ಅಕ್ಷಯ ತೃತೀಯಕ್ಕೆ ₹20,000 ಕೋಟಿ ಚಿನ್ನ ಭರ್ಜರಿ ಸೇಲ್‌!

ಸಾರಾಂಶ

ಚಿನ್ನದ ಬೆಲೆ ಗಗನಕ್ಕೇರಿದ್ದರೂ ಲೆಕ್ಕಿಸದೆ ಬುಧವಾರ ಅಕ್ಷಯ ತೃತಿಯ ದಿನದಂದು ದೇಶವ್ಯಾಪಿ ಜನತೆ ಭರ್ಜರಿ ಪ್ರಮಾಣದಲ್ಲಿ ಚಿನ್ನ ಮತ್ತು ಬೆಳ್ಳಿಯ ಖರೀದಿ ನಡೆಸಿದ್ದಾರೆ.

ನವದೆಹಲಿ: ಚಿನ್ನದ ಬೆಲೆ ಗಗನಕ್ಕೇರಿದ್ದರೂ ಲೆಕ್ಕಿಸದೆ ಬುಧವಾರ ಅಕ್ಷಯ ತೃತಿಯ ದಿನದಂದು ದೇಶವ್ಯಾಪಿ ಜನತೆ ಭರ್ಜರಿ ಪ್ರಮಾಣದಲ್ಲಿ ಚಿನ್ನ ಮತ್ತು ಬೆಳ್ಳಿಯ ಖರೀದಿ ನಡೆಸಿದ್ದಾರೆ. ಖರೀದಿಯ ಪ್ರಮಾಣ ಹೆಚ್ಚು ಕಡಿಮೆ ಕಳೆದ ವರ್ಷದಷ್ಟೇ ಇದ್ದರೂ, ಮೌಲ್ಯ ಹೆಚ್ಚಾಗಿರುವ ಕಾರಣ ಅಂದಾಜು 16000 ಕೋಟಿ ರು.ನಿಂದ 20000 ಕೋಟಿ ರು. ವಹಿವಾಟಿನ ನಿರೀಕ್ಷೆ ಇದೆ ಎಂದು ವರ್ತಕರು ಹೇಳಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ ಶೇ.35ರಷ್ಟು ಏರಿಕೆಯಾಗಿದೆ. ಬುಧವಾರ ಇಲ್ಲಿನ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 98500 ರು.ನಷ್ಟು ಇತ್ತು. ಮತ್ತೊಂದೆಡೆ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 1 ಲಕ್ಷ ರು.ನಷ್ಟು ಇತ್ತು.

ಅಖಿಲ ಭಾರತ ರತ್ನ ಮತ್ತು ಆಭರಣಗಳ ಸ್ಥಳೀಯ ಮಂಡಳಿ (ಜಿಜೆಸಿ) ಅಧ್ಯಕ್ಷ ರಾಜೇಶ್‌ ರೋಕ್ಡೆ ನೀಡಿರುವ ಹೇಳಿಕೆ ಅನ್ವಯ, ಕಳೆದ ವರ್ಷ ಅಕ್ಷಯ ತೃತಿಯದಂದು 20 ಟನ್‌ನಷ್ಟು ಚಿನ್ನ ಮತ್ತು ಬೆಳ್ಳಿ ಮಾರಾಟವಾಗಿತ್ತು. ಈ ವರ್ಷವೂ ಅದೇ ಪ್ರಮಾಣದಲ್ಲಿ ಮಾರಾಟದ ನಿರೀಕ್ಷೆ ಇದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಚಿನ್ನ ಮತ್ತು ಬೆಳ್ಳಿ ಮೌಲ್ಯದಲ್ಲಿ ಶೇ.35ರಷ್ಟು ಏರಿಕೆಯಾಗಿರುವ ಕಾರಣ, ಒಟ್ಟಾರೆ ವಹಿವಾಟಿನ ಮೊತ್ತದಲ್ಲಿ ಭಾರೀ ಏರಿಕೆಯಾಗಲಿದೆ ಎಂದು ಹೇಳಿದ್ದಾರೆ. ಈ ಲೆಕ್ಕಾಚಾರದಲ್ಲಿ ಅಂದಾಜು 20000 ಕೋಟಿ ರು. ವಹಿವಾಟಿನ ನಿರೀಕ್ಷೆ ವ್ಯಕ್ತವಾಗಿದೆ.

ಇನ್ನೊಂದೆಡೆ ಅಖಿಲ ಭಾರತೀಯ ವ್ಯಾಪಾರಿ ಒಕ್ಕೂಟವು ಬುಧವಾರ ದೇಶವ್ಯಾಪಿ 12,000 ಕೋಟಿ ರು. ಮೌಲ್ಯದ 12 ಟನ್ ಚಿನ್ನ ಮತ್ತು 4,000 ಕೋಟಿ ರು. ಮೌಲ್ಯದ 400 ಟನ್ ಬೆಳ್ಳಿ ಮಾರಾಟದ ಅಂದಾಜು ಮಾಡಿದೆ.

ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಏಕೆ?

ಅಕ್ಷಯ ತೃತಿಯ ಅದೃಷ್ಟ ಮತ್ತು ಯಶಸ್ಸನ್ನು ತರುತ್ತದೆ. ಈ ದಿನ ಚಿನ್ನ ಖರೀದಿಸಿದರೆ ಸಂಪತ್ತು ಕ್ಷಯವಾಗುವುದಿಲ್ಲ, ಬದಲಿಗೆ ವೃದ್ಧಿಯಾಗುತ್ತದೆ. ಅಕ್ಷಯ ತೃತಿಯದಂದು ಕೊಂಡ ಚಿನ್ನದ ಬೆಲೆ ಯಾವತ್ತೂ ಕಡಿಮೆಯಾಗುವುದಿಲ್ಲ ಎಂಬುದು ಜನರ ನಂಬಿಕೆ.

ರಾಜ್ಯದಲ್ಲಿ ಭರ್ಜರಿ ₹ 3000 ಕೋಟಿ ಚಿನ್ನ ಮಾರಾಟ!

ಬೆಂಗಳೂರು: ಚಿನ್ನದ ದರ ದಾಖಲೆ ಪ್ರಮಾಣದಲ್ಲಿ ಏರಿದ್ದರೂ ಕೂಡ ಕರ್ನಾಟಕದ ಜನತೆ ಅಕ್ಷಯ ತೃತೀಯ ದಿನವಾದ ಬುಧವಾರ ಚಿನ್ನಾಭರಣಗಳ ಭರ್ಜರಿ ಖರೀದಿ ಮಾಡಿದ್ದಾರೆ. ರಾಜ್ಯದಲ್ಲಿ ₹ 3000 ಕೋಟಿಗೂ ಹೆಚ್ಚಿನ ಚಿನ್ನ, ಬೆಳ್ಳಿ ಆಭರಣ ವಹಿವಾಟು ನಡೆದಿದೆ.

Share this article