ವಿಧಾನ ಪರಿಷತ್ : ರಾಜ್ಯದಲ್ಲಿ ಚಾಲ್ತಿಯಲ್ಲಿರುವ ವಿವಿಧ ಪಡಿತರ ಚೀಟಿಗಳ ಪೈಕಿ ಸುಮಾರು 12.69 ಲಕ್ಷ ಪಡಿತರ ಚೀಟಿಗಳು ಶಂಕಾಸ್ಪದವಾಗಿದ್ದು, ಈ ಪಡಿತರ ಚೀಟಿ ಹಾಗೂ ಫಲಾನುಭವಿಗಳನ್ನು ಜಿಲ್ಲಾ/ ತಾಲ್ಲೂಕು ಮಟ್ಟದಲ್ಲಿ ಆಹಾರ ನಿರೀಕ್ಷಕರ ಹಂತದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ಜನಪ್ರತಿನಿಧಿಗಳು ಸಹಕರಿಸಬೇಕು ಎಂದು ಅಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ಕಾಂಗ್ರೆಸ್ಸಿನ ಎಂ. ನಾಗರಾಜು (ಯಾದವ) ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಇಡೀ ದಕ್ಷಿಣ ಭಾರತದಲ್ಲೇ ಕರ್ನಾಟಕದಲ್ಲಿ ಶೇ. 80ರಷ್ಟು ಬಿಪಿಎಲ್ ಕುಟುಂಬಗಳಿವೆ. ನೆರೆಯ ಆಂಧ್ರ, ತಮಿಳುನಾಡು, ತೆಲಂಗಾಣ ರಾಜ್ಯದಲ್ಲಿ ಬಿಪಿಎಲ್ ಕುಟುಂಬಗಳ ಸಂಖ್ಯೆ ಶೇ. 50ರೊಳಗೆ ಇದೆ. ಹೀಗಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರನ್ನು ಗುರುತಿಸಿ ಕಾರ್ಡ್ ರದ್ದು ಮಾಡಲು ಮುಂದಾದಾಗ ವಿರೋಧ ವ್ಯಕ್ತವಾಯಿತು. ಇದರಿಂದ ಅರ್ಹರಿಗೆ ಪಡಿತರ ಪಡೆಯಲು ಆಗುವುದಿಲ್ಲ. ಬಿಪಿಎಲ್ ಕಾರ್ಡ್ ಪಡೆಯಲು ಕೇಂದ್ರ ಸರ್ಕಾರಕ್ಕಿಂತ ರಾಜ್ಯದ ಮಾನದಂಡಗಳು ಹೆಚ್ಚಿವೆ. ಹೀಗಾಗಿ ಹೆಚ್ಚು ಜನರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ ಎಂದರು.
ಇಲಾಖೆಯ ತಂತ್ರಾಂಶದಲ್ಲಿ ಕಂಡು ಬಂದ ದೋಷವನ್ನು ಪರಿಹರಿಸಲಾಗಿದ್ದು, ಪಡಿತರ ಚೀಟಿದಾರರಿಗೆ ಯಾವುದೇ ಸಮಸ್ಯೆ ಇಲ್ಲದೆ ಪಡಿತರ ವಿತರಣೆ ಮಾಡಲಾಗುತ್ತಿದೆ ಎಂದು ಮುನಿಯಪ್ಪ ತಿಳಿಸಿದರು.