ಮಂಗಳೂರು : ಪ್ರಪ್ರಥಮ ಬಾರಿಗೆ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಎಸೋಸಿಯೇಶನ್‌ನ ಅಖಿಲ ಭಾರತ ಸ್ಪೀಕರ್‌ಗಳ ಸಮ್ಮೇಳನವನ್ನು ಕರ್ನಾಟಕದಲ್ಲಿ ಆಯೋಜಿಸಲು ಅವಕಾಶ ದೊರೆತಿದ್ದು, ಸೆ.8ರಿಂದ 10ರವರೆಗೆ ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಈ ಸಮ್ಮೇಳನ ನಡೆಸಲು ಅವಕಾಶ ಮಾಡಿಕೊಡುವಂತೆ ತಾನು ಕಳೆದೆರಡು ವರ್ಷಗಳಿಂದ ಮನವಿ ಮಾಡುತ್ತಿದ್ದು, ಈ ಬಾರಿ ಲೋಕಸಭಾ ಸ್ಪೀಕರ್ ಅವಕಾಶ ಒದಗಿಸಿಕೊಟ್ಟಿದ್ದಾರೆ, ಇದು ರಾಜ್ಯಕ್ಕೆ ದೊರೆತ ಗೌರವ ಎಂದು ಹೇಳಿದರು.
ದೇಶದ ಎಲ್ಲ ರಾಜ್ಯಗಳ ವಿಧಾನಸಭೆ ಮತ್ತು ವಿಧಾನ ಪರಿಷತ್‌ಗಳ ಸ್ಪೀಕರ್, ಡೆಪ್ಯುಟಿ ಸ್ಪೀಕರ್‌ಗಳು, ಕಾರ್ಯದರ್ಶಿಗಳು, ಲೋಕಸಭೆ ಸ್ಪೀಕರ್, ಡೆಪ್ಯುಟಿ ಸ್ಪೀಕರ್ ಸೇರಿದಂತೆ 300- 350ರಷ್ಟು ಮಂದಿ ಭಾಗವಹಿಸಲಿದ್ದಾರೆ. ವಿದೇಶಗಳಿಂದ ಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು. ಸೆ.8ರಂದು ಸಂಜೆ 6 ಗಂಟೆಗೆ ವಿಧಾನ ಸೌಧ ಆವರಣದಲ್ಲಿ ಮುಖ್ಯಮಂತ್ರಿ, ಲೋಕಸಭಾ ಸ್ಪೀಕರ್, ಉಪ ಮುಖ್ಯಮಂತ್ರಿ ಉಪಸ್ಥಿತಿಯಲ್ಲಿ ಸಮ್ಮೇಳನಕ್ಕೆ ಚಾಲನೆ ದೊರಯಲಿದೆ. ರಾಷ್ಟ್ರಪತಿ, ಉಪ ರಾಷ್ಟ್ರಪತಿ ಸೇರಿದಂತೆ ಇತರ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಯು.ಟಿ. ಖಾದರ್ ತಿಳಿಸಿದರು.
ಭವಿಷ್ಯದಲ್ಲಿ ಪ್ರಜಾಪ್ರಭುತ್ವ, ಸಂಸದೀಯ ನಿಯಮಗಳನ್ನು ಬಲಿಷ್ಠಗೊಳಿಸುವುದು, ಇನ್ನಷ್ಟು ಉತ್ತಮ ರೀತಿಯಲ್ಲಿ ಅಧಿವೇಶನ ನಡೆಸುವುದು, ಸ್ಪೀಕರ್‌ಗಳ ಜವಾಬ್ದಾರಿ ಹಾಗೂ ಪ್ರಸಕ್ತ ವಿಚಾರಗಳಿಗೆ ಸಂಬಂಧಿಸಿ ಮೌಲಿಕ ಚರ್ಚೆ ನಡೆಯಲಿದೆ ಎಂದು ಹೇಳಿದರು.
ಆಲ್ ಇಂಡಿಯಾ ಸ್ಪೀಕರ್ಸ್ ಕಾನ್ಫರೆನ್ಸ್ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ, ಅದಕ್ಕಿಂತ ಹಿಂದಿನ ವರ್ಷ ಘಾನಾ ದೇಶದಲ್ಲಿ ನಡೆದಿತ್ತು. ಕರ್ನಾಟಕದಲ್ಲಿ ಆಯೋಜಿಸಲು ಅವಕಾಶ ದೊರೆತಿರುವುದು ರಾಜ್ಯಕ್ಕೆ ದೊರೆತ ದೊಡ್ಡ ಗೌರವ. ಇಡೀ ದೇಶ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾದರಿಯಾಗಿ ಸಮಾವೇಶ ಆಯೋಜಿಸಲಿದ್ದೇವೆ ಎಂದು ಯು.ಟಿ. ಖಾದರ್ ತಿಳಿಸಿದರು.
ಟೀಕೆಗಳಿಗೆ ತಲೆಕೆಡಿಸಲ್ಲ, ಸೌಹಾರ್ದತೆಗಾಗಿ ಯಾವ ತ್ಯಾಗಕ್ಕೂ ಸಿದ್ಧ: ಖಾದರ್
ತಪ್ಪು ಮಾಡಿದವರನ್ನು ಬೆಂಬಲಿಸುವ ವ್ಯಕ್ತಿತ್ವ ನನ್ನದಲ್ಲ. ಸುಹಾಸ್ ಶೆಟ್ಟಿ ಕೊಲೆ ಸಂದರ್ಭ ಅಂದಿನ ಉದ್ವೇಗದ ವಾತಾವರಣ ತಿಳಿಗೊಳಿಸುವ ಉದ್ದೇಶದಿಂದ ಸೌಹಾರ್ದತೆಗೆ ಧಕ್ಕೆ ಆಗಬಾರದೆಂಬ ಕಾರಣಕ್ಕೆ ನನಗೆ ದೊರೆತ ಮಾಹಿತಿಯನ್ನು ಕ್ಷೇತ್ರದ ಜನರಿಗೆ ತಿಳಿಸಿದ್ದೆ. ಈ ಪ್ರಕರಣದಲ್ಲಿ ನನ್ನಿಂದ ಯಾವುದೇ ಹಸ್ತಕ್ಷೇಪ ಆಗಿಲ್ಲ. ಹಾಗಾಗಿ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದ್ದಾರೆ. ಟೀಕೆ ಮಾಡುವವರು, ರಾಜಕೀಯ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಯು.ಟಿ. ಖಾದರ್ ಪ್ರತಿಕ್ರಿಯಿಸಿದರು.
ಸುಹಾಸ್ ಕೊಲೆ ಆರೋಪಿಗಳ ನಿಕಟವರ್ತಿ ಎನ್ನಲಾದ ಮುಸ್ತಫಾ ಎಂಬವರು ಕಳಸದಲ್ಲಿ ಆಯೋಜಿಸಿದ ಕ್ರಿಕೆಟ್‌ನಲ್ಲಿ ಪಾಲ್ಗೊಂಡ ಆರೋಪದ ಬಗ್ಗೆ ಉತ್ತರಿಸಿದ ಅವರು, ನನ್ನನ್ನು ಊರು ಮಾತ್ರವಲ್ಲ, ಹೊರಊರಿನ ಕಾರ್ಯಕ್ರಮಗಳಿಗೂ ಆಹ್ವಾನಿಸುತ್ತಾರೆ. ಸಮಯ ಸಿಕ್ಕಿದಷ್ಟು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೇನೆ. ಆದರೆ ಬಿಜೆಪಿಯವರು ಆರೋಪಿಸುತ್ತಿರುವ ಕ್ರಿಕೆಟ್‌ಗೆ ನನಗೆ ಹೋಗಲು ಸಾಧ್ಯವಾಗಿರಲಿಲ್ಲ. ನಾನು ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು.
ಸುಹಾಸ್ ಶೆಟ್ಟಿ ಎನ್‌ಐಎ ತನಿಖೆಯ ಬೇಡಿಕೆಗೆ ನನ್ನ ಅಭ್ಯಂತರವಿಲ್ಲ. ಅದನ್ನು ಸರ್ಕಾರ ನಿರ್ಧರಿಸುತ್ತದೆ. ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದು ಹೊರ ಬರಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು.