ಕರ್ನಾಟಕದ ಶೇ.99ರಷ್ಟು ಮಕ್ಕಳಿಗೆ ಮೊಬೈಲ್‌ ಗೀಳು

Published : Jun 14, 2025, 05:28 AM IST
Mobile overheating tips

ಸಾರಾಂಶ

ಹೆಚ್ಚುತ್ತಿರುವ ಆನ್‌ಲೈನ್‌ ಮತ್ತು ಮೊಬೈಲ್‌ ಬಳಕೆ ಮಕ್ಕಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದ್ದು, ಅದರಿಂದ ಮಕ್ಕಳು ಹೆಚ್ಚಾಗಿ ಆನ್‌ಲೈನ್‌ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುತ್ತಿರುವ ಅಘಾತಕಾರಿ ಅಂಶವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬಹಿರಂಗಪಡಿಸಿದೆ.

ಬೆಂಗಳೂರು : ಹೆಚ್ಚುತ್ತಿರುವ ಆನ್‌ಲೈನ್‌ ಮತ್ತು ಮೊಬೈಲ್‌ ಬಳಕೆ ಮಕ್ಕಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದ್ದು, ಅದರಿಂದ ಮಕ್ಕಳು ಹೆಚ್ಚಾಗಿ ಆನ್‌ಲೈನ್‌ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುತ್ತಿರುವ ಅಘಾತಕಾರಿ ಅಂಶವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬಹಿರಂಗಪಡಿಸಿದೆ.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಚೈಲ್ಡ್‌ ಫಂಡ್‌ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ ಸಿದ್ಧಪಡಿಸಿರುವ ‘ರಾಜ್ಯದಲ್ಲಿ ಮಕ್ಕಳ ಆನ್‌ಲೈನ್‌ ಅಪಾಯಗಳ ಕುರಿತು ವಿಶೇಷ ಅಧ್ಯಯನ’ ವರದಿಯಲ್ಲಿ ಹಲವು ಅಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಆನ್‌ಲೈನ್‌ ಬಳಕೆ ಹಾಗೂ ಮೊಬೈಲ್‌ ಗೀಳಿನಿಂದ ಮಕ್ಕಳ ಮೇಲೆ ಉಂಟಾಗುತ್ತಿರುವ ನಕಾರಾತ್ಮಕ ಪರಿಣಾಮಗಳ ವಿವರಗಳನ್ನು ವರದಿಯಲ್ಲಿ ನೀಡಲಾಗಿದೆ.

ವಿಕಾಸಸೌಧದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಈ ವಿಶೇಷ ಅಧ್ಯಯನ ವರದಿಯನ್ನು ಸಭಾಪತಿ ಬಸವರಾಜ ಹೊರಟ್ಟಿ ಬಿಡುಗಡೆ ಮಾಡಿದರು.

5 ಜಿಲ್ಲೆಗಳಲ್ಲಿ ಅಧ್ಯಯನ:

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಚೈಲ್ಡ್‌ ಫಂಡ್‌ ಇಂಡಿಯಾ ಸಂಸ್ಥೆಗಳು ಬೆಂಗಳೂರು, ಬೆಳಗಾವಿ, ಚಿಕ್ಕಮಗಳೂರು, ಚಾಮರಾಜನಗರ, ರಾಯಚೂರು ಜಿಲ್ಲೆಗಳಲ್ಲಿನ 8ರಿಂದ 18 ವರ್ಷ ವಯಸ್ಸಿನ 900ಕ್ಕೂ ಹೆಚ್ಚಿನ ಮಕ್ಕಳ ಹಾವಭಾವ, ಅವರ ಆನ್‌ಲೈನ್‌-ಮೊಬೈಲ್‌ ಬಳಕೆ ಕುರಿತಂತೆ ಅಧ್ಯಯನ ನಡೆಸಲಾಗಿದೆ. ಅಧ್ಯಯನದಲ್ಲಿ ತಿಳಿದುಬಂದಿರುವಂತೆ 8ರಿಂದ 11 ವರ್ಷ ವಯಸ್ಸಿನ ಮಕ್ಕಳು ಶೇ. 87ರಷ್ಟು ಮೊಬೈಲ್‌-ಆನ್‌ಲೈನ್‌ ಬಳಕೆ ಮಾಡುತ್ತಿದ್ದಾರೆ. ಉಳಿದಂತೆ 15ರಿಂದ 18 ವರ್ಷ ವಯಸ್ಸಿನ ಮಕ್ಕಳಲ್ಲಿ ಶೇ. 99ರಷ್ಟು ಹುಡುಗರು ಮತ್ತು ಶೇ.100ರಷ್ಟು ಹುಡುಗಿಯರು ಮೊಬೈಲ್‌ ಬಳಕೆ ಅಥವಾ ಗೀಳಿಗೆ ತುತ್ತಾಗಿದ್ದಾರೆ ಎಂದು ತಿಳಿದು ಬಂದಿದೆ.

ಆನ್‌ಲೈನ್‌ ಲೈಂಗಿಕ ದೌರ್ಜನ್ಯ:

ಅಧ್ಯಯನದ ಭಾಗವಾಗಿ ಮಕ್ಕಳ ಪೋಷಕರ ಅಭಿಪ್ರಾಯ ಪಡೆಯಲಾಗಿದೆ. ಅದರಲ್ಲಿ ಅಭಿಪ್ರಾಯ ಸಂಗ್ರಹಿಸಲಾದ 903 ಮಕ್ಕಳ ಪೋಷಕರಲ್ಲಿ ಶೇ.42ರಷ್ಟು ಪೋಷಕರು ತಮ್ಮ ಮಗು ಆನ್‌ಲೈನ್‌ ಲೈಂಗಿಕ ಶೋಷಣೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ (ಒಎಸ್‌ಇಎಸಿ)ಗೆ ತುತ್ತಾಗಿದೆ ಎಂದು ತಿಳಿಸಿದ್ದಾರೆ. ಶೇ.43ರಷ್ಟು ಮಕ್ಕಳು ಆನ್‌ಲೈನ್‌ ಬೆದರಿಕೆ, ಶೇ.32 ಲೈಂಗಿನ ಗ್ರೂಮಿಂಗ್‌, ಶೇ. 30 ಮಕ್ಕಳು ಲೈಂಗಿಕವಾಗಿ ವಸ್ತುಗಳ ವಿನಿಮಯದಂತಹ ಪ್ರಕರಣ ನಡೆದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಈ ಲೈಂಗಿಕ ದೌರ್ಜನ್ಯ ಸೇರಿ ಮಕ್ಕಳ ಮೇಲಿನ ದಬ್ಬಾಳಿಕೆ ಕುರಿತಂತೆ ಶೇ.46ರಷ್ಟು ಪ್ರಕರಣಗಳಲ್ಲಿ ಮಕ್ಕಳೇ ತಮ್ಮ ಪೋಷಕರಿಗೆ ವಿಚಾರ ತಿಳಿಸಿದ್ದಾರೆ. ಉಳಿದಂತೆ ಆನ್‌ಲೈನ್‌ ಚಟುವಟಿಕೆ ಮೇಲೆ ನಿಗಾವಹಿಸಿ ಶೇ. 27 ಪ್ರಕರಣ, ಮಕ್ಕಳ ಅಸ್ವಾಭಾವಿಕ ನಡವಳಿಕೆಯಿಂದ ಶೇ.18ರಷ್ಟು ಹಾಗೂ ಶೇ. 9ರಷ್ಟು ಪ್ರಕರಣಗಳು ಮಗು ಬೇರೋಬ್ಬರಿಗೆ ಹೇಳಿ ಅವರಿಂದ ಪೋಷಕರಿಗೆ ತಿಳಿದು ಬಂದಿದೆ.

ಹೀಗೆ ಮಕ್ಕಳ ಮೇಲೆ ಆನ್‌ಲೈನ್‌ ಲೈಂಗಿಕ ದೌರ್ಜನ್ಯ ಪ್ರಕರಣ ಪತ್ತೆಯಾದ ನಂತರದಿಂದ ಶೇ.50ರಷ್ಟು ಪೋಷಕರು ಮಕ್ಕಳ ಸಾಮಾಜಿಕ ಜಾಲತಾಣದ ಖಾತೆ ರದ್ದು ಮಾಡಿಸಿದ್ದಾರೆ. ಶೇ.46ರಷ್ಟು ಪೋಷಕರು ದೌರ್ಜನ್ಯ ಎಸಗುವವರ ಖಾತೆಯನ್ನು ಬ್ಲಾಕ್‌ ಮಾಡಿದ್ದಾರೆ ಎಂದು ವರದಿಯಲ್ಲಿ ತಿಳಿದುಬಂದಿದೆ. ಉಳಿದಂತೆ ಮಕ್ಕಳಿಗೆ ಮಾನಸಿಕ ಸ್ಥೈರ್ಯ ತುಂಬಿ, ವೆಬ್‌ಸೈಟ್‌ ಮತ್ತು ಸಾಮಾಜಿಕ ಜಾಲತಾಣದ ಬಳಕೆ ಕುರಿತ ಜಾಗೃತಿ ಮೂಡಿಸುವ ಕಾರ್ಯವನ್ನು ಹಲವು ಪೋಷಕರು ಮಾಡಿದ್ದಾರೆ ಎಂಬ ವಿಚಾರ ಅಧ್ಯಯನ ವರದಿಯಿಂದ ಗೊತ್ತಾಗಿದೆ.

ಅಧ್ಯಯನದ ಪ್ರಕಾರ 12ರಿಂದ 14 ವರ್ಷದ ಶೇ.97ರಷ್ಟು ಮಕ್ಕಳು ಯೂಟ್ಯೂಬ್‌ ಬಳಕೆ ಮಾಡುತ್ತಿದ್ದಾರೆ. ಉಳಿದಂತೆ ಶೇ. 92ರಷ್ಟು ಮಕ್ಕಳು ವಾಟ್ಸ್‌ಆ್ಯಪ್‌, ಶೇ.73ರಷ್ಟು ಮಕ್ಕಳು ಸರ್ಚ್‌ ಎಂಜಿನ್‌ ಬಳಸುವುದು ತಿಳಿದುಬಂದಿದೆ. ಅದೇ ಬಹುತೇಕ ಎಲ್ಲ ವಯೋಮಾನದ ಮಕ್ಕಳು ಯೂಟ್ಯೂಬ್‌, ಇನ್ಸ್‌ಟಾಗ್ರಾಂ, ಟ್ವಿಟ್ಟರ್‌, ಟೆಲಿಗ್ರಾಂ, ಇ-ಮೇಲ್‌, ವೆಬ್‌ ಸ್ಕ್ರೀನಿಂಗ್, ಸರ್ಚ್‌ ಎಂಜಿನ್‌ಗಾಗಿ ಮೊಬೈಲ್‌ ಬಳಸುತ್ತಿದ್ದಾರೆ. ಅದರಲ್ಲೂ 15ರಿಂದ 18 ವಯೋಮಾನದ ಶೇ. 25 ಮಕ್ಕಳು ದಿನದಲ್ಲಿ ಒಂದು ಗಂಟೆಗೂ ಹೆಚ್ಚಿನ ಸಮಯ ಮೊಬೈಲ್‌ ಬಳಸುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಕ್ಕಳಿಂದ ಅಪರಿಚಿತರೊಂದಿಗೆ ಸ್ನೇಹ:

15ರಿಂದ 18 ವರ್ಷ ವಯಸ್ಸಿನ ಮಕ್ಕಳ ಪೈಕಿ ಶೇ.16ರಷ್ಟು ಮಕ್ಕಳು ಅಪರಿಚಿತರೊಂದಿಗೆ ಸ್ನೇಹ ಬೆಳೆಸುವ ಉದ್ದೇಶದೊಂದಿಗೆ ಮೊಬೈಲ್‌ ಬಳಕೆ ಮಾಡಿದ್ದಾರೆ. ಅವರಲ್ಲಿ ಶೇ.10ರಷ್ಟು ಮಕ್ಕಳು ಆನ್‌ಲೈನ್‌ ಮೂಲಕ ಸ್ನೇಹ ಬೆಳೆಸಿದ ಅಪರಿಚಿತರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದಾರೆ. ಅದರಲ್ಲಿ ಶೇ.7ರಷ್ಟು ಮಕ್ಕಳು ಆನ್‌ಲೈನ್‌ನಲ್ಲಿ ತಮ್ಮ ವೈಯಕ್ತಿಕ ಮಾಹಿತಿ, ಶೇ.2ರಷ್ಟು ಮಕ್ಕಳು ವೈಯಕ್ತಿಕ ವೀಡಿಯೋ ಹಾಗೂ ಶೇ.8ರಷ್ಟು ಮಕ್ಕಳು ವೈಯಕ್ತಿಕ ಫೋಟೋ ಹಂಚಿಕೊಂಡಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.

ಗ್ರಾಮೀಣ ಮಕ್ಕಳಿಂದಲೇ ಹೆಚ್ಚಿನ ಬಳಕೆ

ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳಲ್ಲಿನ ಮಕ್ಕಳ ಅಧ್ಯಯನ ನಡೆಸಲಾಗಿದೆ. ಅದರಲ್ಲಿ ಶೇ.97ರಷ್ಟು ಗ್ರಾಮೀಣ ಭಾಗದ ಮಕ್ಕಳು ಮೊಬೈಲ್‌, ಲ್ಯಾಪ್‌ಟಾಪ್‌ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಅದೇ ನಗರ ಪ್ರದೇಶದ ಶೇ. 93ರಷ್ಟು ಮಕ್ಕಳು ಮಾತ್ರ ಮೊಬೈಲ್‌, ಲ್ಯಾಪ್‌ಟಾಪ್‌ ಬಳಸುತ್ತಿದ್ದಾರೆ. ಒಟ್ಟಾರೆ ಮಕ್ಕಳ ಪೈಕಿ 8ರಿಂದ 11 ವರ್ಷ ವಯಸ್ಸಿನವರಲ್ಲಿ ಶೇ. 96, 15ರಿಂದ 18 ವರ್ಷ ವಯಸ್ಸಿನ ಮಕ್ಕಳಲ್ಲಿ ಶೇ.71 ಮಕ್ಕಳು ಮೊಬೈಲ್‌, ಲ್ಯಾಪ್‌ಟಾಪ್‌ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ.

ಅಧಿವೇಶನದಲ್ಲಿ ಚರ್ಚೆಗೆ ಅವಕಾಶ: ಹೊರಟ್ಟಿ

ಆನ್‌ಲೈನ್‌ ಮತ್ತು ಮೊಬೈಲ್‌ ಬಳಕೆಯಿಂದ ಮಕ್ಕಳ ಮೇಲಾಗುತ್ತಿರುವ ಪರಿಣಾಮಗಳ ಕುರಿತು ಗಂಭೀರ ಚರ್ಚೆಗಳು ನಡೆಯಬೇಕಿದೆ. ಅದಕ್ಕಾಗಿ ಮುಂದಿನ ಅಧಿವೇಶನದಲ್ಲಿ ವಿಧಾನಪರಿಷತ್‌ನಲ್ಲಿ ಈ ವಿಚಾರದ ಬಗ್ಗೆ ಚರ್ಚೆಗೆ ಅವಕಾಶ ನೀಡುತ್ತೇನೆ. ಅಲ್ಲಿ ಚರ್ಚೆ ನಡೆಸಿ, ಆನ್‌ಲೈನ್‌ ಮತ್ತು ಮೊಬೈಲ್‌ ಬಳಕೆಯಿಂದ ಮಕ್ಕಳ ಮೇಲಾಗುತ್ತಿರುವ ದುಷ್ಪರಿಣಾಮ ತಡೆಗೆ ಸೂಕ್ತ ನಿಯಮ ರೂಪಿಸಲು ನಿರ್ಣಯಿಸಲಾಗುವುದು.

-ಬಸವರಾಜ ಹೊರಟ್ಟಿ, ವಿಧಾನಪರಿಷತ್‌ ಸಭಾಪತಿ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ