;Resize=(412,232))
ಬೆಂಗಳೂರು : ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಮಾಡಲು ಸರ್ಕಾರ ಮುಂದಾಗಿದ್ದು, 60 ದಿನ, 200 ಗಂಟೆಗಳ ವೈಮಾನಿಕ ಹಾರಾಟ ಮೂಲಕ ಮೋಡ ಬಿತ್ತನೆ ಮಾಡಲು ಅಧಿಕೃತ ಆದೇಶ ಹೊರಡಿಸಿದೆ.
ಪ್ರಸಕ್ತ ವರ್ಷದಲ್ಲಿ ಮಳೆ ಕೊರತೆ ಹಿನ್ನೆಲೆ ರಾಜ್ಯದಲ್ಲಿ ಮೋಡ ಬಿತ್ತನೆ ಕಾರ್ಯಕ್ರಮ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಈ ಹಿಂದೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಭಾಗವಾರು ನಡೆಸಿದ ಸಭೆಯಲ್ಲಿ ಜನಪ್ರತಿನಿಧಿಗಳು ಮೋಡ ಬಿತ್ತನೆಗಾಗಿ ಆಗ್ರಹಿಸಿದ್ದರು. ಅದಕ್ಕೆ ಪೂರಕವಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮೋಡ ಬಿತ್ತನೆ ಪ್ರಸ್ತಾವ ಸಲ್ಲಿಸಿತ್ತು. ಜೂನ್ ತಿಂಗಳ ಅಂತ್ಯಕ್ಕೆ ಶೇ.42 ಹಾಗೂ ಜುಲೈ ಅಂತ್ಯಕ್ಕೆ ಶೇ.29ರಷ್ಟು ಮಳೆ ಕೊರತೆ ಕಾಣಿಸಿಕೊಂಡಿತ್ತು. ಇನ್ನು, ಆ.13ರ ವೇಳೆಗೆ ರಾಜ್ಯದ 31 ಜಿಲ್ಲೆಗಳ ಪೈಕಿ 27 ಜಿಲ್ಲೆಗಳ 178 ತಾಲೂಕುಗಳಲ್ಲಿ ಮಳೆ ಕೊರತೆಯುಂಟಾಗಿದೆ. ಈ ಕಾರಣದಿಂದಾಗಿ ಸರ್ಕಾರ ಮಳೆ ಕೊರತೆ ಪ್ರದೇಶದಲ್ಲಿ ಮೋಡ ಬಿತ್ತನೆ ಮೂಲಕ ಮಳೆಯಾಗಿಸಲು ಮುಂದಾಗಿದೆ.
ಮಳೆ ಕೊರತೆ ಪ್ರದೇಶ ಗುರುತಿಸಿ ಅಲ್ಲಿ 60 ದಿನಗಳಲ್ಲಿ 200 ಗಂಟೆಗಳ ವೈಮಾನಿಕ ಹಾರಾಟ ಮೂಲಕ ಮೋಡ ಬಿತ್ತನೆ ಮಾಡಲು ಆದೇಶಿಸಲಾಗಿದೆ. ಇದಕ್ಕಾಗಿ ಸರ್ಕಾರ ಒಟ್ಟು 28.52 ಕೋಟಿ ರು. ವ್ಯಯಿಸುತ್ತಿದೆ. ಮೋಡ ಬಿತ್ತನೆಯ ಅನುಷ್ಠಾನದ ಹೊಣೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ನೀಡಲಾಗಿದೆ. ವೈಜ್ಞಾನಿಕ ಮೇಲ್ವಿಚಾರಣೆ, ಕಾರ್ಯಾಚರಣೆ ನಂತರದ ಮೌಲ್ಯಮಾಪನ, ಬಿಲ್ ಪ್ರಮಾಣೀಕರಣ ಮತ್ತು ಇತರ ತಾಂತ್ರಿಕ ಚಟುವಟಿಕೆಯನ್ನು ಕೇಂದ್ರ ಕೈಗೊಳ್ಳಲಿದೆ. ಉಳಿದಂತೆ ಆಡಳಿತಾತ್ಮಕ ಮತ್ತು ಆರ್ಥಿಕ ವಿಷಯಗಳನ್ನು ಜಲಸಂಪನ್ಮೂಲ ಇಲಾಖೆಯ ಕರ್ನಾಟಕ ನೀರಾವರಿ ನಿಗಮ ಮೂಲಕ ಕೈಗೊಳ್ಳಲು ಸರ್ಕಾರ ಆದೇಶಿಸಿದೆ.