ಕೆ.ಆರ್.ರವಿಕಿರಣ್
ದೊಡ್ಡಬಳ್ಳಾಪುರ : ಬೆಂಕಿ ಹೊತ್ತಿಕೊಂಡಿದ್ದ ಬಸ್‌ನಲ್ಲಿ ಬೆಂಕಿಯ ಕೆನ್ನಾಲಗೆಗೆ ಸಿಕ್ಕು ನರಳಾಡುತ್ತಿದ್ದವರಿಗೆ ಆಪದ್ಬಾಂಧನವಾಗಿ ಬಂದ ಆ ವ್ಯಕ್ತಿ ತನ್ನ ಸ್ನೇಹಿತನ ಜೊತೆಗೂಡಿ ಬರೋಬ್ಬರಿ 12 ಜನರ ಪ್ರಾಣ ಉಳಿಸಿದ ಎಂದರೆ ನಂಬಲೇ ಬೇಕು. ಕಳೆದ ಶುಕ್ರವಾರ ಮಧ್ಯರಾತ್ರಿ ಆಂಧ್ರಪ್ರದೇಶದ ಕರ್ನೂಲಿನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಬೆಂಕಿ ಅನಾಹುತಕ್ಕೀಡಾದ ಘಟನೆಯಲ್ಲಿ ಈತ ಮೆರೆದ ಸಮಯಪ್ರಜ್ಞೆ ಹಾಗೂ ಸಾಹಸಕ್ಕೆ ಆಂಧ್ರಪ್ರದೇಶ ಸರ್ಕಾರ ಅಭಿನಂದಿಸಿದೆ.
ಈತನ ಹೆಸರು ಹರೀಶ್‌ಕುಮಾರ್ ರಾಜು. ಮೂಲತಃ ಆಂಧ್ರಪ್ರದೇಶದ ಧರ್ಮಾವರಂ ಜಿಲ್ಲೆಯ ಯುವಕ. ಸದ್ಯ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಇವರು ಎಂಜಿನಿಯರಿಂಗ್ ಪದವಿ ಪಡೆದದ್ದು ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ.
ಕರ್ನೂಲ್ ಬಸ್ ದುರಂತ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಹರೀಶ್, ‘ಕಾರಿನಲ್ಲಿ ಬೆಂಗಳೂರಿನತ್ತ ಬರುತ್ತಿದ್ದ ವೇಳೆ, ದೂರದಿಂದಲೇ ದಟ್ಟ ಹೊಗೆ ಕಣ್ಣಿಗೆ ಬಿತ್ತು. ಹತ್ತಿರ ಬಂದು ನೋಡಿದರೆ, ರಸ್ತೆ ಮಧ್ಯದಲ್ಲಿ ಬಸ್ಸಿಗೆ ಬೆಂಕಿ ಹೊತ್ತಿ ಉರಿಯುತ್ತಿತ್ತು. ಬಸ್‌ನ ಮುಂಭಾಗದಲ್ಲಿ ಬೆಂಕಿ ತೀವ್ರವಾಗಿತ್ತು. ಹಿಂಭಾಗದಲ್ಲಿ ದಟ್ಟ ಹೊಗೆ ಆವರಿಸಿತ್ತು. ನಾವು ತಡ ಮಾಡಲಿಲ್ಲ, ಕಾರಿನಲ್ಲಿದ್ದ ಸ್ಟೆಪ್ನಿ ಬದಲಿಸುವ ರಾಡ್ ಮತ್ತು ಕಬ್ಬಿಣದ ಸ್ಟ್ಯಾಂಡ್ ಅನ್ನು ತೆಗೆದುಕೊಂಡು ಹೋಗಿ ಬಸ್‌ನ ಗಾಜುಗಳನ್ನು ಒಡೆದು ಪುಡಿ ಮಾಡಿದೆವು.
ಅರೆ ಬರೆ ಒಡೆದ ಗಾಜುಗಳ ಮಧ್ಯದಲ್ಲಿ ನುಸುಳುತ್ತಿದ್ದ ಪ್ರಯಾಣಿಕರಿಗೆ ಹೊರಬರಲು ಅನುವು ಮಾಡಿಕೊಟ್ಟೆವು. ನನ್ನೊಂದಿಗೆ ನವೀನ್ ಎನ್ನುವ ಯುವಕ ಸಹ ಇದ್ದ. ಇದರ ನಡುವೆ ಮಹಿಳೆಯೊಬ್ಬರು ತನ್ನ ಮಗುವನ್ನು ತಬ್ಬಿಕೊಂಡು ಸುಡುಬೆಂಕಿಯ ನಡುವೆ ನರಳಿ, ಸುಟ್ಟುಕರಕಲಾದ ಧಾರುಣ ದೃಶ್ಯವನ್ನು ನೋಡಿಯೂ ಅವರನ್ನು ರಕ್ಷಿಸಲಾಗದ ಅಸಹಾಯಕತೆ ನನ್ನದಾಗಿತ್ತು’ ಎಂದು ಭಾವುಕರಾದರು.
ಆಂಧ್ರ ಸರ್ಕಾರದಿಂದ ಅಭಿನಂದನೆ:
ಹರೀಶ್ ಅವರ ಮಾನವೀಯ ಅಂತಃಕರಣವನ್ನು ಗುರುತಿಸಿರುವ ಆಂಧ್ರಪ್ರದೇಶ ಸರ್ಕಾರ ಅವರನ್ನು ಅಭಿನಂದಿಸಿದೆ. ಅಲ್ಲಿನ ಆರೋಗ್ಯ ಸಚಿವ ಸತ್ಯಕುಮಾರ್, ಹರೀಶ್ ಮತ್ತು ನವೀನ್ ಅವರ ಮನೆಗೆ ಆಗಮಿಸಿ ಗೌರವಿಸಿದ್ದಾರೆ. ಆಂಧ್ರ ಪ್ರದೇಶದ ಹಲವು ಸಂಘಟನೆಗಳ ಗೌರವಕ್ಕೂ ಅವರು ಪಾತ್ರರಾಗಿದ್ದಾರೆ.