ಚಾ.ನಗರ ಅರಣ್ಯದಲ್ಲಿ 66 ಬಾರಿ ಶೂಟೌಟ್‌: ರಾಮಲಿಂಗಾ ರೆಡ್ಡಿ

Published : Aug 23, 2026, 11:17 AM IST
ramalinga reddy karnataka congress resignation portfolio dispute dk shivakumar biography news

ಸಾರಾಂಶ

ಅರಣ್ಯ ಪ್ರದೇಶದ ಅಂಚಿನ ಗ್ರಾಮಗಳಲ್ಲಿ ಪರವಾನಗಿ ಇಲ್ಲದೇ ಬಂದೂಕುಗಳನ್ನು ಇಟ್ಟುಕೊಂಡಿರುವವರ ಪತ್ತೆ ಮಾಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.

ಬೆಂಗಳೂರು : ಅರಣ್ಯ ಪ್ರದೇಶದ ಅಂಚಿನ ಗ್ರಾಮಗಳಲ್ಲಿ ಪರವಾನಗಿ ಇಲ್ಲದೇ ಬಂದೂಕುಗಳನ್ನು ಇಟ್ಟುಕೊಂಡಿರುವವರ ಪತ್ತೆ ಮಾಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಹನೂರು ಶೂಟೌಟ್‌ ಪ್ರಕರಣದ ನ್ಯಾಯಾಂಗ ತನಿಖಾ ವರದಿಯನ್ನು ಪರಿಶೀಲಿಸಿ, ಯಾರದ್ದು ತಪ್ಪು ಎಂಬುದನ್ನು ನಿರ್ಧರಿಸಲಾಗುವುದು. ಒಂದು ವೇಳೆ ನಮ್ಮ ಅಧಿಕಾರಿಗಳ ತಪ್ಪಿದ್ದರೆ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು. ಇನ್ನು, ಬೇಟೆಗೆ ಹೋಗಿರುವ ಕುರಿತು ಸಾಕ್ಷಿಗಳಿವೆ. ಆದರೂ, ವರದಿ ಬಂದ ನಂತರ ಉಳಿದ ವಿಚಾರಗಳನ್ನು ವರದಿ ಪರಿಶೀಲಿಸಿ, ಯಾರದ್ದು ತಪ್ಪು, ಏನು ಕ್ರಮ ಎಂಬುದನ್ನು ಸೋಮವಾರ ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡುತ್ತೇನೆ ಎಂದರು.

ನಾಡ ಬಂದೂಕುಗಳನ್ನು ಇಟ್ಟುಕೊಂಡಿರುವ ವರದಿ

ಅರಣ್ಯದಂಚಿನ ಗ್ರಾಮ, ಪ್ರದೇಶಗಳಲ್ಲಿನ ನಿವಾಸಿಗಳು ಪರವಾನಗಿಯಿಲ್ಲದೆ ನಾಡ ಬಂದೂಕುಗಳನ್ನು ಇಟ್ಟುಕೊಂಡಿರುವ ವರದಿಯಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ಪರವಾನಗಿಯಿಲ್ಲದೆ ಬಂದೂಕು ಇಟ್ಟುಕೊಂಡವರ ಪತ್ತೆಗೆ ಗೃಹ ಸಚಿವರೊಂದಿಗೆ ಮಾತನಾಡುತ್ತೇನೆ. ಪರವಾನಗಿಯಿಲ್ಲದೆ ಬಂದೂಕು ಇಟ್ಟುಕೊಂಡಿರುವವರ ಪತ್ತೆಯಾದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

66 ಬಾರಿ ಗುಂಡಿನ ಚಕಮಕಿ:

ಹನೂರು ಶೂಟೌಟ್‌ ಪ್ರಕರಣದಲ್ಲಿ ವಿರೋಧ ಪಕ್ಷದ ನಾಯಕರು ರಾಜಕಾರಣಕ್ಕಾಗಿ ಆರೋಪ ಮಾಡುತ್ತಾ ನಮ್ಮ ಅಧಿಕಾರಿಗಳ ನೈತಿಕ ಬಲ ಕುಗ್ಗಿಸಬಾರದು. ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬನ್ನೇರುಘಟ್ಟದಲ್ಲಿ ಶ್ರೀಗಂಧ ಮರ ಕಳ್ಳತನ ವಿಚಾರವಾಗಿ ಶೂಟೌಟ್‌ ನಡೆದಿತ್ತು. ಅದೇ ರೀತಿ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ನಾಲ್ಕು ಶೂಟೌಟ್‌ಗಳು ನಡೆದು, ಮೂವರು ಮೃತಪಟ್ಟಿದ್ದರು. 2011ರಿಂದ 2026ರವರೆಗೆ ಚಾಮರಾಜನಗರ ಅರಣ್ಯ ವಿಭಾಗ ವ್ಯಾಪ್ತಿಯಲ್ಲಿಯೇ 66 ಬಾರಿ ಗುಂಡಿನ ಚಕಮಕಿಗಳು ನಡೆದಿವೆ. ಅರಣ್ಯ, ವನ್ಯಜೀವಿ ಉಳಿಸುವುದು ನಮ್ಮ ಇಲಾಖೆಯ ಕರ್ತವ್ಯ. ಅದನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಾಜ್ಯದಲ್ಲಿ ಮೋಡ ಬಿತ್ತನೆಗೆ ಆದೇಶ
ರಾಜ್ಯಾದ್ಯಂತ ಕೃತಕ ಪನ್ನೀರ್‌ ನಿಷೇಧ