76 ವರ್ಷ ಹಳೆಯ ಕರ್ನಾಟಕ ವಿವಿಗೆ ಆರ್ಥಿಕ ಸಂಕಷ್ಟ - 416 ಬೋಧಕ, 849 ಬೋಧಕೇತರ ಹುದ್ದೆ ಖಾಲಿ

Published : Mar 29, 2025, 09:27 AM IST
Karnataka VV

ಸಾರಾಂಶ

ಮೈಸೂರು ವಿಶ್ವವಿದ್ಯಾಲಯದ ನಂತರ ರಾಜ್ಯದಲ್ಲಿ ಎರಡನೇ ಹಳೆಯ ವಿಶ್ವವಿದ್ಯಾಲಯ ಎಂಬ ಖ್ಯಾತಿಯ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪ್ರಸ್ತುತ ಹೇಳತೀರದ ಆರ್ಥಿಕ ಸಂಕಷ್ಟದಲ್ಲಿದ್ದು, ಬರುವ ಜೂನ್‌ನಿಂದ ವಿಶ್ವವಿದ್ಯಾಲಯದ 1800 ನಿವೃತ್ತ ನೌಕರರಿಗೆ ಪಿಂಚಣಿ ಸ್ಥಗಿತಗೊಂಡರೂ ಅಚ್ಚರಿ ಇಲ್ಲ!

ಬಸವರಾಜ ಹಿರೇಮಠ

 ಧಾರವಾಡ :  ಮೈಸೂರು ವಿಶ್ವವಿದ್ಯಾಲಯದ ನಂತರ ರಾಜ್ಯದಲ್ಲಿ ಎರಡನೇ ಹಳೆಯ ವಿಶ್ವವಿದ್ಯಾಲಯ ಎಂಬ ಖ್ಯಾತಿಯ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪ್ರಸ್ತುತ ಹೇಳತೀರದ ಆರ್ಥಿಕ ಸಂಕಷ್ಟದಲ್ಲಿದ್ದು, ಬರುವ ಜೂನ್‌ನಿಂದ ವಿಶ್ವವಿದ್ಯಾಲಯದ 1800 ನಿವೃತ್ತ ನೌಕರರಿಗೆ ಪಿಂಚಣಿ ಸ್ಥಗಿತಗೊಂಡರೂ ಅಚ್ಚರಿ ಇಲ್ಲ!

ಕಳೆದ 3 ವರ್ಷಗಳಿಂದ ವಿಶ್ವವಿದ್ಯಾಲಯದ ಆಂತರಿಕ ಸಂಪನ್ಮೂಲಗಳದಿಂದ ಬರುತ್ತಿರುವ ಆದಾಯ ಶೈಕ್ಷಣಿಕ ಕಾರ್ಯಕ್ಕೆ ಕೊಟ್ಟರೆ, ಸಂಶೋಧನಾ ಕಾರ್ಯಗಳಿಗಿಲ್ಲ, ವೇತನಕ್ಕೆ ಹಣ ಕೊಟ್ಟರೆ ನಿವೃತ್ತರ ಪಿಂಚಿಣಿಗಿಲ್ಲ ಎನ್ನುವಂತಾಗಿದೆ. ಇದರಿಂದ ಸರ್ಕಾರ ಕಳೆದ ಮೂರು ವರ್ಷಗಳಿಂದ ನೂರಾರು ಕೋಟಿ ರು. ಅನುದಾನವನ್ನು ಈ ವಿವಿಯ ನಿವೃತ್ತರ ನೌಕರರ ಪಿಂಚಿಣಿಗಾಗಿ ನೀಡಿದೆ. ಈ ವರ್ಷವೂ ಪಿಂಚಿಣಿಗಾಗಿ 126 ಕೋಟಿ ರು. ಅನುದಾನ ನೀಡುವಂತೆ ವಿವಿಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರೇ ಹೇಳಿದ್ದಾರೆ.

ಹಣದ ಮೂಲ ಇಲ್ಲ:

ವಿವಿ ಹಣಕಾಸಿನ ಮೂಲಗಳು ಸಂಪೂರ್ಣ ಬತ್ತಿ ಹೋಗಿದ್ದು, ರಾಜ್ಯ ಸರ್ಕಾರ ಕನಿಷ್ಠ ಪಿಂಚಣಿ ಹಣವನ್ನಾದರೂ ನೀಡದೇ ಇದ್ದಲ್ಲಿ ಜೂನ್‌ ತಿಂಗಳ ಪಿಂಚಣಿ ಸ್ಥಗಿತ, ಅತಿಥಿ ಉಪನ್ಯಾಸಕರ ಸಂಬಳಕ್ಕೂ ಹಣದ ಕೊರತೆ ಸೇರಿ ಒಂದೊಂದಾಗಿ ಸಮಸ್ಯೆಗಳು ಬಿಗಡಾಯಿಸುವ ಅಪಾಯ ಗೋಚರಿಸುತ್ತಿದೆ. 1800ಕ್ಕೂ ಹೆಚ್ಚು ಪಿಂಚಣಿದಾರರಿದ್ದು, ಇವರಿಗೆ ವಾರ್ಷಿಕವಾಗಿ ₹126 ಕೋಟಿಗೂ ಹೆಚ್ಚಿನ ಅನುದಾನ ಅಗತ್ಯವಿದೆ. ಸರ್ಕಾರ ಕಳೆದ ವರ್ಷ ₹70 ಕೋಟಿ ಮಾತ್ರ ನೀಡಿದ್ದು, ಉಳಿದ ಹಣವನ್ನು ಆಂತರಿಕ ಸಂಪನ್ಮೂಲದಿಂದ ಭರಿಸಲಾಗಿದೆ. ಮೇವರೆಗೂ ನೀಡಲು ಹಣ ಹೊಂದಿಸಲಾಗುತ್ತಿದೆ, ಜೂನ್‌ನಿಂದ ಪಿಂಚಣಿಗೆ ಹಣವೇ ಇಲ್ಲ, ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಪಿಂಚಿಣಿ ಜೂನ್‌ನಿಂದ ಬಂದ್‌ ಆಗಬಹುದು ಎಂದು ವಿವಿಯ ಅಧಿಕಾರಿಗಳೇ ಹೇಳುತ್ತಿದ್ದಾರೆ.

1944ರಲ್ಲಿ ಆರಂಭವಾದ ಕರ್ನಾಟಕ ವಿವಿ ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿದೆ. 50 ಸ್ನಾತಕ, 40 ಸ್ನಾತಕೋತ್ತರ ವಿಭಾಗಗಳನ್ನು ಹೊಂದಿದೆ. ವಿಶ್ವವಿದ್ಯಾಲಯ ಹೆಸರಿನಲ್ಲಿ ಬರೋಬ್ಬರಿ 888 ಎಕರೆ ಭೂಮಿ ಇದೆ. ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಒಟ್ಟು 218 ಕಾಲೇಜುಗಳಿದ್ದು, ಪದವಿ ಹಾಗೂ ಸ್ನಾತಕೋತ್ತರ ಸೇರಿ 1.30 ಲಕ್ಷ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಈ ವಿವಿಗೆ ವಾರ್ಷಿಕವಾಗಿ ಪರೀಕ್ಷೆ, ಪಿಂಚಣಿ ಸೇರಿ ಆಡಳಿತ ನಿರ್ವಹಣೆಗೆ ಅಂದಾಜು ₹162 ಕೋಟಿ ವೆಚ್ಚವಿದೆ. ಈ ಪೈಕಿ ಪರೀಕ್ಷಾ ಶುಲ್ಕ ಸೇರಿ ₹76 ಕೋಟಿ ಆಂತರಿಕ ಸಂಪನ್ಮೂಲದಿಂದ ಸಂಗ್ರಹವಾಗುತ್ತದೆ. ಆದರೆ, ಇನ್ನುಳಿದ ₹86 ಕೋಟಿ ಪಿಂಚಣಿ ಹಣ ಸರ್ಕಾರ ಭರಿಸಬೇಕು.

ಆರ್ಥಿಕ ಸಂಕಷ್ಟಕ್ಕೆ ಕಾರಣವೇನು?:

ಈ ಮೊದಲು ವಿಶ್ವವಿದ್ಯಾಲಯಕ್ಕೆ ದೂರ ಶಿಕ್ಷಣಕ್ಕೆ ವಿದ್ಯಾರ್ಥಿಗಳ ಪ್ರವೇಶದಿಂದ ಆಂತರಿಕ ಸಂಪನ್ಮೂಲ ಹೆಚ್ಚಾಗಿತ್ತು. ದೂರ ಶಿಕ್ಷಣವನ್ನು ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಮಾತ್ರ ಸೀಮಿತವಾಗಿಸಿದ್ದರಿಂದ ಹೊಡೆತ ಬಿತ್ತು. ಜೊತೆಗೆ ಹಿಂದಿನ ಸರ್ಕಾರ ಹಾವೇರಿ ಜಿಲ್ಲೆಯ ಕಾಲೇಜುಗಳನ್ನು ಧಾರವಾಡ ವಿವಿಯಿಂದ ತೆಗೆದು ಹಾವೇರಿಯಲ್ಲೇ ಹೊಸ ವಿವಿ ಸ್ಥಾಪಿಸಿದ್ದು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಕಾರಣವಾಯಿತು.

ಸದ್ಯ ವಿವಿ 50 ವಿಭಾಗಗಳ ನಿರ್ವಹಣೆಯ ಸಮಸ್ಯೆ ಅನುಭವಿಸುತ್ತಿವೆ. ಕಳೆಯ ಕಟ್ಟಡ, ಹಾಸ್ಟೆಲ್‌ ದುರಸ್ತಿಗೂ ದುಡ್ಡಿಲ್ಲ. ಎಂಬಿಎ ಅಂಥ ಕೆಲ ವಿಭಾಗಗಳನ್ನು ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ನಡೆಸುತ್ತಿವೆ. ಐದು ಅಥವಾ ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ವಿಭಾಗಗಳನ್ನು ಮುಚ್ಚುವ ಹಂತಕ್ಕೂ ವಿವಿ ಬಂದಿರುವುದು ಸೋಜಿಗದ ಸಂಗತಿ.

416 ಬೋಧಕ, 849 ಬೋಧಕೇತರ ಹುದ್ದೆ ಖಾಲಿ:

ಅಲ್ಲದೆ, ಕರ್ನಾಟಕ ವಿವಿಯಲ್ಲಿ ಒಟ್ಟು ಮಂಜೂರಾದ 620 ಬೋಧಕ ಹುದ್ದೆಗಳ ಪೈಕಿ 204 ಬೋಧಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, 416 ಹುದ್ದೆಗಳು ಖಾಲಿ ಇವೆ. ಅದೇ ರೀತಿ 1,201 ಬೋಧಕೇತರ ಮಂಜೂರಾತಿ ಹುದ್ದೆಗಳ ಪೈಕಿ 352 ಜನರು ಕಾರ್ಯ ನಿರ್ವಹಿಸುತ್ತಿದ್ದು, 849 ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳನ್ನು ನಿಭಾಯಿಸಲು ವಿವಿಯಲ್ಲಿ 446 ಅತಿಥಿ ಉಪನ್ಯಾಸಕರು, 569 ಗುತ್ತಿಗೆ ಆಧಾರದ ಸಿಬ್ಬಂದಿ ನೇಮಿಸಿಕೊಳ್ಳಲಾಗಿದೆ. ಕಾಯಂ ನೌಕರರಿಗೆ ಸರ್ಕಾರ ವೇತನ ನೀಡುತ್ತಿದ್ದರೂ, ಅವರಿಗಿಂತ ಮೂರು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿರುವ ಅತಿಥಿ ಉಪನ್ಯಾಸಕರು, ಗುತ್ತಿಗೆ ನೌಕರರಿಗೆ ವೇತನ ನೀಡುವುದೇ ವಿವಿಗೆ ದೊಡ್ಡ ಸವಾಲಾಗಿದೆ. ಈ ಮಧ್ಯೆ, ಕಳೆದ 3 ದಿನಗಳಿಂದ ಸಂಬಳ ಹೆಚ್ಚಳಕ್ಕಾಗಿ ನೂರಾರು ಅತಿಥಿ ಉಪನ್ಯಾಸಕರು ವಿಶ್ವವಿದ್ಯಾನಿಲಯದ ಆಡಳಿತ ಕಚೇರಿ ಎದುರು ಧರಣಿ ಕೂತಿದ್ದು, ವಿಶ್ವವಿದ್ಯಾಲಯದ ಆಡಳಿತ ವರ್ಗಕ್ಕೆ ತಲೆನೋವಾಗಿದೆ.

ಕಾಯಂ ವಿಸಿ ಇಲ್ಲ: ಕಳೆದ ಏಳು ತಿಂಗಳಿಂದ ವಿಶ್ವವಿದ್ಯಾಲಯಕ್ಕೆ ಕಾಯಂ ಕುಲಪತಿಯೂ ಇಲ್ಲ. ಇದು ವಿವಿ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ವಿಚಾರಗಳಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುಲು ಹಿನ್ನಡೆಯಾಗುತ್ತಿದೆ. 7 ತಿಂಗಳಲ್ಲಿ ಮೂವರು ಹಂಗಾಮಿ ಕುಲಪತಿಗಳಾಗಿದ್ದು, ಈಗಿರುವ ಪ್ರೊ. ಜಯಶ್ರೀ ಎಸ್‌. ಅವರ ಅವಧಿಯೂ ಮೇಗೆ ಮುಕ್ತಾಯವಾಗಲಿದೆ.

ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಎಚ್‌ಆರ್‌ಎಂಎಸ್‌ ಮೂಲಕ ವೇತನ ನೀಡುತ್ತಿದ್ದು ಸಮಾಧಾನದ ಸಂಗತಿ. ಇದೇ ರೀತಿ ಪಿಂಚಣಿಯನ್ನೂ ಈ ವಿಧಾನಕ್ಕೆ ಸೇರಿದರೆ ವಿಶ್ವವಿದ್ಯಾಲಯ ಆರ್ಥಿಕ ಸಂಕಷ್ಟದಿಂದ ಪಾರಾಗುತ್ತದೆ. 76 ವರ್ಷಗಳ ಇತಿಹಾಸದ ವಿವಿಗೆ ಮೂಲಭೂತ ಸೌಕರ್ಯ ಸೇರಿ ಆಡಳಿತ ವ್ಯವಸ್ಥೆಗಳಿಗಾಗಿ ವಿಶೇಷ ಅನುದಾನದ ಅಗತ್ಯವೂ ಇದೆ. ಈ ಬಗ್ಗೆ ವಿಶ್ವವಿದ್ಯಾಲಯವು ಸರ್ಕಾರದ ಗಮನ ಸಹ ಸೆಳೆದಿದೆ.

ಪ್ರೊ. ಜಯಶ್ರೀ ಎಸ್‌., ಪ್ರಭಾರಿ ಕುಲಪತಿಗಳು, ಕರ್ನಾಟಕ ವಿವಿ

ಹಳೆಯ ವಿಶ್ವವಿದ್ಯಾಲಯ ಆಗಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪಿಂಚಣಿದಾರರು ಇದ್ದಾರೆ. ಮೊದಲಿನಂತೆ ರಾಜ್ಯ ಸರ್ಕಾರ ಅನುದಾನ ಒದಗಿಸದ ಹಿನ್ನೆಲೆಯಲ್ಲಿ ವಿವಿಗೆ ಆರ್ಥಿಕ ತೊಂದರೆಯಾಗಿದೆ. ಆಂತರಿಕ ಸಂಪನ್ಮೂಲ ಸಹ ಪಿಂಚಣಿಗೆ ಹೊಂದಾಣಿಕೆ ಮಾಡುತ್ತಿದ್ದು, ಜೂನ್‌ನಿಂದ ಪಿಂಚಣಿ ನೀಡಲು ವಿವಿ ಬಳಿ ಹಣವಿಲ್ಲ. ಉಳಿದಂತೆ ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆಗೆ ಯಾವುದೇ ಧಕ್ಕೆ ಇಲ್ಲ.

-ಡಾ.ಎ. ಚೆನ್ನಪ್ಪ, ಕುಲಸಚಿವರು, ಕರ್ನಾಟಕ ವಿವಿ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಗ್ಯಾರಂಟಿಯಿಂದಾಗಿ ತಲ ಆದಾಯದಲ್ಲಿ ರಾಜ್ಯ ನಂ.1: ಸಿದ್ದರಾಮಯ್ಯ
ಅರ್ಹರು ಪಂಚ ಗ್ಯಾರಂಟಿ ಯೋಜನೆಗಳನ್ನು ಸದ್ಬಳಸಿಕೊಳ್ಳಿ