‘ಭಾರಿ ಮಳೆಯಿಂದ ನಗರದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸಲು ₹2,000 ಕೋಟಿ ವೆಚ್ಚದಲ್ಲಿ 253 ಕಿ.ಮೀ. ರಾಜಕಾಲುವೆ ತಡೆಗೋಡೆ ಪುನರ್ ನಿರ್ಮಾಣ ಮಾಡಲು ಯೋಜನಾ ವರದಿಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ನೀಡಲಾಗುವುದು ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು : ‘ಭಾರಿ ಮಳೆಯಿಂದ ನಗರದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸಲು ₹2,000 ಕೋಟಿ ವೆಚ್ಚದಲ್ಲಿ 253 ಕಿ.ಮೀ. ರಾಜಕಾಲುವೆ ತಡೆಗೋಡೆ ಪುನರ್ ನಿರ್ಮಾಣ ಮಾಡಲು ಯೋಜನಾ ವರದಿಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಉಂಟಾಗಿರುವ ಅತಿವೃಷ್ಟಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಬಿಬಿಎಂಪಿ ಆಯುಕ್ತರೊಂದಿಗೆ ಶನಿವಾರ ಸಭೆ ನಡೆಸಿದ ಅವರು ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಬೆಂಗಳೂರು ನಗರದಲ್ಲಿ ಅಕ್ಟೋಬರ್‌ನಲ್ಲಿ 100 ವರ್ಷಗಳ ಮೂರನೇ ಅತಿ ಹೆಚ್ಚು ದಾಖಲೆಯ ಮಳೆಯಾಗಿದೆ. ಪರಿಣಾಮ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಮಸ್ಯೆಯಾಗಿದೆ. ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ರಾಜಕಾಲುವೆ ಒತ್ತುವರಿ ತೆರವು, ತಡೆಗೋಡೆ ನಿರ್ಮಾಣಕ್ಕೆ ಆದೇಶ ನೀಡಿದ್ದೆ. ಈ ವೇಳೆ 250ಕ್ಕೂ ಹೆಚ್ಚು ಕಿ.ಮೀ. ರಾಜಕಾಲುವೆ ತಡೆಗೋಡೆ ನಿರ್ಮಾಣ ಮಾಡಿದ್ದೆವು. ಇನ್ನೂ 173 ಕಿ.ಮೀ. ತಡೆಗೋಡೆ ನಿರ್ಮಾಣ ಹಾಗೂ 80 ಕಿ.ಮೀ. ಕಟ್ಟಡ ಕಲ್ಲು ರಾಜಕಾಲುವೆ ಪುನರ್ ನಿರ್ಮಾಣ ಬಾಕಿ ಇದೆ. ಹೀಗಾಗಿ ಪ್ರತಿ ವರ್ಷ ಮಳೆ ಬಂದ ತಕ್ಷಣ ಅನಾಹುತಗಳು ಸಂಭವಿಸುತ್ತಿವೆ.
ಇದೀಗ ವಿಶ್ವಸಂಸ್ಥೆಯು ರಾಜಕಾಲುವೆ ಪುನರ್ ನಿರ್ಮಾಣಕ್ಕೆ ₹2,000 ಕೋಟಿ ನೀಡಲು ಮುಂದೆ ಬಂದಿದೆ. 3-4 ತಿಂಗಳಲ್ಲಿ ಈ ಯೋಜನೆ ಕಾಮಗಾರಿ ಶುರು ಮಾಡಲಾಗುವುದು. ಮುಂದಿನ ಸಂಪುಟ ಸಭೆಯಲ್ಲೇ ಯೋಜನಾ ವರದಿಗೆ ಅಂಗೀಕಾರ ನೀಡಲಾಗುವುದು. ಏಕಕಾಲದಲ್ಲಿ ಅಭಿವೃದ್ಧಿ ಮಾಡುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ರಸ್ತೆ ಗುಂಡಿ ಮುಚ್ಚಲು ಕ್ರಮ
ಇನ್ನು ಮುಂಗಾರು ವೇಳೆ ಬಿದ್ದಿದ್ದ 16,000 ಗುಂಡಿಗಳನ್ನು ನಗರದಲ್ಲಿ ಮುಚ್ಚಲಾಗಿತ್ತು. ಹಿಂಗಾರಿನಲ್ಲಿ ಮತ್ತೆ ಗುಂಡುಗಳು ನಿರ್ಮಾಣವಾಗಿದ್ದು, ಸಮೀಕ್ಷೆ ನಡೆಸಿ ಉಳಿದ ಗುಂಡಿಗಳನ್ನೂ ಮುಚ್ಚಲಾಗುವುದು. ಜತೆಗೆ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆ ಅಭಿವೃದ್ದಿಗೆ ₹660 ಕೋಟಿ ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು ಅಂಗೀಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇನ್ನು ವಿಶ್ವ ಬ್ಯಾಂಕ್ ಅಧಿಕಾರಿಗಳು ಇತ್ತೀಚೆಗೆ ಸರ್ಕಾರದೊಂದಿಗೆ ಚರ್ಚಿಸಿದ್ದಾರೆ. ₹5,000 ಕೋಟಿ ನೆರವು ನೀಡಲು ಒಪ್ಪಿದ್ದಾರೆ. ಈ ಪೈಕಿ ₹3,500 ಕೋಟಿ ಬೆಂಗಳೂರಿಗೆ ನೀಡಲು ಪ್ರಾಥಮಿಕ ಒಪ್ಪಿಗೆ ನೀಡಿದ್ದು, ಇದರಲ್ಲಿ ಬಹುತೇಕ ಹಣ ಪ್ರವಾಹ ನಿಯಂತ್ರಣ ಕ್ರಮಗಳಿಗಾಗಿಯೇ ವೆಚ್ಚ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಾಯ್ದೆಯನ್ನೇ ಕಿತ್ತರು
ಮಳೆ ನಿರ್ವಹಣೆ ಕುರಿತ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಅವರ ಕಾಲದಲ್ಲಿ ಏನು ಮಾಡಿದರು? ರಾಜಕಾಲುವೆ ಒತ್ತುವರಿ ಯಾಕೆ ತೆರವುಗೊಳಿಸಲಿಲ್ಲ. ಒತ್ತುವರಿ ತೆರವು ಹಾಗೂ ಅಕ್ರಮ ಕಟ್ಟಡಗಳ ನಿಯಂತ್ರಣಕ್ಕೆ ಇದ್ದ ಕಾಯ್ದೆಯನ್ನೇ ಕಿತ್ತು ಹಾಕಿದರು. ಬೆಂಗಳೂರು ನಗರವನ್ನು ಯೋಜನಾಬದ್ಧವಾಗಿ ಬೆಳೆಸಬೇಕು ಎಂಬುದು ನಮ್ಮ ಉದ್ದೇಶ ಎಂದು ತಿರುಗೇಟು ನೀಡಿದರು.
‘ನಗರದಲ್ಲಿ ಮಳೆಯಿಂದ ಒಂದು ಸಾವೂ ಆಗಿಲ್ಲ’
ಬೆಂಗಳೂರು ನಗರದಲ್ಲಿ ಕೆರೆಯಲ್ಲಿ ಇಬ್ಬರು ಮಕ್ಕಳು ಮುಳುಗಿದ್ದು ಹಾಗೂ ಕಳಪೆ ಗುಣಮಟ್ಟದ ಕಟ್ಟಡ ಕುಸಿತ ಉಂಟಾಗಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಆದರೆ ಮಳೆಯಿಂದಾಗಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮಳೆಯಿಂದ ಹಾನಿಗೊಳಗಾಗುವ ಪ್ರದೇಶಗಳಲ್ಲಿನ ಜನರನ್ನು ಸ್ಥಳಾಂತರ ಮಾಡಿ, ಅವರನ್ನು ಸುರಕ್ಷಿತವಾಗಿ ಹೋಟೆಲ್ ಗಳಲ್ಲಿ ಇರಿಸಿ ಅವರಿಗೆ ಊಟ ಸೇರಿದಂತೆ ಎಲ್ಲಾ ವ್ಯವಸ್ಥೆ ನೀಡಿದ್ದೇವೆ. ನಮ್ಮ ಅಧಿಕಾರಿಗಳು ದಿನದ 24 ತಾಸುಗಳು ಕೆಲಸ ಮಾಡಿದ್ದಾರೆ ಎಂದು ಸಮರ್ಥನೆ ನೀಡಿದರು.
ರಸ್ತೆಯಿಂದ ರಾಜಕಾಲುವೆ ಕಟ್ಟಡಗಳಿಗೂ ರಕ್ಷಣೆ: ಡಿಕೆಶಿ
ಒಂದೇ ಬಾರಿಗೆ ಮಳೆ ನೀರುಗಾಲುವೆ ನಿರ್ಮಾಣ ಮಾಡುತ್ತಿದ್ದೇವೆ. ಹೀಗಾಗಿ ರಾಜಕಾಲುವೆ ಅಕ್ಕಪಕ್ಕ ಜಾಗ ಬಿಟ್ಟು ಅಲ್ಲಿ ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಈ ರಸ್ತೆ ನಿರ್ಮಾಣದಿಂದ ಕಟ್ಟಡಗಳಿಗೂ ರಕ್ಷಣೆ ಸಿಗುತ್ತದೆ ಹಾಗೂ ಕಾಲುವೆಗಳ ಸ್ವಚ್ಛ ಕಾರ್ಯಕ್ಕೂ ನೆರವಾಗಲಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.