ಕಮಲ್‌ ಇನ್ನೂ ಕನ್ನಡಿಗರ ಕ್ಷಮೆ ಕೇಳಿಲ್ವೆ? : ಹೈಕೋರ್ಟ್‌ ಕಿಡಿ

Published : Jun 14, 2025, 05:21 AM IST
kamal hassan, vikram, indian2

ಸಾರಾಂಶ

ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂಬ ನಟ ಕಮಲ್‌ ಹಾಸನ್‌ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಅವರ ನಟನೆಯ ‘ಥಗ್‌ ಲೈಫ್‌’ ಚಿತ್ರ ಬಿಡುಗಡೆಗೆ ಪೊಲೀಸ್‌ ರಕ್ಷಣೆ ಕೋರಿ ರಾಜ್‌ಕಮಲ್‌ ಫಿಲ್ಮ್ಸ್‌ಇಂಟರ್‌ನ್ಯಾಷನಲ್‌ ಸಂಸ್ಥೆ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಜೂ.20ಕ್ಕೆ ಮುಂದೂಡಿರುವ ಹೈಕೋರ್ಟ್‌

ಬೆಂಗಳೂರು : ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂಬ ನಟ ಕಮಲ್‌ ಹಾಸನ್‌ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಅವರ ನಟನೆಯ ‘ಥಗ್‌ ಲೈಫ್‌’ ಚಿತ್ರ ಬಿಡುಗಡೆಗೆ ಪೊಲೀಸ್‌ ರಕ್ಷಣೆ ಕೋರಿ ರಾಜ್‌ಕಮಲ್‌ ಫಿಲ್ಮ್ಸ್‌ಇಂಟರ್‌ನ್ಯಾಷನಲ್‌ ಸಂಸ್ಥೆ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಜೂ.20ಕ್ಕೆ ಮುಂದೂಡಿರುವ ಹೈಕೋರ್ಟ್‌, ‘ಹೇಳಿಕೆ ಕುರಿತು ಕಮಲ್‌ ಇನ್ನೂ ಕ್ಷಮೆ ಕೇಳಿಲ್ಲವೇ’ ಎಂದು ಪ್ರಶ್ನಿಸಿದೆ. ಜತೆಗೆ, ವಿವೇಚನೆಯು ಶೌರ್ಯದ ಅತ್ಯುತ್ತಮ ಭಾಗ ಎಂಬುದನ್ನು ಮತ್ತೊಮ್ಮೆ ನೆನಪಿಸಲಾಗುತ್ತಿದೆ ಎಂದು ನುಡಿದಿದೆ.

ಈ ಕುರಿತು ರಾಜ್‌ ಕುಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ನಾರಾಯಣ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಇದೇ ವೇಳೆ ಕನ್ನಡ ಭಾಷೆಯ ಇತಿಹಾಸ, ಸಂಸ್ಕೃತಿ ಪರಂಪರೆ ತಿಳಿಸುವ ಉದ್ದೇಶದಿಂದ ಅರ್ಜಿಯಲ್ಲಿ ಪ್ರತಿವಾದಿ ಮಾಡಲು ಅನುಮತಿ ನೀಡುವಂತೆ ಕೋರಿ ಕನ್ನಡ ಸಾಹಿತ್ಯ ಪರಿಷತ್‌ ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಲ್ಲಿಸಲು ಅರ್ಜಿದಾರರಿಗೆ ಕಾಲಾವಕಾಶ ನೀಡಿ ವಿಚಾರಣೆಯನ್ನು ಜೂ.20ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ವಿಚಾರಣೆ ವೇಳೆ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮಹೇಶ್‌ ಜೋಶಿ ಪರ ಹಿರಿಯ ವಕೀಲ ಎಸ್‌.ಬಸವರಾಜ್‌ ಹಾಜರಾಗಿ, ಕಾನೂನು ದುರ್ಬಳಕೆ ಮಾಡಿಕೊಂಡ ನಂತರ ಅರ್ಜಿದಾರರು ನ್ಯಾಯಾಲಯದ ಮುಂದೆ ಬಂದಿದ್ದಾರೆ. ಅರ್ಜಿದಾರರ ಈ ನಡೆ ‘ಮನೆಗೆ ಬೆಂಕಿ ಹಾಕಿ, ಅದನ್ನು ನಂದಿಸಲು ಸಹಾಯ ಮಾಡಿ’ ಎಂದು ಕೇಳುವ ರೀತಿಯಲ್ಲಿದೆ. ‘ಮನೆಯೊಳಗಣ ಕಿಚ್ಚು ಮನೆಯ ಸುಡದಲ್ಲದೆ, ನೆರೆ ಮನೆಯ ಸುಡದು ಕೂಡಲಸಂಗಮದೇವ... ಎಂದು ಬಸವಣ್ಣನವರು ಹೇಳಿದ್ದಾರೆ. ಕಮಲ್‌ ತಮ್ಮ ನಡತೆ ಮೂಲಕ ಮನೆಗೆ ಬೆಂಕಿ ಹಚ್ಚಿಕೊಂಡಿದ್ದಾರೆ ಎಂದರು.

ಪ್ರತಿಯೊಬ್ಬರು ಇನ್ನೊಂದು ಭಾಷೆ, ಸಂಸ್ಕೃತಿ, ಪರಂಪರೆ, ಇತಿಹಾಸವನ್ನು ಗೌರವಿಸಬೇಕು ಎಂದು ಸಂವಿಧಾನ ಹೇಳುತ್ತದೆ. ಇದರಿಂದ ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡಲು ಸಾಧ್ಯ. ತಮಿಳಿನಿಂದ ಕನ್ನಡ ಹುಟ್ಟಿದೆ ಎನ್ನುವ ಮೂಲಕ ಕಮಲ್‌ ಹಾಸನ್‌ ನೀಡಿರುವುದು ಮೂರ್ಖ ಹೇಳಿಕೆ ಎನ್ನುವುದನ್ನು ಸಾಬೀತುಪಡಿಸುತ್ತೇನೆ ಎಂದರು.

ಅದಕ್ಕೆ ಆಕ್ಷೇಪಿಸಿದ ನ್ಯಾಯಪೀಠ, ನ್ಯಾಯಾಲಯದಲ್ಲಿ ಯಾರನ್ನೂ ಮೂರ್ಖ ಎಂದು ಕರೆಯುವುದು ಸರಿಯಲ್ಲ. ತಮ್ಮ ಹೇಳಿಕೆಗೆ ಕಮಲ್‌ ವಿವರಣೆ ನೀಡಿದ್ದಾರೆ ಎಂದು ಮೌಖಿಕವಾಗಿ ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ಬಸವರಾಜ್‌, ಕನ್ನಡದಲ್ಲಿ ಹಲೋ ಮಗನೇ... ಎನ್ನುವುದು ತಪ್ಪು. ಇದನ್ನೇ ಕಮಲ್‌ ಹಾಸನ್‌ ಹೇಳಿದ್ದಾರೆ. ಪ್ರೀತಿಯಿಂದ ಯಾರು ಇನ್ನೊಬ್ಬರನ್ನು ಮಗನೇ ಎಂದು ಕರೆಯುವುದಿಲ್ಲ. ಮೂರ್ಖ ಎಂಬ ಹೇಳಿಕೆಯನ್ನು ಪ್ರತಿಕ್ರಿಯೆಗಾಗಿ ಹೇಳಿದ್ದೇನೆಯೇ; ವಿನಾ ಹಿರಿಯ ಕಲಾವಿದ ಕಮಲ್‌ ಹಾಸನ್‌ ಬಗ್ಗೆ ದುರುದ್ದೇಶದಿಂದ ಅಲ್ಲ. ಕಮಲ್‌ ಹಾಸನ್‌ ತಾನು ಭಾಷಾ ಅಥವಾ ಇತಿಹಾಸಕಾರನಲ್ಲ ಎಂದಿದ್ದಾರೆ. ಆದರೆ, ವಿದ್ಯಾವಂತನಾದ ವ್ಯಕ್ತಿ ಮತ್ತೊಂದು ಭಾಷೆಯ ಕುರಿತು ಈ ರೀತಿಯ ಹೇಳಿಕೆ ನೀಡುವುದಿಲ್ಲ ಎಂದು ಕುಟುಕಿದರು.

ಮಹಾಭಾರತದಲ್ಲಿ ಕರ್ನಾಟಕ ಎಂಬ ಶಬ್ದವಿದೆ. ಕ್ರಿ.ಶ 1ನೇ ಶತಮಾನದ ಮಾರ್ಕಂಡೇಯ ಪುರಾಣದಲ್ಲಿ ಕರ್ನಾಟಕ ಎಂದಿದೆ. ಸೋಮದೇವನ ‘ಕಥಾಸರಿತ್ಸಾಗರ’ ಮತ್ತು ವರಹಾಮಿರನ ‘ಬೃಹತ್‌ ಸಂಹಿತೆ’ಯಲ್ಲಿ ಕರ್ನಾಟಕ ಎಂದಿದೆ. ಶೂದ್ರಕನ ‘ಮೃಚ್ಛಕಟಿಕ’ ನಾಟಕದಲ್ಲಿ ಒಂದು ಪಾತ್ರವಾದ ಚಂದಕನ ಕರ್ನಾಟಕ ಎಂದು ಹೇಳುತ್ತಾನೆ. ಗಂಗ ವಿಕ್ರಮನ ಎಡಕೂರು ಶಾಸನದಲ್ಲಿ ಅಸಮಸೀಮ ಕರ್ನಾಟಕ ಎಂದಿದೆ. ಸಂಸ್ಕೃತದಲ್ಲಿ ಕರ್ನಾಟ, ಕರ್ನಾಟಕ ಎಂಬ ಎರಡು ರೂಪಗಳಿವೆ. ಸ್ಕಂದ ಪುರಾಣದ ಕರ್ನಾಟಕ ರಾಕ್ಷಸರಿಂದ ಈ ಹೆಸರು ಬಂದಿದೆ ಎನ್ನಲಾಗಿದೆ. ಪಾಕೃತದಲ್ಲಿ ಕರ್ನಾಟಕ, ಕನ್ನಾಡ ಎಂಬ ರೂಪ ಬಳಕೆಯಾಗಿದೆ. ಇದೆಲ್ಲವನ್ನೂ ಕಮಲ್‌ ಹಾಸನ್‌ ಅವರಿಗೆ ತಿಳಿಸಿ ಹೇಳುವ ಮೂಲಕ, ಮುಂದಿನ ವಿಚಾರಣೆ ವೇಳೆಗೆ ಮತ್ತಷ್ಟು ವಿವೇಕದಿಂದ ವಿಚಾರಣೆಗೆ ಹಾಜರಾಗಲಿ ಎಂದು ಹೇಳಿದ್ದೇನೆ ಎಂದು ಬಲವಾಗಿ ಸಮರ್ಥಿಸಿಕೊಂಡರು.

ಬಸವರಾಜು ಅವರು ಬಳಸಿದ ಮೂರ್ಖ ಹೇಳಿಕೆಗೆ ರಾಜ್‌ ಕಮಲ್ ಫಿಲ್ಮ್ಸ್‌ ಪರ ವಕೀಲ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಕನ್ನಡ ಸಾಹಿತ್ಯ ಪರಿಷತ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲಾಗುವುದು. ಮುಂದಿನ ವಿಚಾರಣೆವರೆಗೆ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಮಾಡುವುದಿಲ್ಲ ಎಂಬ ಹಿಂದಿನ ಹೇಳಿಕೆಯನ್ನು ಮತ್ತೊಮ್ಮೆ ಸ್ಪಷ್ಟಪಡಿಸುವುದಾಗಿ ತಿಳಿಸಿದರು.

ಆಗ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಕಮಲ್‌ ಹಾಸನ್‌ ಇನ್ನೂ ಕ್ಷಮೆ ಕೇಳಿಲ್ಲವೇ? ಎಂದು ಪ್ರಶ್ನಿಸುವ ಜೊತೆಗೆ ವಿವೇಚನೆಯು ಶೌರ್ಯದ ಅತ್ಯುತ್ತಮ ಭಾಗ ಎಂಬುದನ್ನು ಮತ್ತೊಮ್ಮೆ ನೆನಪಿಸಲು ಬಯಸುತ್ತೇನೆ ಎಂದು ಸಲಹೆ ನೀಡಿದರು.

ರಾಜ್‌ ಕಮಲ್‌ ಫಿಲ್ಮ್ಸ್‌ ಪರ ವಕೀಲರು, ನ್ಯಾಯಾಲಯದ ಈ ಸಲಹೆಯನ್ನು ಕಮಲ್‌ ಹಾಸನ್‌ಗೆ ಮತ್ತೊಮ್ಮೆ ತಿಳಿಸುವುದಾಗಿ ಹೇಳಿದರು.

ಕಮಲ್‌ ಥಗ್‌ಲೈಫ್‌ ವಿವಾದ: ರಾಜ್ಯಕ್ಕೆ ಸುಪ್ರೀಂ ನೋಟಿಸ್‌

ನವದೆಹಲಿ: ನಟ ಕಮಲ್‌ ಹಾಸನ್‌ ಅವರ ‘ಥಗ್‌ ಲೈಫ್‌’ ಸಿನಿಮಾ ಬಿಡುಗಡೆಗಾಗಿ ಚಿತ್ರಮಂದಿರಗಳಿಗೆ ರಕ್ಷಣೆ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ಕುರಿತಂತೆ ಸುಪ್ರೀಂಕೋರ್ಟ್‌ ಶುಕ್ರವಾರ ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ ಹಾಗೂ ಅಭಿಪ್ರಾಯ ಕೇಳಿದೆ. ವಿಚಾರಣೆಯನ್ನು ಮುಂದಿನ ಗುರುವಾರಕ್ಕೆ ಮುಂದೂಡಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಗುಣಮಟ್ಟದ ಹಿಪ್ಪುನೇರಳೆ ಬೆಳೆದು ಲಾಭ ಗಳಿಸಿ
ರಾಮಗೊಂಡನಹಳ್ಳಿ ಕ್ರಿಕೆಟ್ ತಂಡಕ್ಕೆ ಪ್ರಥಮ ಬಹುಮಾನ