಕಾರರು ಸರ್ಕಾರಿ ಬಸ್ಸುಗಳು ನಗರ ಪ್ರವೇಶಕ್ಕೆ, ಬಸ್ಸು ನಿಲ್ದಾಣದಿಂದ ಹೊರಕ್ಕೆ ಹೋಗದಂತೆ ತಡೆಯಲು ಯತ್ನಿಸಿದರು. ಬಸ್ಸು ನಿಲ್ದಾಣದೊಳಗಿದ್ದ ಬೇಕರಿ, ಹೋಟೆಲ್‌ಗಳನ್ನು ಬಂದ್ ಮಾಡುವಂತೆ ಆಗ್ರಹಿಸಿದರು. ಪ್ರಮುಖ ರಸ್ತೆಯ ಬಹುತೇಕ ಎಲ್ಲ ಹೋಟೆಲ್, ಅಂಗಡಿ ಮುಂಗ್ಗಟ್ಟುಗಳು ಮಧ್ಯಾಹ್ನದವರೆಗೂ ಬಂದ್ ಆಗಿದ್ದವು. ರೇಣುಕಾಚಾರ್ಯ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಅನಂತರ ಎಂದಿನಂತೆ ಅಂಗಡಿ ಮುಂಗ್ಗಟ್ಟು ತೆರೆದು, ವ್ಯಾಪಾರ ವಹಿವಾಟನ್ನು ವ್ಯಾಪಾರಸ್ಥರು ಮುಂದುವರಿಸಿದರು.

ಹಳೆ ಪಿ.ಬಿ. ರಸ್ತೆಯ ರಿಲಯನ್ಸ್‌ ಸ್ಮಾರ್ಟ್ ಬಜಾರ್ ತೆರೆದಿದ್ದನ್ನು ಗಮನಿಸಿದ ಪ್ರತಿಭಟನಾಕಾರರು ಒಳಗೆ ನುಗ್ಗಿ, ಲೈಟ್ ಆಫ್ ಮಾಡಿಸಿ, ಅದನ್ನು ಮುಚ್ಚಿಸಿದರು. ಮಂಗಳವಾರ ಬೆಳಗ್ಗೆ 6 ಗಂಟೆಯ ಮಬ್ಬುಗತ್ತಲಿನಿಂದಲೇ ಹೋರಾಟ ಶುರುವಾಗಿತ್ತು. ಬಂದ್ ವೇಳೆ ಒತ್ತಾಯಪೂರ್ವಕವಾಗಿ ಅಂಗಡಿ ಮುಂಗ್ಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದರು. ಇಲ್ಲಿನ ಅಕ್ಕ ಮಹಾದೇವಿ ರಸ್ತೆಯಲ್ಲಿ ಅಂಗಡಿ ಮುಚ್ಚಿಸಲು ಯತ್ನಿಸಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು ಇತರರನ್ನು ಪೊಲೀಸರು ವಶಕ್ಕೆ ಪಡೆದರು.

ತೆರೆದ ವಾಹನದಲ್ಲಿ ಪ್ರತಿಭಟನೆ:

ನಂತರ ತೆರೆದ ವಾಹನದಲ್ಲಿ ಮೆರವಣಿಗೆ ಹೊರಟ ಎಂ.ಪಿ.ರೇಣುಕಾಚಾರ್ಯ ಇತರರನ್ನು ಪೊಲೀಸರು ತಡೆದ ವೇಳೆ ತೀವ್ರ ವಾಗ್ವಾದ, ಮಾತಿನ ಚಕಮಕಿ, ತಳ್ಳಾಟ ನಡೆಯಿತು. ರೇಣುಕಾಚಾರ್ಯ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ಬಿ.ಎಸ್.ಜಗದೀಶ, ಮೆಳ್ಳೆಕಟ್ಟೆ ಎ.ಇ.ನಾಗರಾಜ ಸೇರಿದಂತೆ ಅನೇಕರು ಪಿಜೆ ಬಡಾವಣೆಯಲ್ಲಿ ತೆರೆದ ವಾಹನದಲ್ಲಿ ಪ್ರತಿಭಟನೆಯಲ್ಲಿ ಸಾಗುತ್ತಿದ್ದನ್ನು ತಡೆದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮುಖಂಡರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ಪೊಲೀಸ್ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಪ್ರತಿಭಟನೆಯ ನೇತೃತ್ವದ ವಹಿಸಿದ್ದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು, ಪೊಲೀಸ್ ಕವಾಯಿತು ಮೈದಾನಕ್ಕೆ ಕರೆದೊಯ್ದು, ಮಧ್ಯಾಹ್ನದ ನಂತರ ಬಿಡುಗಡೆ ಮಾಡಿದರು.

- - -

(ಬಾಕ್ಸ್‌)

* ಬಂದ್‌ ವೇಳೆ ನೂಕಾಟ: ಹಲವರಿಗೆ ಗಾಯ

ದಾವಣಗೆರೆ: ದಾವಣಗೆರೆ ಬಂದ್ ವೇಳೆ ಪೊಲೀಸರು ವಶಕ್ಕೆ ಪಡೆಯುವ ವೇಳೆ ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಎರಡೂ ಕೈಗಳಿಗೆ ತರಚು ಗಾಯಗಳಾಗಿದ್ದು, ರೇಣುಕಾಚಾರ್ಯ ಸೇರಿದಂತೆ 45ಕ್ಕೂ ಹೆಚ್ಚು ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ಮಂಗಳವಾರ ವಶಕ್ಕೆ ಪಡೆದರು.ನಂತರ ಪೊಲೀಸ್ ಕವಾಯಿತು ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಮುಖಂಡರು, ಕಾರ್ಯಕರ್ತರು ಹಾಗೂ ತಮ್ಮ ಮೇಲೆ ಪೊಲೀಸರು ಹಲ್ಲೆ ಮಾಡಿದ್ದು, ಶಾಂತಿಯುತ ಹೋರಾಟ ನಡೆಸಿದ್ದವರ ಮೇಲೆ ದೌರ್ಜನ್ಯ ಎಸಗುವುದೇನಿತ್ತು ಎಂದರು.

ಮಾನವೀಯತೆಯನ್ನೇ ಮರೆತು ಪೊಲೀಸರು ಮೃಗದ ರೀತಿ ವರ್ತಿಸಿದ್ದಾರೆ. ಬಹಳಷ್ಟು ಜನರಿಗೆ ಸಣ್ಣಪುಟ್ಟ ಗಾಯಗಳು, ತರಚು ಗಾಯಗಳಾಗಿವೆ. ರೈತರ ಪರವಾಗಿ ಹೋರಾಟ ಮಾಡುತ್ತಿದ್ದರೆ ಅನಗತ್ಯವಾಗಿ ಪೊಲೀಸರು ಪ್ರಚೋದನೆ ಮಾಡುವ ಉದ್ದೇಶ ಏನಿತ್ತು? ನಮ್ಮನ್ನು ಕೆರಳಿಸಿದ್ದೀರಿ. ನಮ್ಮ ಕಾರ್ಯಕರ್ತರ ಮೇಲೆ ಪೊಲೀಸರಿಂದ ಹಲ್ಲೆ ಮಾಡಿಸಿದ್ದೀರಿ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಬಂದೇ ಬರುತ್ತದೆ. ಇವತ್ತು ದೌರ್ಜನ್ಯ ಎಸಗಿದ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಹೆಸರನ್ನು ಪಟ್ಟಿ ಮಾಡಿಟ್ಟುಕೊಂಡಿದ್ದೇವೆ ಎಂದು ಗುಟುರು ಹಾಕಿದರು.ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಸೋಮವಾರ ನನಗೆ ಕರೆ ಮಾಡಿದ್ದರು. ಕಾರಜೋಳ ಅವರಿಗೂ ಹೇಳಿ, ಮನವರಿಕೆ ಮಾಡಿಕೊಟ್ಟಿದ್ದೇನೆ. ತುಂಗಾ ನದಿಯಿಂದ ಭದ್ರಾ ಡ್ಯಾಂಗೆ 17.41 ಟಿಎಂಸಿ ನೀರು ತುಂಬಿಸಿ, ಭದ್ರಾ ಮೇಲ್ದಂಡೆಗೆ ನೀರು ಒಯ್ಯಲಿ ಎಂಬುದನ್ನು ವಿವರಿಸಿದ್ದೇನೆ ಎಂದು ಅವರು ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಬಿಡುವ ಬಗ್ಗೆ ಇರುವ ಷರತ್ತನ್ನು ಉಲ್ಲಂಘಿಸಿದ್ದಾರೆ. ತುಂಗಾ ನದಿ, ಡ್ಯಾಂನಿಂದ 17.41 ಟಿಎಂಸಿ ನೀರನ್ನು ಭದ್ರಾ ಡ್ಯಾಂಗೆ ಲಿಫ್ಟ್ ಮಾಡಬೇಕೆಂಬ ಷರತ್ತು ಇದೆ. ಅದನ್ನು ಉಲ್ಲಂಘಿಸಿ, ರಾಜ್ಯ ಸರ್ಕಾರ ಹಿರಿಯೂರು ಉಪ ಚುನಾವಣೆ ಗಮನದಲ್ಲಿಟ್ಟುಕೊಂಡು, 3 ಟಿಎಂಸಿ ನೀರನ್ನು ಭದ್ರಾ ಮೇಲ್ದಂಡೆಗೆ ಹರಿಸಲು ಆದೇಶಿಸಿದ್ದು ಸರಿಯಲ್ಲ. ಗುಟ್ಕಾ ನಿಷೇಧಿಸಲು ಮುಂದಾಗಿದ್ದೂ ಸರಿಯಲ್ಲ. ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ನಾವು ಹೋರಾಟ ಮಾಡಿದ್ದೇವೆ ಎಂದು ರೇಣುಕಾಚಾರ್ಯ ಹೇಳಿದರು.ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಮಾತನಾಡಿ, ಗುಟ್ಕಾ ಬ್ಯಾನ್ ಗೊಂದಲದಿಂದಾಗಿ ಅಡಕೆ ಬೆಳೆಗಾರರಿಗೆ ನಷ್ಟವಾಗುತ್ತಿದೆ. ಅಡಕೆ ಬೆಲೆ ದಿಢೀರನೇ ಕುಸಿಯುತ್ತಿದೆ. ರಾಜ್ಯ ಸರ್ಕಾರದ ಇಂತಹ ರೈತವಿರೋಧಿ ನೀತಿ ವಿರುದ್ಧ ನಮ್ಮ ಹೋರಾಟ ನಡೆಸಿದ್ದೇವೆ. ತುಂಗಾ ಡ್ಯಾಂನಿಂದ 17.41 ಟಿಎಂಸಿ ನೀರನ್ನು ಭದ್ರಾ ಡ್ಯಾಂಗೆ ನೀರು ಲಿಫ್ಟ್ ಮಾಡಬೇಕೆಂಬ ಷರತ್ತು ಇದೆ. ಅಂತಹ ಷರತ್ತನ್ನೇ ಉಲ್ಲಂಘಿಸಿ, ಚಿತ್ರದುರ್ಗ ಶಾಖಾ ಕಾಲುವೆಗೆ ನೀರು ಬಿಡುಗಡೆ ಆದೇಶದ ವಿರುದ್ಧ ನಮ್ಮ ಹೋರಾಟ ನಡೆದಿದೆ. ಭದ್ರಾ ಅಚ್ಚುಕಟ್ಟು ರೈತರಿಗೆ ಅನ್ಯಾಯ ಆಗುತ್ತೆ. ಇಂತಹ ಆದೇಶ ಹಿಂಪಡೆಯದಿದ್ದರೆ ಮತ್ತಷ್ಟು ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

- - -(-ಫೋಟೋ ಇದೆ.)

- - -

(** ಫೋಟೋಗಳಿವೆ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರಿಗೆ ೪ ತಿಂಗಳಿಂದ ವೇತನವಿಲ್ಲ
ಮಂಡ್ಯ ಜಿಲ್ಲೆಯ ಏಳು ತಾಲೂಕನ್ನು ಬರಪೀಡಿತವೆಂದು ಘೋಷಿಸಿ: ಅಶೋಕ್‌ಕುಮಾರ್