ಕನ್ನಡಪ್ರಭ ವಾರ್ತೆ ರಾಮನಗರ
2008ರ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಕನಕಪುರ ಲೋಕಸಭಾ ಕ್ಷೇತ್ರ ಕಣ್ಮರೆಯಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ರಚನೆಯಾಯಿತು.
ಅದಕ್ಕೂ ಮುನ್ನ ರಾಮನಗರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳು (ಹಿಂದಿನ ಸಾತನೂರು ಕ್ಷೇತ್ರವನ್ನೂ ಒಳಗೊಂಡು), ಬೆಂಗಳೂರಿನ ಉತ್ತರಹಳ್ಳಿ, ಆನೇಕಲ್ ಹಾಗೂ ಮಂಡ್ಯ ಜಿಲ್ಲೆಯ ಮಳವಳ್ಳಿ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡ ಕನಕಪುರ ಲೋಕಸಭಾ ಕ್ಷೇತ್ರವು ಅಸ್ತಿತ್ವದಲ್ಲಿ ಇತ್ತು. ದೇಶದಲ್ಲಿಯೇ ಅತಿದೊಡ್ಡ ಲೋಕಸಭಾ ಕ್ಷೇತ್ರ ಎಂಬ ಖ್ಯಾತಿ ಇದರದ್ದಾಗಿತ್ತು.1967ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತ್ತು. ಇಲ್ಲಿ ಮೊದಲ ಬಾರಿಗೆ ಸಂಸದರಾಗಿ ಕಾಂಗ್ರೆಸ್‌ನ ಎಂ.ವಿ. ರಾಜಶೇಖರನ್ ಆಯ್ಕೆಯಾದರು. ನಂತರದಲ್ಲಿ 1971ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜಾಫರ್ ಷರೀಫ್ ಸಂಸದರಾಗಿ ತಮ್ಮ ಗೆಲುವಿನ ಖಾತೆ ತೆರೆದರು. ಆದರೆ ಮುಂದಿನ ಚುನಾವಣೆಯಲ್ಲಿ ಜಾಫರ್ ಇಲ್ಲಿಂದ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ವಲಸೆ ಹೋದರು.
ಕನಕಪುರ ಸಂಸತ್ ಕ್ಷೇತ್ರದಿಂದ ಅತಿ ಹೆಚ್ಚು ಬಾರಿ ಆಯ್ಕೆಯಾದ ಹಿರಿಮೆ ಕಾಂಗ್ರೆಸ್‌ನ ಎಂ.ವಿ. ಚಂದ್ರಶೇಖರ ಮೂರ್ತಿ ಅವರದ್ದಾಗಿದೆ. ಒಟ್ಟು 7 ಬಾರಿ ಸ್ಪರ್ಧೆ ಮಾಡಿದ ಅವರು 6 ಚುನಾವಣೆಗಳಲ್ಲಿ ಗೆಲುವು ಸಾಧಿಸಿದರು.
ದಳಪತಿಯ ರಂಗ ಪ್ರವೇಶ:
1998ರಲ್ಲಿ ದೇಶದಾದ್ಯಂತ ಬಿಜೆಪಿ ಅಲೆ ಇತ್ತು. ಅದು ಇಲ್ಲಿಯೂ ಕೆಲಸ ಮಾಡಿತ್ತು. ಬೆಂಗಳೂರಿನ ಉತ್ತರಹಳ್ಳಿಯವರಾದ ಎಂ. ಶ್ರೀನಿವಾಸ್ ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ದಾಖಲಿಸಿದರು. ಆದರೆ ಆ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ.
2008ರ ಚುನಾವಣೆಯಲ್ಲಿ ಕನಕಪುರ ಲೋಕಸಭಾ ಕ್ಷೇತ್ರವು ವಿಸರ್ಜನೆಗೊಂಡು ಬೆಂಗಳೂರು ಗ್ರಾಮಾಂತರ ಕ್ಷೇತ್ರವು ಅಸ್ತಿತ್ವಕ್ಕೆ ಬಂದಿತು.
ಚಂದ್ರಶೇಖರಮೂರ್ತಿಯವರ ನಿಧನದ ಕಾರಣ 2002ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸ್ಪರ್ಧೆ ಮಾಡಿದರು. ಕಾಂಗ್ರೆಸ್‌ನಿಂದ ಡಿ.ಕೆ. ಶಿವಕುಮಾರ್ ಹುರಿಯಾಳಾದರು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಈ ಸ್ಪರ್ಧೆಯಲ್ಲಿ 52,576 ಮತಗಳ ಅಂತರದಿಂದ ಗೆದ್ದು ಗೌಡರು ನಿಟ್ಟುಸಿರು ಬಿಟ್ಟರು. ಬಿಜೆಪಿ ಅಭ್ಯರ್ಥಿಯಾಗಿ ಕೆ.ಎಸ್. ಈಶ್ವರಪ್ಪ ಸ್ಪರ್ಧಿಸಿದ್ದು ವಿಶೇಷ.
2004ರ ಕನಕಪುರ ಲೋಕಸಭಾ ಚುನಾವಣೆಯು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕಾಂಗ್ರೆಸ್ ಅಭ್ಯರ್ಥಿ ತೇಜಸ್ವಿನಿ ರಮೇಶ್ ನಡುವಿನ ಹೋರಾಟದಿಂದಾಗಿ ನೆನಪಿನಲ್ಲಿ ಉಳಿದಿದೆ. ತೀವ್ರ ಕುತೂಹಲ ಕೆರಳಿಸಿದ್ದ ಸ್ಪರ್ಧೆಯಲ್ಲಿ ತೇಜಸ್ವಿನಿ ಗೆಲುವು ದಾಖಲಿಸಿದರು. ಬಿಜೆಪಿಯ ರಾಮಚಂದ್ರೇ ಗೌಡ ಎರಡನೇ ಸ್ಥಾನ ಪಡೆದರು. ದೇವೇಗೌಡರು ನಂತರದ ಸ್ಥಾನಕ್ಕೆ ತಳ್ಳಲ್ಪಟ್ಟರು. ಹಾಸನದಲ್ಲೂ ಸ್ಪರ್ಧಿಸಿದ್ದ ದೇವೇಗೌಡರು ಇಲ್ಲಿ ಸೋತರೂ ಅಲ್ಲಿ ಗೆದ್ದು ಸಂಸದರಾದರು.
ಹ್ಯಾಟ್ರಿಕ್ ಸಂಸದ ಡಿಕೆ ಸುರೇಶ್:ಸಂಸತ್ ಉಪ ಚುನಾವಣೆ ಮೂಲಕವೇ ಡಿ.ಕೆ.ಸುರೇಶ್ ರಾಜಕಾರಣಕ್ಕೆ ಪ್ರವೇಶ ಮಾಡಿದವರು. ಸಂಸದರಾಗುವುದಕ್ಕೂ ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿದ್ದರು. ಸ್ಥಳೀಯ ಸಂಸ್ಥೆಗಳಲ್ಲಿಯೂ ಸ್ಪರ್ಧೆ ಕೂಡ ಮಾಡಿದವರಲ್ಲ. ಸಾತನೂರು ಹಾಗೂ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಸಹೋದರ ಡಿ.ಕೆ. ಶಿವಕುಮಾರ್ ಅವರ ಗೆಲುವಿಗಾಗಿ ರಣತಂತ್ರಗಳನ್ನು ಹೆಣೆದು ಗೆಲುವಿಗಾಗಿ ಶ್ರಮಿಸುತ್ತಿದ್ದರು.
2013ರಲ್ಲಿ ಕ್ಷೇತ್ರದ ಸಂಸದರಾಗಿದ್ದ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ನ ಅನಿತಾ ಕುಮಾರಸ್ವಾಮಿ ಅವರನ್ನು ಡಿ.ಕೆ.ಸುರೇಶ್ ಮಣಿಸಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದರು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಪಿ. ಮುನಿರಾಜುಗೌಡ ಅವರನ್ನು ಸುರೇಶ್ ಸೋಲಿಸಿದರು. ಕಳೆದ (2019)ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಡಿ.ಕೆ. ಸುರೇಶ್ ರವರು ಬಿಜೆಪಿಯ ಅಶ್ವತ್ಥ ನಾರಾಯಣಗೌಡ ಅವರನ್ನು ಪರಾಭವಗೊಳಿಸಿ ಹ್ಯಾಟ್ರಿಕ್ ಸಂಸದರಾದರು.