;Resize=(412,232))
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ 2ನೇ ದಿನವೂ ‘ಕಸ ಸುರಿಯವ ಹಬ್ಬ’ ಮುಂದುವರೆದಿದ್ದು, ನಗರದ ವಿವಿಧ ಭಾಗದಲ್ಲಿ ರಸ್ತೆ ಬದಿ, ಖಾಲಿ ಜಾಗದಲ್ಲಿ ಕಸ ಎಸೆದವರ ಮನೆ ಮುಂದೆ ಕಸ ಸುರಿದು ದಂಡ ವಸೂಲಿ ಮುಂದುವರೆಸಲಾಗಿದೆ.
ಶುಕ್ರವಾರ ಬೆಳಗ್ಗೆ 5.30ರ ಸುಮಾರಿಗೆ ಗಂಗಾನಗರದಲ್ಲಿ ಮಹಿಳೆಯೊಬ್ಬರು ಕಸ ಎಸೆದು ಬಂದಿದ್ದನ್ನು ಮಾರ್ಷಲ್ ವಿಡಿಯೋ ಚಿತ್ರಿಕರಣ ಮಾಡಿಕೊಂಡು ಮಹಿಳೆ ಮನೆ ಪತ್ತೆ ಮಾಡಿಕೊಂಡಿದ್ದರು. ಬಳಿಕ ಅಧಿಕಾರಿಗಳೊಂದಿಗೆ ಮನೆಯ ಬಳಿ ಹೋಗಿ ಕಸ ಎಸೆದ ಬಗ್ಗೆ ತರಾಟೆ ತೆಗೆದುಕೊಳ್ಳಲಾಗಿತ್ತು. ಆದರೆ, ಮಹಿಳೆಯು ಕಸ ಎಸೆದಿಲ್ಲ ಎಂದು ಅಧಿಕಾರಿಗಳೊಂದಿಗೆ ವಾದಿಸಿದ್ದರು. ಆಗ ಅಧಿಕಾರಿಗಳು ಮಹಿಳೆ ಕಸ ಎಸೆದು ಬಂದ ವಿಡಿಯೋ ತೋರಿಸಿ ಮನೆಯ ಮುಂದೆ ಕಸ ಸುರಿದ ದಂಡ ವಸೂಲಿ ಮಾಡಿದ್ದರು.
ಬೆಂಗಳೂರಿನಲ್ಲಿ ಕಳೆದ 2 ದಿನಗಳಿಂದ ಎಲ್ಲೆಂದರಲ್ಲಿ ಕಸ ಎಸೆದವರ ಮನೆಯ ಮುಂದೆ ಕಸ ಸುರಿದು ದಂಡ ವಸೂಲಿ ಮಾಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಚಲನಚಿತ್ರದ ಹಾಡು ‘ಬಂದರೋ ಬಂದರೋ ಬಾವ ಬಂದರೋ ಹಾಡು’ ನೊಂದಿಗೆ ಜಿಬಿಎ ಅಧಿಕಾರಿಗಳು ಮನೆ ಬಳಿ ಹೋಗಿ ಕಸ ಸುರಿದ ವಿಡಿಯೋ ಸದ್ದು ಮಾಡುತ್ತಿದೆ. ಅದರೊಂದಿಗೆ ವಿವಿಧ ವಿಧವಾದ ಮೀಮ್ಸ್ ವೈರಲ್ ಆಗಿವೆ.
ಶನಿವಾರದಿಂದ ಕಸ ಸುರಿಯುವ ಕಾರ್ಯ ಇರುವುದಿಲ್ಲ. ಮುಂದಿನ ವಾರ ಮತ್ತೆ ಕಸ ಸುರಿಯುವ ಅಭಿಯಾನ ನಡೆಸಲಾಗುವುದು ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 5 ಸಾವಿರ ಆಟೋಗಳು ಪ್ರತಿ ದಿನ ಬೆಳಗ್ಗೆ ಮನೆ ಮನೆ ಬಾಗಿಲಿಗೆ ಹೋಗಿ ಕಸ ಸಂಗ್ರಹಿಸುತ್ತಿವೆ. ಆದರೂ ಕೆಲವರು ಆಟೋಗಳಿಗೆ ಕಸ ನೀಡದೇ, ರಸ್ತೆ ಬದಿ ಎಸೆಯುತ್ತಿದ್ದಾರೆ. 15 ದಿನದಿಂದ ಕಸ ಎಸೆಯುವವರ ವಿಡಿಯೋ ಮಾಡಲಾಗಿದೆ. ಜತೆಗೆ, ಸಿಸಿ ಟಿವಿ ದೃಶ್ಯ ಬಳಸಿ ಕಸ ಎಸೆದವರನ್ನು ಪತ್ತೆ ಮಾಡಲಾಗಿದೆ. ಸುಮಾರು 300 ಮನೆಯ ಮುಂದೆ ಕಸ ಸುರಿದು ಜಾಗೃತಿ ಮೂಡಿಸುವ ಮೂಲಕ ಸುಮಾರು 3 ಲಕ್ಷ ರು. ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಆಟೋ ಟಿಪ್ಪರ್ ಬಂದಾಗ ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಕಸವನ್ನು ನೀಡಬೇಕು. ಕಸ ವಿಂಗಡಣೆ ಮಾಡಿಲ್ಲ ಎಂದರೂ ದಂಡ ವಿಧಿಸಬಹುದು. ಕಸ ಎಲ್ಲೆಂದರಲ್ಲಿ ಎಸೆದರೆ ಹಾಗೂ ಖಾಲಿ ನಿವೇಶನದಲ್ಲಿ ಕಸ ಇದ್ದರೂ ಮಾಲೀಕರಿಗೆ ದಂಡ ವಿಧಿಸುವುದಕ್ಕೆ ಅವಕಾಶವಿದೆ. ದಂಡ ವಿಧಿಸುವುದು ಉದ್ದೇಶವಲ್ಲ. ನಗರ ಸ್ವಚ್ಛವಾಗಿರಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಕರಿಗೌಡ ತಿಳಿಸಿದ್ದಾರೆ.
ರಸ್ತೆ ಬದಿ ಕಸ ಬಿಸಾಡುವುದನ್ನು ನಿಯಂತ್ರಿಸಲು ನಗರದಾದ್ಯಂತ ಸುಮಾರು 65 ಕಸ ಕಿಯೋಸ್ಕ್ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಬೆಳಗ್ಗೆ ಆಟೋಗಳಿಗೆ ಕಸ ನೀಡಲು ಸಾಧ್ಯವಾಗದವರು ಕಿಯೋಸ್ಕ್‌ಗಳಿಗೆ ಭೇಟಿ ನೀಡಿ ಕಸ ನೀಡಬಹುದಾಗಿದೆ. ಪ್ರತಿ ಕಸ ಕಿಯೋಸ್ಕ್ ನಲ್ಲಿ 100 ಲೀಟರ್ ಸಾಮರ್ಥ್ಯದ ನಾಲ್ಕು ಸಂಗ್ರಹಣಾ ಬಿನ್ ಕಲ್ಪಿಸಲಾಗಿದ್ದು, ಸಾರ್ವಜನಿಕರು ನಿಗದಿಪಡಿಸಿದ ಸಮಯದಲ್ಲಿ ಬೇರ್ಪಡಿಸಿದ ಕಸವನ್ನು ಯಾವುದೇ ಶುಲ್ಕವಿಲ್ಲದೆ ಈ ಕಿಯೋಸ್ಕ್ ಗಳಿಗೆ ಉಚಿತವಾಗಿ ನೀಡಬಹುದಾಗಿದೆ.