ಸರ್ಕಾರಿ ಆಂಗ್ಲ ಶಾಲೇಲಿ ಕಲಿತ 30,000 ಮಕ್ಕಳು ಅತಂತ್ರ!

Published : Jun 14, 2026, 09:01 AM IST
Karnataka Government English Medium School Students Face Uncertain Future

ಸಾರಾಂಶ

ಬಡವರು ಮತ್ತು ರೈತರ ಮಕ್ಕಳೂ ಆಂಗ್ಲ ಮಾಧ್ಯಮದಲ್ಲಿ ಓದಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ 2018-19ನೇ ಸಾಲಿನಲ್ಲಿ ರಾಜ್ಯಾದ್ಯಂತ 1001 ಕನ್ನಡ ಶಾಲೆಗಳಲ್ಲಿ ಆರಂಭಿಸಿದ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಓದಿದ ಸುಮಾರು 30 ಸಾವಿರ ವಿದ್ಯಾರ್ಥಿಗಳು ಮುಂದಿನ ದಾರಿ ಗೊತ್ತಾಗದೇ ಅತಂತ್ರರಾಗಿದ್ದಾರೆ!

  ಚಂದ್ರು ಕೊಂಚಿಗೇರಿ

 ಹೂವಿನಹಡಗಲಿ :  ಬಡವರು ಮತ್ತು ರೈತರ ಮಕ್ಕಳೂ ಆಂಗ್ಲ ಮಾಧ್ಯಮದಲ್ಲಿ ಓದಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ 2018-19ನೇ ಸಾಲಿನಲ್ಲಿ ರಾಜ್ಯಾದ್ಯಂತ 1001 ಕನ್ನಡ ಶಾಲೆಗಳಲ್ಲಿ ಆರಂಭಿಸಿದ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಓದಿದ ಸುಮಾರು 30 ಸಾವಿರ ವಿದ್ಯಾರ್ಥಿಗಳು ಮುಂದಿನ ದಾರಿ ಗೊತ್ತಾಗದೇ ಅತಂತ್ರರಾಗಿದ್ದಾರೆ!

ಕಾರಣ, 1ರಿಂದ 7ನೇ ತರಗತಿಯವರೆಗೆ ಇವರು ಆಂಗ್ಲ ಮಾಧ್ಯಮದಲ್ಲಿ ಓದಿದ್ದಾರೆ. 8ನೇ ತರಗತಿಗೆ ಯಾವ ಶಾಲೆ ಮತ್ತು ಯಾವ ಮಾಧ್ಯಮದಲ್ಲಿ ಓದಬೇಕು ಎನ್ನುವ ಗೊಂದಲ ಅವರನ್ನು ಕಾಡುತ್ತಿದೆ.

1001 ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ತೆರೆದ ಸರ್ಕಾರ (ಆರಂಭದಲ್ಲಿ ಕೆಪಿಎಸ್‌, ಈಗ ಪಿಎಂಶ್ರೀ), 7 ವರ್ಷ ಗತಿಸಿದರೂ ಆಂಗ್ಲ ಮಾಧ್ಯಮ ಹೈಸ್ಕೂಲು ಆರಂಭಿಸಿಲ್ಲ. ಈಗ ಆ ಮಕ್ಕಳು ಯಾವ ಶಾಲೆಗೆ ಪ್ರವೇಶ ಪಡೆಯಬೇಕು? ಸರ್ಕಾರಿ ಹೈಸ್ಕೂಲು ಇಲ್ಲ, ಖಾಸಗೀ ಹೈಸ್ಕೂಲು ಸೇರುವ ಶಕ್ತಿ ಬಹುತೇಕರಿಗೆ ಇಲ್ಲ.

1001 ಆಂಗ್ಲ ಮಾಧ್ಯಮ ಶಾಲೆ:

ಬಾಗಲಕೋಟೆ-28, ಬಳ್ಳಾರಿ-43, ಬೆಳಗಾವಿ-74, ಬೆಂಗಳೂರು-144, ಬೀದರ್‌-26, ಚಾಮರಾಜನಗರ-17, ಚಿಕ್ಕಬಳ್ಳಾಪುರ-20, ಚಿಕ್ಕಮಗಳೂರು-21, ಚಿತ್ರದುರ್ಗ-24, ದಕ್ಷಿಣ ಕನ್ನಡ-48, ದಾವಣಗೆರೆ-31, ಧಾರವಾಡ-28, ಗದಗ-17, ಹಾಸನ-38, ಹಾವೇರಿ-25, ಕಲಬುರಗಿ-39, ಕೊಡಗು-8, ಕೋಲಾರ-24, ಕೊಪ್ಪಳ-20, ಮಂಡ್ಯ-32, ಮೈಸೂರು-46, ರಾಯಚೂರು-33, ರಾಮನಗರ-24, ಶಿವಮೊಗ್ಗ-30, ತುಮಕೂರು-49, ಉಡುಪಿ-24, ಉತ್ತರ ಕನ್ನಡ-27, ವಿಜಯಪುರ-38, ಯಾದಗಿರಿ-23 ಸೇರಿದಂತೆ ಒಟ್ಟು ರಾಜ್ಯದಲ್ಲಿ 1001 ಆಂಗ್ಲ ಮಾಧ್ಯಮ ಶಾಲೆಗಳಿವೆ.

ಈ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಈಗಾಗಲೇ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು 7ನೇ ತರಗತಿ ಉತ್ತೀರ್ಣರಾಗಿದ್ದಾರೆ. ಆದರೆ ಇವರಿಗೆ 8ನೇ ತರಗತಿಗೆ ಪ್ರವೇಶ ನೀಡಲು ಸರ್ಕಾರ ಯಾವ ಸಿದ್ಧತೆಯೂ ನಡೆಸಿಲ್ಲ. ಜತೆಗೆ ಆಂಗ್ಲ ಮಾಧ್ಯಮ ಪುಸ್ತಕಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಿಲ್ಲ. ಇದರಿಂದ ಈ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಎಲ್ಲ ಕಡೆಗೂ ಶಾಲೆಗಳಲ್ಲಿ ದಾಖಲಾತಿ ಆರಂಭವಾಗಿದೆ. ಜೂನ್‌ ಅರ್ಧ ತಿಂಗಳು ಕಳೆದರೂ ಸರ್ಕಾರ ಮಾತ್ರ ಇತ್ತ ಸೂಕ್ತ ನಿರ್ಧಾರ ಕೈಗೊಂಡಿಲ್ಲ.

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನಲ್ಲಿ ಹಿರೇಹಡಗಲಿ, ಮಾಗಳ, ಮಿನಿ ವಿಧಾನಸೌಧ ಹಡಗಲಿ ಹಾಗೂ ಹ್ಯಾರಡ ಗ್ರಾಮಗಳಲ್ಲಿ 7ನೇ ತರಗತಿ ಆಂಗ್ಲ ಮಾಧ್ಯಮದಲ್ಲಿ ಅಭ್ಯಾಸ ಮಾಡಿ 8ನೇ ತರಗತಿಗೆ ಪ್ರವೇಶಕ್ಕೆ ವಿದ್ಯಾರ್ಥಿಗಳು ಮತ್ತು ಪಾಲಕರು ಗೊಂದಲದಲ್ಲಿ ಇರುವುದು ಕಂಡು ಬಂತು. ಬಿಇಒ, ಡಿಡಿಪಿಐ ಯಾರಿಂದಲೂ ಸ್ಪಷ್ಟ ಉತ್ತರವಿಲ್ಲ.

2026-27ನೇ ಸಾಲಿಗೆ ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ 8ನೇ ತರಗತಿ ಆಂಗ್ಲ ಮಾಧ್ಯಮ ವಿಭಾಗವನ್ನು ಪ್ರಾರಂಭಿಸುವ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.

-ಕೆ.ಮಂಗಳಾ, ಹೂವಿನಹಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿ.

ಈಗಾಗಲೇ ನಮ್ಮ ಮಕ್ಕಳು 1ರಿಂದ 7ನೇ ತರಗತಿ ವರೆಗೂ ಆಂಗ್ಲ ಮಾಧ್ಯಮದಲ್ಲಿ ಅಭ್ಯಾಸ ಮಾಡಿದ್ದಾರೆ. ಆದರೆ ಸರ್ಕಾರ ಈ ವರೆಗೂ 8ನೇ ತರಗತಿ ಆಂಗ್ಲ ಮಾಧ್ಯಮ ಶಾಲೆ ಕುರಿತು ಕ್ರಮ ಕೈಗೊಂಡಿಲ್ಲ. ಯಾವ ಶಾಲೆಯಲ್ಲಿ ದಾಖಲು ಮಾಡಬೇಕೆಂಬ ಗೊಂದಲದಲ್ಲಿದ್ದೇವೆ.

-ಹೂವಿನಹಡಗಲಿ ಪಾಲಕರು.

ಏನಿದು ಗೊಂದಲ?

- 2018-19ನೇ ಸಾಲಿನಲ್ಲಿ 1001 ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನೂ ಆರಂಭಿಸಿದ್ದ ರಾಜ್ಯ ಸರ್ಕಾರ

- ಈ ಶಾಲೆಗಳಲ್ಲಿ ಕಲಿತ 30 ಸಾವಿರ ಮಕ್ಕಳು ಈಗ 7ನೇ ಕ್ಲಾಸ್‌ ಪಾಸ್‌. ಆದರೆ 8ನೇ ಕ್ಲಾಸ್ ಬಗ್ಗೆ ಗೊಂದಲ

- ಗೊಂದಲ ಏಕೆಂದರೆ 8ನೇ ಕ್ಲಾಸ್‌ಗೆ ಇನ್ನೂ ರಾಜ್ಯ ಸರ್ಕಾರ ಆಂಗ್ಲ ಮಾಧ್ಯಮವನ್ನೇ ಆರಂಭಿಸಿಲ್ಲ

- ಹೀಗಾಗಿ 7ನೇ ತರಗತಿ ಪಾಸಾದವರಿಗೆ 8ನೇ ತರಗತಿಗೆ ಯಾವ ಶಾಲೆಗೆ ಹೋಗಬೇಕೆಂಬ ಗಲಿಬಿಲಿ

- ಜೂನ್‌ ಅರ್ಧ ತಿಂಗಳು ಕಳೆದರೂ ಸರ್ಕಾರ ಮಾತ್ರ ಇತ್ತ ಸೂಕ್ತ ನಿರ್ಧಾರ ಕೈಗೊಂಡಿಲ್ಲ: ಆಕ್ರೋಶ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಮೀನು ಸೇವನೆಯಿಂದ ರೋಗ ನಿರೋಧಕ ಶಕ್ತಿ ವೃದ್ಧಿ
ಅಪಾಯದ ಅಂಚಿನಲ್ಲಿ ಹೈಕೋರ್ಟ್‌ ಹಿಂಭಾಗದ ಕಬ್ಬಿಣದ ಕಾಂಪೌಂಡ್‌