ಶಾಲಾ ಮಕ್ಕಳ ಶೂ ಭಾಗ್ಯಕ್ಕೆ 121 ಕೋಟಿ ರು

Published : May 31, 2024, 05:28 AM IST
shoe

ಸಾರಾಂಶ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 2024-25ನೇ ಸಾಲಿನಲ್ಲಿ 1ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ 42.52 ಲಕ್ಷ ಮಕ್ಕಳಿಗೆ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಖರೀದಿಗೆ ಸರ್ಕಾರ 121 ಕೋಟಿ ರು. ಬಿಡುಗಡೆ ಮಾಡಿದೆ.

ಬೆಂಗಳೂರು :  ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 2024-25ನೇ ಸಾಲಿನಲ್ಲಿ 1ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ 42.52 ಲಕ್ಷ ಮಕ್ಕಳಿಗೆ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಖರೀದಿಗೆ ಸರ್ಕಾರ 121 ಕೋಟಿ ರು. ಬಿಡುಗಡೆ ಮಾಡಿದೆ.

ಈ ಪೈಕಿ ಸರ್ಕಾರಿ ಶಾಲೆಗಳಲ್ಲಿನ ಪರಿಶಿಷ್ಟ ಜಾತಿ, ಪಂಗಡ ಹಾಗೂ ಬುಡಕಟ್ಟು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಪಂಗಡದ ವಿಶೇಷ ಘಟಕ ಯೋಜನೆ(ಎಸ್ಸಿಪಿ)ಯಿಂದ 30 ಕೋಟಿ ರು. ಮತ್ತು ಬುಡಕಟ್ಟು ಉಪ ಯೋಜನೆಯಿಂದ (ಟಿಎಸ್‌ಪಿ) 14 ಕೋಟಿ ರು. ಹಣವನ್ನು ವಿದ್ಯಾರ್ಥಿಗಳ ಶೂ, ಸಾಕ್ಸ್‌ ಖರೀದಿಗೆ ಬಳಕೆ ಮಾಡಲಾಗಿದೆ.

ಶೂ, ಸಾಕ್ಸ್‌ ಖರೀದಿಗೆ ಆರು ವರ್ಷಗಳ ಹಿಂದಿನ ದರವನ್ನೇ ಮುಂದುವರೆಸಿರುವ ಸರ್ಕಾರ, 1 ರಿಂದ 5ನೇ ತರಗತಿ ವರೆಗಿನ ಮಕ್ಕಳಿಗೆ ಶೂ, ಸಾಕ್ಸ್‌ ಖರೀದಿಗೆ ತಲಾ 265 ರು., 6 ರಿಂದ 8ನೇ ತರಗತಿ ಮಕ್ಕಳಿಗೆ ತಲಾ 295 ರು. ಹಾಗೂ 9 ಮತ್ತು 10ನೇ ತರಗತಿಗೆ 325 ರು. ಗಳನ್ನು ನಿಗದಿ ಮಾಡಿದೆ. ಪ್ರತಿ ಮಗುವಿಗೂ ಉತ್ತಮ ಗುಣಮಟ್ಟದ ಒಂದು ಜೊತೆ ಕಪ್ಪು ಶೂ, ಎರಡು ಜೊತೆ ಬಿಳಿ ಸಾಕ್ಸ್‌ ಖರೀದಿಸಬೇಕು. ಸ್ಥಳೀಯ ವಾತಾವರಣಕ್ಕೆ ಅನುಗುಣವಾಗಿ ಶೂ ಮತ್ತು ಸಾಕ್ಸ್‌ಗಳ ಬದಲಾಗಿ ಅಗತ್ಯವೆನಿಸಿದರೆ ಪಾದರಕ್ಷೆಗಳನ್ನು ಸಹ ಖರೀದಿ ಮಾಡಬಹುದು ಎಂದು ಶಾಲಾ ಶಿಕ್ಷಣ ಇಲಾಖೆ ಸೂಚಿಸಿದೆ.

ಶೂ ಸಾಕ್ಸ್‌ ಖರೀದಿಗೆ ಅಗತ್ಯ ಅನುದಾನವನ್ನು ಆಯಾ ಶಾಲಾ ಎಸ್‌ಡಿಎಂಸಿಗಳ ಜಂಟಿ ಖಾತೆಗೆ ಬಿಡುಗಡೆ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಅಳತೆಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ಶೂ, ಸಾಕ್ಸ್‌ ಖರೀದಿಸಲು ಆಯಾ ಶಾಲೆಗಳ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ(ಎಸ್‌ಡಿಎಂಸಿ) ಮೂಲಕ ಖರೀದಿ ಸಮಿತಿಯನ್ನು ರಚಿಸಬೇಕು. ಎಸ್‌ಡಿಎಂಸಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಖರೀದಿ ಸಮಿತಿ ರಚಿಸಬೇಕು. ಶಾಲೆಯ ಮುಖ್ಯೋಪಾಧ್ಯಾಯರು ಸದಸ್ಯ ಕಾರ್ಯದರ್ಶಿಯಾಗಿರಬೇಕು. ಜೊತೆಗೆ ಓರ್ವ ಮಹಿಳಾ ಸದಸ್ಯೆ ಸೇರಿದಂತೆ ಮೂವರು ಸದಸ್ಯರನ್ನು ಸಮಿತಿ ಒಳಗೊಂಡಿರಬೇಕು ಎಂದು ಸರ್ಕಾರ ಸೂಚಿಸಿದೆ.

ಷರತ್ತುಗಳೇನು?:

ಖರೀದಿ ವೇಳೆ ಕನಿಷ್ಠ ಮೂರು ಸಂಸ್ಥೆಗಳಿಂದ ಕೊಟೇಷನ್‌ ಪಡೆದು ಕೆಟಿಟಿಪಿ ಕಾಯ್ದೆಯ ನಿಯಮಗಳನುಸಾರ ಖರೀದಿ ಪ್ರಕ್ರಿಯೆ ನಿರ್ವಹಿಸಬೇಕು. ಸ್ಥಳೀಯವಾಗಿಯೇ ಶೂ, ಸಾಕ್ಸ್‌ ಖರೀದಿಸಬೇಕು. ಯಾವುದೇ ಕಾರಣಕ್ಕು ವಲಯ, ಕ್ಲಸ್ಟರ್‌ ಅಥವಾ ಜಿಲ್ಲಾ ಮಟ್ಟದಲ್ಲಿ ಹಲವು ಶಾಲೆಗಳು ಸೇರಿ ಒಟ್ಟಾಗಿ ಖರೀದಿ ನಡೆಸುವಂತಿಲ್ಲ. ಪ್ರತಿ ತಾಲೂಕಿನ ಶೇ.5ರಷ್ಟು ಶಾಲೆಗಳ ಶೂ, ಸಾಕ್ಸ್‌ಗಳ ಗುಣಮಟ್ಟ ಪರೀಕ್ಷಿಸಲು ಆಯಾ ಜಿಲ್ಲಾ ಪಂಚಾಯತ್‌ ಕಾರ್ಯ ನಿರ್ವಹಣಾ ಅಧಿಕಾರಿಗಳು ಒಂದು ಸಮಿತಿ ರಚಿಸಬೇಕು. ಖರೀದಿಗೆ ಆಯ್ಕೆ ಮಾಡುವ ಸಂಸ್ಥೆಯು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನೋಂದಣಿಯಾಗಿರಬೇಕು.

ಗುಣಮಟ್ಟ ಹೇಗಿರಬೇಕು?

ರಾಷ್ಟ್ರಮಟ್ಟದ ಹೆಸರಾಂತ ಕಂಪನಿಗಳ ಪ್ರತಿಷ್ಠಿತ ಬ್ರಾಂಡ್‌ಗಳ ಅಧಿಕೃತ ಮಾರಾಟಗಾರರಿಂದ ಐಎಸ್‌ಒ ಪ್ರಮಾಣೀಕೃತ ಶೂ, ಸಾಕ್ಸ್‌ ಖರೀದಿಸಬೇಕು. ಶೂಗಳ ಮೇಲ್ಪದರವು ಪಾಲಿವಿನೈಲ್‌(ಪಿವಿಸಿ) ಕೋಟೆಡ್‌ ವಿಸ್ಕೋಸ್‌/ಪಾಲಿಯೆಸ್ಟರ್‌ ಕಾಟನ್‌ ಫ್ಯಾಬ್ರಿಕ್‌ 1.5 ಎಂಎಂ ಹೊಂದಿರಬೇಕು. ಇದು ಎಕ್ಸ್‌ಪೆಂಡೆಡ್‌ ಪಾಲಿವಿನೈಲ್‌ ಕ್ಲೋರೈಡ್‌ ಸೋಲ್‌ ಹೊಂದಿರಬೇಕು. ಒಳಪದರವು ಬಟ್ಟೆ/ಫ್ಯಾಬ್ರಿಕ್‌ನಿಂದ ಕೂಡಿರುವುದನ್ನು (ಅಂದಾಜು 0.8 ಎಂಎಂ ದಪ್ಪ) ಖರೀದಿಸುವುದು. ಪಾದರಕ್ಷೆಗಳನ್ನು ಖರೀದಿಸಲು ತೀರ್ಮಾನಿಸಿದಲ್ಲಿ ವೆಲ್‌ಕ್ರೋ ಪಾದರಕ್ಷೆಗಳನ್ನು ಮತ್ತು ಲೈನಿಂಗ್‌ ಸಾಕ್ಸ್‌ ಖರೀದಿಸಿ ವಿತರಿಸಬೇಕು ಎಂದು ಸೂಚಿಸಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ವಿಪ್ರ ಸಮುದಾಯದ ಯುವಕರು ಸಂಘಟಿತರಾಗಿ
ಬಾಶೆಟ್ಟಿಹಳ್ಳಿ ಪಪಂ ಚುನಾವಣೆ: ಮತಗಟ್ಟೆಗೆ ರಾಜ್ಯ ಚುನಾವಣಾ ಆಯುಕ್ತ ಭೇಟಿ