ಕೇಂದ್ರದ ಈ ಬಾರಿಯ ಬಜೆಟ್‌ನಲ್ಲಿ ರೈಲ್ವೆ ಇಲಾಖೆಯಡಿ ಕರ್ನಾಟಕ ರಾಜ್ಯಕ್ಕೆ ₹7,748 ಕೊಟಿ ದಾಖಲೆ ಮೊತ್ತ ಸಿಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇಂದ್ರದ ಈ ಬಾರಿಯ ಬಜೆಟ್‌ನಲ್ಲಿ ರೈಲ್ವೆ ಇಲಾಖೆಯಡಿ ಕರ್ನಾಟಕ ರಾಜ್ಯಕ್ಕೆ ₹7,748 ಕೊಟಿ ದಾಖಲೆ ಮೊತ್ತ ಸಿಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.ಬಿಜೆಪಿ ರಾಜ್ಯ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ರೈಲ್ವೆ ಇಲಾಖೆಯಡಿ ₹800 ಕೋಟಿ ಸಿಗುತ್ತಿತ್ತು. ಇದೀಗ ನಮ್ಮ ಸರ್ಕಾರದಲ್ಲಿ ₹7,748 ಕೋಟಿಗೆ ಏರಿಕೆಯಾಗಿದೆ. ಈ ಮೂಲಕ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕಿಂತ ಒಂಬತ್ತು ಪಟ್ಟು ಹೆಚ್ಚಳವಾಗಿದೆ ಎಂದರು.
ವಿಕಸಿತ ಭಾರತದ ರೋಡ್ ಮ್ಯಾಪ್:ಈ ವರ್ಷದ ಕೇಂದ್ರ ಬಜೆಟ್ 2047ಕ್ಕೆ ವಿಕಸಿತ ಭಾರತದ ರೋಡ್ ಮ್ಯಾಪ್ ಆಗಿದೆ. 2047ಕ್ಕೆ ನಾವು ವಿಕಸಿತ ಭಾರತ ಮತ್ತು ಅಭಿವೃದ್ಧಿ ಹೊಂದಿದ ದೇಶವಾಗಬೇಕೆಂದು ಸಂಕಲ್ಪ ಮಾಡಿದ್ದೇವೆ. ಮೇಕ್ ಇನ್ ಇಂಡಿಯಾವು ಈಗಾಗಲೇ ಉತ್ತಮ ಸಾಧನೆ ಮಾಡಿದೆ. ಬಜೆಟ್‍ನಲ್ಲಿ ಸೆಮಿ ಕಂಡಕ್ಟರ್ ಉತ್ಪಾದನೆಗೆ ಒತ್ತು ಕೊಡಲಾಗುತ್ತಿದೆ. ಬಯೋ ಫಾರ್ಮಾಗೆ ಆದ್ಯತೆ ನೀಡಲಿದ್ದೇವೆ. ವಾಯುಯಾನ, ಬಾಹ್ಯಾಕಾಶ, ಕೈಗಾರಿಕೆಯಡಿ ಹೈಟೆಕ್ ಟೂಲ್ ರೂಮ್‍ಗಳು ಪ್ರಿಸಿಶನ್ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಲಿವೆ. ಬೆಂಗಳೂರಿನಲ್ಲಿರುವ ಸೆಂಟ್ರಲ್ ಟೂಲ್ ರೂಮ್‍ನಿಂದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮೂಲಕ ಸಾಧನೆ ಸಾಧ್ಯವಾಗಿದೆ ಎಂದರು.
ಎಲೆಕ್ಟ್ರಾನಿಕ್ಸ್ ರಫ್ತು ಎಂಟು ಪಟ್ಟು ಹೆಚ್ಚಳ:ಕಳೆದೊಂದು ದಶಕದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಆರು ಪಟ್ಟು ಹೆಚ್ಚಳವಾಗಿದೆ. ಇದರ ರಫ್ತು ಎಂಟು ಪಟ್ಟು ಹೆಚ್ಚಾಗಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದ್ದೇವೆ. ಎಲೆಕ್ಟ್ರಾನಿಕ್ಸ್ ಕಾಂಪೋನೆಂಟ್‌ಗಳ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈಗಾಗಲೇ 46 ಘಟಕಗಳಿಗೆ ಅನುಮೋದನೆ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಕರ್ನಾಟಕದಲ್ಲಿ ₹10 ಸಾವಿರ ಕೋಟಿ ಹೂಡಿಕೆ ಮಾಡಿದೆ ಎಂದು ತಿಳಿಸಿದರು.
200 ಪಾರಂಪರಿಕ ಕೈಗಾರಿಕಾ ಸಮೂಹಗಳ ಪುನರುತ್ಥಾನ:ದೇಶದಲ್ಲಿ ಅಪಾರ ಪ್ರಮಾಣದ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಉತ್ಪಾದನೆ ಹೆಚ್ಚಳವಾಗಬೇಕು. 200 ಪಾರಂಪರಿಕ ಕೈಗಾರಿಕಾ ಸಮೂಹಗಳ ಪುನರುತ್ಥಾನ ಕಾರ್ಯದ ಅಗತ್ಯವಿದೆ. ಸ್ಪರ್ಧಾತ್ಮಕ ಜಗತ್ತು ಇದಾಗಿದ್ದು, ವೆಚ್ಚದ ಮೇಲಿನ ನಿಯಂತ್ರಣ, ಸಮೂಹ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಹೊಂದುವುದು, ನೀರಿನ ಸೌಕರ್ಯ ವೃದ್ಧಿ, ಕಾರ್ಮಿಕರ ಸಮೂಹ ಗೃಹ ವ್ಯವಸ್ಥೆ, ಉತ್ತಮ ರಸ್ತೆ ವ್ಯವಸ್ಥೆ ಇವೆಲ್ಲವನ್ನೂ ಪಾರಂಪರಿಕ ಕೈಗಾರಿಕಾ ಸಮೂಹಗಳಲ್ಲಿ ಅಳವಡಿಸುವ ಅಗತ್ಯವಿದೆ ಎಂದು ಕೇಂದ್ರ ರೈಲ್ವೆ ಸಚಿವ ಹೇಳಿದರು.
-ಕೋಟ್-ಬಿ ಟೆಕ್ ಪಠ್ಯಕ್ರಮ ಬದಲು
ಸೆಮಿ ಕಂಡಕ್ಟರ್ ಕೈಗಾರಿಕೆಯಲ್ಲಿ ಬೆಂಗಳೂರು ಮತ್ತು ಮೈಸೂರು ಮಹತ್ವದ ಪಾತ್ರ ವಹಿಸುತ್ತಿವೆ. ಕೃತಕ ಬುದ್ಧಿಮತ್ತೆ(ಎ.ಐ) ಕ್ರಾಂತಿಗೆ ಅನುಗುಣವಾಗಿ ಬಿ.ಟೆಕ್, ಎಂ.ಟೆಕ್ ಪಠ್ಯಕ್ರಮದಲ್ಲೂ ಬದಲಾವಣೆ ಆಗುತ್ತಿದೆ- ಅಶ್ವಿನಿ ವೈಷ್ಣವ್, ಕೇಂದ್ರ ರೈಲ್ವೆ ಸಚಿವ.