ಧಾರವಾಡ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ಬೇಂದ್ರೆ ಅವರ ಕೊಡುಗೆ ಸಾಕಷ್ಟಿದೆ. ಕರ್ನಾಟಕಕ್ಕೆ 2ನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಸಾಹಿತಿಗಳು ಅವರು. ಈ ಹಿನ್ನೆಲೆಯಲ್ಲಿ ಅವರ ಜನ್ಮದಿನ ಸದಾ ಸ್ಮರಣೀಯವಾಗಿರಬೇಕೆಂದು ಕವಿದಿನ ಆಚರಿಸಲು ಹಲವು ಬಾರಿ ಸರ್ಕಾರದ ಮೇಲೆ ಒತ್ತಡ ತಂದಿರುವ ಫಲವಾಗಿ ಸರ್ಕಾರ ಕವಿ ದಿನ ಘೋಷಿಸುವ ಸಾಧ್ಯತೆ ಇದೆ. ರಾಜ್ಯದ ಪ್ರತಿ ಶಾಲೆ-ಕಾಲೇಜುಗಳಲ್ಲಿ ಅಂದು ಬೇಂದ್ರೆ ಹಾಡು, ವಿಚಾರ ಸಂಕಿರಣ ಮೂಲಕ ಯುವ ಜನಾಂಗಕ್ಕೆ ಬೇಂದ್ರೆ ಅವರನ್ನು ಮತ್ತಷ್ಟು ಪರಿಚಯಿಸಬೇಕು ಎನ್ನುವ ಉದ್ದೇಶ ಹೊಂದಲಾಗಿದೆ ಎಂದರು.
ಬೇಂದ್ರೆ ಅವರಿಗೆ ಜ್ಞಾನಪೀಠ ಬಂದ ದಿನ ಪ್ರತಿ ವರ್ಷ 4 ಕವಿಗಳಿಗೆ ಯುವ ಕವಿ ಪ್ರಶಸ್ತಿ ನೀಡುವ ಮೂಲಕ ಗೌರವಿಸುವ ಯೋಜನೆಯೂ ಟ್ರಸ್ಟ್ ಇಟ್ಟುಕೊಂಡಿದೆ ಎಂದ ಕಾಟ್ಕರ್, ಬೇಂದ್ರೆ ಅವರಿಗೆ ಜ್ಞಾನಪೀಠ ಬಂದು 50 ವರ್ಷಗಳಾಗಿರುವ ಸ್ಮರಣಾರ್ಥ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಸಂಘ-ಸಂಸ್ಥೆಗಳ ಸಹಕಾರದಲ್ಲಿ ನಾಕು ತಂತಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುತ್ತಿದೆ. ಜತೆಗೆ ಬೇಂದ್ರೆ ಅವರ ಪುಸ್ತಕ ಸಂಗ್ರಹಿಸುವ ಕಾರ್ಯಕ್ಕೂ ಟ್ರಸ್ಟ್ ಕೈ ಹಾಕಿದ್ದು, ನಾಡಿನ ಪ್ರಕಾಶಕರು, ಬರಹಗಾರರ ಬಳಿ ಇರುವ ಬೇಂದ್ರೆ ಕುರಿತಾದ ಪುಸ್ತಕಗಳನ್ನು ಗೌರವ ಪೂರಕ ಅಥವಾ ಬೆಲೆ ಪಡೆದು ಸಹ ನೀಡಬಹುದು ಎಂದು ತಿಳಿಸಿದರು.ಬೇಂದ್ರೆ ಅವರು ಬರೀ ಕನ್ನಡದ ಸಾಹಿತ್ಯ ಮಾತ್ರವಲ್ಲದೇ ಮರಾಠಿ ಸಾಹಿತ್ಯ ಕೃಷಿ ಸಹ ಮಾಡಿದ್ದಾರೆ. ಭಕ್ತಿ ಪರಂಪರೆ, ಕನ್ನಡ-ಮರಾಠಿ ಸಂಬಂಧದಂತಹ 2000 ಪುಟಗಳಷ್ಟು ಮರಾಠಿ ಸಾಹಿತ್ಯವಿದ್ದು, ಅದನ್ನು ಕನ್ನಡಕ್ಕೆ ಅನುವಾದಿಸುವ ಕಾರ್ಯಕ್ಕೂ ಟ್ರಸ್ಟ್ ಮುಂದಾಗಿದೆ. ಬೇಂದ್ರೆ ಭವನ ಅಭಿವೃದ್ಧಿಗಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕೀಹೊಳಿ ಅವರನ್ನೇ ಬೇಂದ್ರೆ ಭವನಕ್ಕೆ ಕರೆಯಿಸಿ ಇಲ್ಲಿಯ ಚಿತ್ರಣ ತೋರಿಸಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.