ವೈಡಿಡಿ ಕಾಲೇಜಿನಲ್ಲಿ ‘ವರಕವಿ ಬೇಂದ್ರೆ ನೆನಪು-ಗೀತೆಯ ಭಾವಾರ್ಥ’ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಬೇಲೂರು
ನವೋದಯ ಕಾವ್ಯಕಾಲಘಟ್ಟದಲ್ಲಿ ಸಾಹಿತ್ಯಕ್ಕೆ ಪರಿಪೂರ್ಣತೆ ನೀಡಿದ ಹೆಗ್ಗಳಿಕೆ ದ.ರಾ. ಬೇಂದ್ರೆ ಅವರಿಗೆ ಸಲ್ಲುತ್ತದೆ ಎಂದು ಬೇಲೂರು ತಾಲೂಕು ವಿಕಲಚೇತನರ ಸಂಘದ ಅಧ್ಯಕ್ಷ ಪುರುಷೋತ್ತಮ್ ಹೇಳಿದರು.ಬೇಲೂರು ತಾಲೂಕು ಘಟಕದ ಕರ್ನಾಟಕ ಜಾನಪದ ಪರಿಷತ್ತು ಮತ್ತು ವೈಡಿಡಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ‘ವರಕವಿ ದ.ರಾ.ಬೇಂದ್ರೆ ಒಂದು ನೆನಪು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೇಂದ್ರೆಯಂತಹ ಮಹಾನ್ ಕವಿಗಳ ಗೀತೆಗಳ ಸಂದೇಶಗಳನ್ನು ಯುವ ಸಮುದಾಯಕ್ಕೆ ತಿಳಿಸುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ಹಮ್ಮಿಕೊಂಡ ಕಾರ್ಯಕ್ರಮ ನಿಜಕ್ಕೂ ಅಗಮ್ಯವಾಗಿದೆ ಎಂದು ಹೇಳಿದರು.ಕರ್ನಾಟಕ ಜಾನಪದ ಪರಿಷತ್ತಿನ ಬೇಲೂರು ತಾಲೂಕು ಘಟಕದ ಅಧ್ಯಕ್ಷ ವೈ.ಎಸ್.ಸಿದ್ದೇಗೌಡ ಮಾತನಾಡಿ, ಕರ್ನಾಟಕ ಜಾನಪದ ಪರಿಷತ್ತು ಕಳೆದ ಐದಾರು ವರ್ಷದಿಂದ ತಾಲೂಕಿನಲ್ಲಿ ಕಲೆ. ನೃತ್ಯ, ಸಂಗೀತ, ಸಾಹಿತ್ಯ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರದಲ್ಲಿ ಅದ್ವಿತೀಯ ಕೆಲಸವನ್ನು ಮಾಡುತ್ತ ಬಂದಿದೆ. ವಿಶೇಷವಾಗಿ ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ನೀಡಿದ ಮಾಹನ್ ವ್ಯಕ್ತಿ ದ.ರಾ. ಬೇಂದ್ರೆಯವರ ಬದುಕು ಮತ್ತು ಗೀತೆಯ ಭಾವಾರ್ಥ ಕಾರ್ಯಕ್ರಮವನ್ನು ಹಮ್ಮಿಕೊಂಡು ಇಂದಿನ ಯುವ ಪೀಳಿಗೆಗೆ ತಿಳಿಸುವ, ಉಳಿಸುವ ಕೆಲಸವನ್ನು ಮಾಡಬೇಕಿದೆ ಎಂದು ಹೇಳಿದರು.
ಪತ್ರಕರ್ತ ಹೆಬ್ಬಾಳು ಹಾಲಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಕೇವಲ ಅಂಕಕ್ಕೆ ಸೀಮಿತವಾಗಿದೆ, ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕಾಲೇಜು ಮತ್ತು ಕರ್ನಾಟಕ ಜಾನಪದ ಪರಿಷತ್ತು ಹಮ್ಮಿಕೊಂಡ ಕಾರ್ಯಕ್ರಮ ನಿಜಕ್ಕೂ ಅನನ್ಯವಾಗಿದೆ. ದ.ರಾ. ಬೇಂದ್ರೆ ಬ್ರಿಟಿಷರ ದಬ್ಬಾಳಿಕೆ. ದೌರ್ಜನ್ಯ, ಶೋಷಣೆ, ಅಧಿಕಾರಶಾಹಿ, ಬಂಡವಾಳಶಾಹಿಗಳ ಅಟ್ಟಹಾಸ ಇವುಗಳನ್ನು ಸ್ವತಃ ನೊಡಿದರು. ತಾವು ಕೂಡ ಅನುಭವಿಸಿದ ಯಾತನೆಯನ್ನು ಅವರ ಸಾಹಿತ್ಯದಲ್ಲಿ ಚಿತ್ರಿಸಿ ನಾಡಿನ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ವಿಶೇಷವಾಗಿ ಅವರ ಕುರುಡು ಕಾಂಚಾಣದ ಕಾವ್ಯ ಇಂದಿಗೂ ಪ್ರಸ್ತುತವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಸಾಹಿತಿ ಇಂದ್ರಮ್ಮ ನಾಕುತಂತಿ ಮತ್ತು ಕವಯತ್ರಿ ಆಶಾಕಿರಣ್ ಪಾತರಗಿತ್ತಿ ಪಕ್ಕ ಎಂಬ ಗೀತೆಗಳ ಪ್ರಸ್ತುತಿ ಮತ್ತು ಭಾವಾರ್ಥವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ವೈಡಿಡಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಎಚ್.ಎಂ.ಮಹೇಶ್, ವಕೀಲ ಚಂದ್ರು, ಪ್ರಾಧ್ಯಾಪಕರಾದ ಮೋಹನ್ ಕುಮಾರ್, ವೀರಭದ್ರಪ್ಪ, ಅಧೀಕ್ಷಕ ಕೇಶವಕಿರಣ್ ಹಾಜರಿದ್ದರು. ನಿರೂಪಣೆಯನ್ನು ಜಾವಗಲ್ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಧನಂಜಯ ನಡೆಸಿಕೊಟ್ಟರು.ಬೇಲೂರು ವೈಡಿಡಿ ಪ್ರಥಮ ದರ್ಜೆ ಕಾಲೇಜು ಮತ್ತು ತಾಲೂಕು ಜಾನಪದ ಪರಿಷತ್ತು ಸಂಯುಕ್ರಾಶ್ರಯದಲ್ಲಿ ವರಕವಿ ದ.ರಾ. ಬೇಂದ್ರೆ ಒಂದು ನೆನಪು ಕಾರ್ಯಕ್ರಮವನ್ನು ನಡೆಸಲಾಯಿತು.