;Resize=(412,232))
ಬೆಂಗಳೂರು : ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಿಗೆ ರಸ್ತೆ ಮತ್ತು ಮೂಲಸೌಕರ್ಯ ಕಲ್ಪಿಸಲು ಹೆಚ್ಚು ಹಣ, ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಸೇರಿಸಲು ಕ್ರಮ, ಪೌರಕಾರ್ಮಿಕರು ಹಾಗೂ ಅವರ ಮಕ್ಕಳಿಗೆ ವಿವಿಧ ಉಪಯುಕ್ತ ಕಾರ್ಯಕ್ರಮ, ಎರಡು ಹೆರಿಗೆ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವುದು ಸೇರಿ ಹಲವು ಅಂಶಗಳನ್ನು ಒಳಗೊಂಡ 4,344 ಕೋಟಿ ರು. ಮೊತ್ತದ 2026ನೇ ಸಾಲಿನ ಬಜೆಟ್‌ನ್ನು ಆಯುಕ್ತ ಪಿ. ಸುನೀಲ್‌ಕುಮಾರ್ ಶನಿವಾರ ಮಂಡಿಸಿದರು.
ಯಲಹಂಕದ ಅಂಬೇಡ್ಕರ್ ಭವನದಲ್ಲಿ ಮಂಡಿಸಲಾದ ಬಜೆಟ್‌ನಲ್ಲಿ 4,344 ಕೋಟಿ ರು. ಆದಾಯ ಹಾಗೂ 4,341.20 ಕೋಟಿ ರು. ವೆಚ್ಚದೊಂದಿಗೆ 2.80 ಕೋಟಿ ರು. ಉಳಿತಾಯದ ಬಜೆಟ್ ಮಂಡಿಸಲಾಗಿದೆ. ರಸ್ತೆ ಮತ್ತು ಅಭಿವೃದ್ಧಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಬಜೆಟ್ ಗಾತ್ರದ ಅರ್ಧಕ್ಕಿಂತ ಹೆಚ್ಚು ಮೊತ್ತ 2,681 ಕೋಟಿ ರು. ಮೀಸಲಿಡಲಾಗಿದೆ. ಸಮಾಜ ಕಲ್ಯಾಣ ಯೋಜನೆಗಳಿಗೂ ಸಾಕಷ್ಟು ಅನುದಾನವನ್ನು ಮೀಸಲಿಡಲಾಗಿದೆ.
ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಸೇರಿಸುವ ಮೂಲಕ ಆದಾಯ ಹೆಚ್ಚಿಸುವ ಗುರಿ ಹೊಂದಲಾಗಿದೆ. ಆಸ್ತಿ ತೆರಿಗೆ ರೂಪದಲ್ಲಿ 826.25 ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ. ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಪ್ರಕ್ರಿಯೆಯಿಂದ 563 ಕೋಟಿ ರು. ಸಂಗ್ರಹ ನಿರೀಕ್ಷೆ ಹೊಂದಲಾಗಿದೆ. ಜಾಹೀರಾತುಗಳ ಮೂಲಕ 108 ಕೋಟಿ ರು. ಆದಾಯ, ನೂತನ ಖಾತಾ ದಾಖಲಾತಿ ಪ್ರಕ್ರಿಯೆದಿಂದ 18 ಕೋಟಿ ರು. ಸಂಗ್ರಹಿಸುವ ಅಂದಾಜು ಮಾಡಲಾಗಿದೆ.
ಆಸ್ತಿ ತೆರಿಗೆಯ ಮೂಲಕ 826.25 ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ. ಹಾಲಿ ಚಾಲ್ತಿಯಲ್ಲಿರುವ ಮ್ಯೂಟೇಷನ್ ಅರ್ಜಿಗಳಲ್ಲಿ ಶೇ. 2 ರಷ್ಟು ಸ್ಟ್ಯಾಂಪ್ ಡ್ಯೂಟಿಯಿಂದ 40 ಕೋಟಿ ರು. ನಿರೀಕ್ಷಿಸಲಾಗಿದೆ. ಪಿಎಸ್‌ಯು ಹಾಗೂ ಏಕ ನಿವೇಶನ ಅಡಿಯಲ್ಲಿ ಅಭಿವೃದ್ಧಿ ಶುಲ್ಕಗಳಿಂದ ಒಟ್ಟು 97.15 ಕೋಟಿ ರು. ನಿರೀಕ್ಷಿಸಲಾಗಿದೆ. ಆಸ್ತಿ ತೆರಿಗೆ ಪರಿಷ್ಕರಣೆಯಿಂದ 30.87 ಕೋಟಿ ರು. ನಿರೀಕ್ಷಿಸಲಾಗಿದೆ. ಎ ಖಾತಾ ಆಸ್ತಿಗಳನ್ನಾಗಿ ಪರಿವರ್ತಿಸುವುದರಿಂದ ಪ್ರಸಕ್ತ ಸಾಲಿನಲ್ಲಿ 680 ಕೋಟಿ ರು. ಆದಾಯವನ್ನು ನಿರೀಕ್ಷಿಸಲಾಗಿದೆ.
15ನೇ ಹಣಕಾಸು ಆಯೋಗದಿಂದ 25 ಕೋಟಿ ರು. ಅನುದಾನ, 16ನೇ ಹಣಕಾಸು ಆಯೋಗದಿಂದ 128.29 ಕೋಟಿ ರು. ಮತ್ತು ವಿಶೇಷ ಮೂಲ ಸೌಕರ್ಯ ಅನುದಾನವಾಗಿ 429.27 ಕೋಟಿ ರು. ನಿರೀಕ್ಷಿಸಲಾಗಿದೆ.
ಫುಟ್‌ಪಾತ್, ರಸ್ತೆಗಳು, ಪಾರ್ಕ್ ಹೊಸ ಲುಕ್
- 197.90 ಕಿ.ಮೀ ವಾರ್ಡ್ ರಸ್ತೆ ಮತ್ತು 187.03 ಕಿ.ಮೀ ಮುಖ್ಯ ರಸ್ತೆಗಳ ಅಭಿವೃದ್ಧಿ ಗುರಿ
- ರಸ್ತೆ, ಪಾದಚಾರಿ ಮಾರ್ಗ ನಿರ್ಮಾಣ, ನಿರ್ವಹಣೆ ಮತ್ತಿತರ ಉದ್ದೇಶಗಳಿಗೆ ಪ್ರತಿ ವಾರ್ಡ್‌ಗೆ 2.25 ಕೋಟಿ ಅನುದಾನ.
- 18 ಕೋಟಿ ಅನುದಾನದಲ್ಲಿ 1,000 ಕಿ.ಮೀ ಉದ್ದದ ಪಾದಚಾರಿ ಮಾರ್ಗ ಪುನರ್ ನಿರ್ಮಾಣ
- ಪಾದಚಾರಿಗಳ ಸುರಕ್ಷತೆಗಾಗಿ ಜಂಕ್ಷನ್ ಅಭಿವೃದ್ಧಿ ಮತ್ತು ಸ್ಕೈವಾಕ್ ನಿರ್ಮಾಣಕ್ಕೆ 50 ಕೋಟಿ ರು.
- ವಿಶ್ವಬ್ಯಾಂಕ್, ಎನ್.ಡಿ.ಎಂ.ಎಫ್ ನೆರವಿನೊಂದಿಗೆ 532.52 ಕೋಟಿ ವೆಚ್ಚದಲ್ಲಿ 53.42 ಕಿ.ಮೀ ಉದ್ದದ ರಾಜಕಾಲುವೆ ತಡೆಗೋಡೆ ನಿರ್ಮಾಣ.
- ಬೀದಿ ದೀಪಗಳ ದುರಸ್ತಿ ಮತ್ತು ಉದ್ಯಾನವನ, ಆಟದ ಮೈದಾನಗಳ ವಿದ್ಯುತ್ ಕಾಮಗಾರಿಗಾಗಿ 9.40 ಕೋಟಿ ರು.
- ಪಾಲಿಕೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿಗೆ 120 ಕೋಟಿ ರು.
ಜಾಹೀರಾತು ಲೈಸೆನ್ಸ್ ಕಡ್ಡಾಯ
- ಬಹಿರಂಗ ಹರಾಜಿನಲ್ಲಿ ಭಾಗವಹಿಸುವ ಜಾಹೀರಾತುದಾರಿಗೆ ಜಾಹೀರಾತು ಪರವಾನಗಿ ಕಡ್ಡಾಯ.
- ಜಾಹೀರಾತು ಪರವಾನಗಿ ಮೊತ್ತ ಸುಮಾರು ₹1.25 ಕೋಟಿಗಳ ಪರವಾನಿಗೆ ಶುಲ್ಕ ಸಂಗ್ರಹ ನಿರೀಕ್ಷೆ.
ಆನ್‌ಲೈನ್‌ನಲ್ಲಿ ಎನ್‌ಒಸಿ
- ಕಟ್ಟಡ ನಕ್ಷೆ ಮಂಜೂರಾತಿ, ಪ್ರೀಮಿಯಂ ಎಫ್.ಎ.ಆರ್, ಇತರ ಮೂಲಗಳಿಂದ 817.37 ಕೋಟಿ ಆದಾಯ ನಿರೀಕ್ಷೆ.
- ಖಾಲಿ ನಿವೇಶನಗಳಿಗೆ ಸಿಂಗಲ್ ಪ್ಲಾಟ್ ಅರ್ಜಿಗಳ ಮೂಲಕ 100 ಕೋಟಿ ರು.
- ಜಿಬಿಎ ಮಹಾಯೋಜನೆ 5 ಕೋಟಿ ರು.
- ವಿವಿಧ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರಗಳ ಪ್ರಕ್ರಿಯೆಯನ್ನು ಆನ್‌ಲೈನ್ ತಂತ್ರಾಂಶದೊಂದಿಗೆ ಸಮನ್ವಯ.
ಎಲ್ಲ ದಾಖಲೆ ಡಿಜಿಟಲೀಕರಣ
- ಉತ್ತರ ನಗರ ಪಾಲಿಕೆಯ ಕೇಂದ್ರ ಕಚೇರಿ ಕಟ್ಟಡ ನಿರ್ಮಾಣಕ್ಕೆ 40 ಕೋಟಿ ರು.
- ಯಲಹಂಕದ ಮಿನಿ ವಿಧಾನಸೌಧದ 4ನೇ ಮಹಡಿಯಲ್ಲಿ ಉತ್ತರ ಪಾಲಿಕೆ ಕಚೇರಿ ಸಂಕೀರ್ಣ ನಿರ್ಮಿಸಲು 10 ಕೋಟಿ.
- ಪಾಲಿಕೆಯ ಎಲ್ಲ ಕಡತಗಳು ಮತ್ತು ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು 6 ಕೋಟಿ.
- ಪೌರ ಕಾರ್ಮಿಕರ ವೇತನಕ್ಕೆ 150 ಕೋಟಿ.
ಮಹಿಳೆಯರಿಗೆ ಎಲೆಕ್ಟ್ರಿಕ್ ಸ್ಕೂಟರ್- ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ 8.94 ಕೋಟಿ, ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲು 7.60 ಕೋಟಿ ರು. ಹಂಚಿಕೆ
- ಸಾರಥಿ ಯೋಜನೆಯಡಿ ಆಟೋ/ಕಾರು ಖರೀದಿಗೆ 4.08 ಕೋಟಿ ರು. ಸಹಾಯಧನ
- ಉದ್ಯೋಗಸ್ಥ ಮಹಿಳೆಯರು ಮತ್ತು ಪೌರಕಾರ್ಮಿಕರಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ನೀಡಲು 1 ಕೋಟಿ ರು.
- ಪೌರಕಾರ್ಮಿಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ಲ್ಯಾಪ್‌ಟಾಪ್, ಹೆಣ್ಣು ಮಕ್ಕಳ ಮದುವೆಗೆ 2 ಲಕ್ಷ ರು. ಸಹಾಯಧನ ನೀಡಲು 10 ಕೋಟಿ ರು.
- ಪೌರಕಾರ್ಮಿಕರ ಮಕ್ಕಳಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನೂ ನೀಡಲಾಗುತ್ತದೆ.
- ಪತ್ರಕರ್ತರ ವೈದ್ಯಕೀಯ ವಿಮೆ ಮತ್ತು ಪರಿಹಾರಕ್ಕಾಗಿ 72 ಲಕ್ಷ ರು.
- ಕ್ರೀಡಾಪಟುಗಳ ಪ್ರೋತ್ಸಾಹಕ್ಕೆ 1 ಕೋಟಿ ರು.
ಗಿಡ ನೆಡಲು 4 ಕೋಟಿ
- ಹಸಿರೇ ಉಸಿರು ಘೋಷವಾಕ್ಯದಡಿ ಮರಗಳ ನಿರ್ವಹಣೆ, ವನ್ಯಜೀವಿ ಸಂರಕ್ಷಣೆ ಮತ್ತು ಅರಣ್ಯ ಚಟುವಟಿಕೆಗಾಗಿ 10.51 ಕೋಟಿ
- ಮರಗಳ ನಿರ್ವಹಣೆ ಮತ್ತು ಅಪಾಯಕಾರಿ ಮರಗಳ ತೆರವಿಗಾಗಿ 5 ಕೋಟಿ ರು. ಅನುದಾನ.
- ಜಾಗತಿಕ ತಾಪಮಾನ ತಗ್ಗಿಸಲು ಗಿಡ ನೆಟ್ಟು ಪೋಷಿಸುವ ಕಾರ್ಯಕ್ಕೆ 4.16 ಕೋಟಿ ರು.
ಆಸ್ಪತ್ರೆಗಳಿಗೆ ಟ್ರೀಟ್‌ಮೆಂಟ್
- ಸಂಜಯ್ ನಗರ, ಮಲ್ಲಸಂದ್ರದಲ್ಲಿ ಡಯಾಲಿಸಿಸ್ ಸೇವೆ ಆರಂಭ.
- ಡಿ.ಜೆ ಹಳ್ಳಿ ಮತ್ತು ಮುನಿರೆಡ್ಡಿಪಾಳ್ಯ ಹೆರಿಗೆ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲು 35 ಕೋಟಿ ರು.
- ಎಂ.ಆರ್. ಪಾಳ್ಯ ಮತ್ತು ಡಿ.ಜೆ ಹಳ್ಳಿ ಹೆರಿಗೆ ಆಸ್ಪತ್ರೆಗಳನ್ನು 30 ಹಾಸಿಗೆ ಸಾಮರ್ಥ್ಯವುಳ್ಳ ಸಿಎಚ್‌ಸಿಯಾಗಿ ಪರಿವರ್ತನೆ
- ಆಧುನಿಕ ಕಸಾಯಿಖಾನೆ ಸ್ಥಾಪನೆಗೆ 14 ಕೋಟಿ ರು.
- 65,000 ನಾಯಿಗಳಿಗೆ ರೇಬೀಸ್ ಇಂಜೆಕ್ಷನ್‌ಗೆ 5 ಕೋಟಿ ರು.
ವೆಚ್ಚದ ವಿವರ
ಕ್ರ.ಸಂ ವಿವರಗಳು ಕೋಟಿ ರು.ಗಳಲ್ಲಿ ಶೇಕಡ (%)
1 ಸಿಬ್ಬಂದಿ ವೆಚ್ಚಗಳು 476.98 10.98
2 ಆಡಳಿತಾತ್ಮಕ ವೆಚ್ಚಗಳು 110.69 2.55
3 ಘನತ್ಯಾಜ್ಯ ನಿರ್ವಹಣೆ ವೆಚ್ಚಗಳು 301.28 6.94
4 ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚ 312.11 7.195
ಬೆಂಗಳೂರು : ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು, ಸಾರ್ವಜನಿಕ ಕಾಮಗಾರಿಗಳಿಗೆ ಗರಿಷ್ಠ ಶೇ.60ರಷ್ಟು ಹಣ ಮೀಸಲು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕಸ ಬಳಿಯುವ ಯಂತ್ರ ಖರೀದಿಸಲು 25 ಕೋಟಿ ರು. ಮೀಸಲು. ಎಸ್‌ಸಿ ಮತ್ತು ಎಸ್‌ಟಿ, ಹಿಂದುಳಿದ ವರ್ಗ ಮತ್ತು ವಿಶೇಷ ಚೇತನರ ಕಲ್ಯಾಣಕ್ಕೆ 334.99 ಕೋಟಿ ರು., 100 ಕಾಡುಗಳ ಸ್ಥಾಪನೆ ಯೋಜನೆ, 49 ಕೆರೆಗಳ ಅಭಿವೃದ್ಧಿಗಾಗಿ 13.75 ಕೋಟಿ ರು. ಅನುದಾನ ಮುಂತಾದ ಜನಪರ ಅಂಶಗಳನ್ನು ಒಳಗೊಂಡ ಪಶ್ಚಿಮ ನಗರ ಪಾಲಿಕೆಯ 2026-27ನೇ ಸಾಲಿನ 4,732.73 ಕೋಟಿ ರು. ಗಾತ್ರದ ಬಜೆಟ್ ಮಂಡಿಸಿದೆ. ಇದು ಐದು ಪಾಲಿಕೆಗಳ ಪೈಕಿ ಅತಿ ದೊಡ್ಡ ಬಜೆಟ್ ಆಗಿದೆ.
ರಸ್ತೆಗಳ ವಿಸ್ತರಣೆ ಮತ್ತು ಅಭಿವೃದ್ಧಿ, ಡಿಜಿಟಲ್ ಆಡಳಿತ, ಘನತ್ಯಾಜ್ಯ ನಿರ್ವಹಣೆ, ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು ಉದ್ದೇಶಿಸಲಾಗಿದೆ. ಆದಾಯ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದ್ದು ವಿವಿಧ ಮೂಲಗಳಿಂದ 4,727.81 ಕೋಟಿ ರು. ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಇದರಲ್ಲಿ ಶೇ.30ರಷ್ಟು ಹಣವನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಅನುದಾನದಿಂದ ಭರಿಸಿಕೊಳ್ಳುವ ಗುರಿ ಹೊಂದಲಾಗಿದೆ. ತೆರಿಗೆಯೇತರ ಮೂಲಗಳಿಂದ ಶೇ.28ರಷ್ಟು ಆದಾಯ, ಆಸ್ತಿ ತೆರಿಗೆ, ಕರಗಳ ಮೂಲಕ ಶೇ.23ರಷ್ಟು ಆದಾಯ ಹಾಗೂ ಶೇ.20ರಷ್ಟು ಆದಾಯವನ್ನು ಒಂದು ಸಲ ಸಂಗ್ರಹಿಸುವ ಅಸಾಧಾರಣ ಆದಾಯದ ಮೂಲಗಳಿಂದ ಸಂಗ್ರಹಿಸುವ ಗುರಿ ಹೊಂದಲಾಗಿದೆ.
ಶನಿವಾರ ಮಲ್ಲೇಶ್ವರದ ಜಲಮಂಡಳಿಯ ಸುವರ್ಣ ಭವನದಲ್ಲಿ ಪಾಲಿಕೆ ಆಯುಕ್ತ ಡಾ. ರಾಜೇಂದ್ರ ಕೆ.ವಿ ಬಜೆಟ್ ಮಂಡಿಸಿದರು. ಈ ವೇಳೆ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಕಂದಾಯ ವಿಭಾಗದಿಂದ ಈ ವರ್ಷ ಒಟ್ಟು 1,964.60 ಕೋಟಿ ರು.ಆದಾಯ ಕ್ರೋಢೀಕರಣದ ಗುರಿ ಹೊಂದಲಾಗಿದೆ. ಆಸ್ತಿ ತೆರಿಗೆ ರೂಪದಲ್ಲಿ 872 ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ. ಇದಕ್ಕಾಗಿ ತೆರಿಗೆ ಜಾಲದಿಂದ ಹೊರಗಿರುವ ಆಸ್ತಿಗಳನ್ನು ಪತ್ತೆ ಹಚ್ಚಿ ತೆರಿಗೆ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ.
ಪಾಲಿಕೆಯ ಆದಾಯಕ್ಕೆ ದೊಡ್ಡ ಬಲ ನೀಡಲಿರುವ ಬಿ ಖಾತಾದಿಂದ ಎ ಖಾತಾಗೆ ಪರಿವರ್ತಿಸುವ ಅಭಿಯಾನದಿಂದ 563 ಕೋಟಿ ರು. ಆದಾಯ ಸಂಗ್ರಹ ಅಂದಾಜು ಮಾಡಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಪಾಲಿಕೆಯ ಸೇವೆಗಳನ್ನು ಸಂಪರ್ಕ ರಹಿತ ಮತ್ತು ಸುಲಭಗೊಳಿಸಲು ನೂತನ ಡಿಜಿಟಲ್ ಐಟಿ ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗುತ್ತಿದೆ. ಸಮುದಾಯ ಭವನಗಳ ಅನುಮತಿ, ಪಾಲಿಕೆ ಕಟ್ಟಡಗಳ ಬಾಡಿಗೆ, ಕ್ರೀಡಾಂಗಣಗಳ ಬುಕ್ಕಿಂಗ್ ಹಾಗೂ ಚಲನಚಿತ್ರ ಚಿತ್ರೀಕರಣದ ಸ್ಥಳಗಳ ಮಂಜೂರಾತಿ ಪ್ರಕ್ರಿಯೆಯನ್ನು ಈ ಡಿಜಿಟಲ್ ವೇದಿಕೆಯ ಮೂಲಕ ನಿರ್ವಹಿಸುವ ಮೂಲಕ ಪಾಲಿಕೆಯ ಸ್ವಂತ ಆಸ್ತಿಗಳಿಂದ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.
ನಗರ ಯೋಜನೆ ವಿಭಾಗದಿಂದ ಕಟ್ಟಡ ನಕ್ಷೆ ಮಂಜೂರಾತಿ, ಪರಿಷ್ಕೃತ ನಕ್ಷೆ ಮಂಜೂರಾತಿ ಮತ್ತಿತರ ಸೇವೆಗಳಿಂದ 254 ಕೋಟಿ ರು. ಶುಲ್ಕ ಸಂಗ್ರಹಿಸುವ ಗುರಿ ಹೊಂದಲಾಗಿದೆ.ಸರ್ಕಾರದ ಹೊಸ ಪ್ರೀಮಿಯಂ ಎಫ್‌ಎಆರ್ ನೀತಿಯಿಂದ ಅಂದಾಜು 380 ಕೋಟಿ ರು. ಆದಾಯವನ್ನು ನಿರೀಕ್ಷಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಸಿಂಗಲ್ ಪ್ಲಾಟ್ ಅಪ್ರೂವಲ್ ಗೆ ಅವಕಾಶ ಕಲ್ಪಿಸಲಾಗಿದ್ದು, ಇದರಿಂದ ಅಂದಾಜು 200 ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ.
ಯಾವ ವಲಯಕ್ಕೆ ಎಷ್ಟು ಹಣ, ಸಂಗ್ರಹ? ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆ
- ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕಸ ಯಂತ್ರ ಖರೀದಿಸಲು 25 ಕೋಟಿ ಮೀಸಲು.
- ತ್ಯಾಜ್ಯ ವಿಲೇವಾರಿ ಸುಧಾರಣೆಗೆ ಬಿಎಸ್‌ಡಬ್ಲ್ಯುಎಂಎಲ್ ಸಂಸ್ಥೆಗೆ 300 ಕೋಟಿ
- ವೈಜ್ಞಾನಿಕ ತ್ಯಾಜ್ಯ ಸಂಗ್ರಹಕ್ಕಾಗಿ 10 ಹೊಸ ಟ್ರಾನ್ಸ್‌ಫರ್ ಸ್ಟೇಷನ್ ಸ್ಥಾಪನೆ.
ಕಲ್ಯಾಣ ಯೋಜನೆಗಳು
- ಎಸ್‌ಸಿ ಮತ್ತು ಎಸ್‌ಟಿ, ಹಿಂದುಳಿದ ವರ್ಗ, ವಿಶೇಷ ಚೇತನರ ಕಲ್ಯಾಣಕ್ಕೆ 334.99 ಕೋಟಿ.
- ಪ.ಜಾತಿ, ಪ. ಪಂಗಡ, ಪೌರಕಾರ್ಮಿಕ, ಹಿಂದುಳಿದ, ಅಲ್ಪಸಂಖ್ಯಾತ ವರ್ಗ, ಅಂಗವಿಕಲರ ಪ್ರದೇಶ ಸೌಕರ್ಯಕ್ಕೆ 150.97 ಕೋಟಿ.
- ಒಂಟಿ ಮನೆ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ತಲಾ 5 ಲಕ್ಷ ರು.ನಂತೆ ಒಟ್ಟು 71.64 ಕೋಟಿ ರು. ಸಹಾಯಧನ.
- ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ, ಶುಲ್ಕ ಮರುಪಾವತಿ ಮತ್ತು ವಿದೇಶಿ ವ್ಯಾಸಂಗಕ್ಕೆ ನೆರವು ನೀಡಲು 47.17 ಕೋಟಿ.
- ಬೀದಿ ಬದಿ ವ್ಯಾಪಾರಿಗಳಿಗಾಗಿ ಇ-ವೆಂಡಿಂಗ್ ವಾಹನ ಮತ್ತು ವೆಂಡಿಂಗ್ ಜೋನ್ ಅಭಿವೃದ್ಧಿಪಡಿಸಲು 13.35 ಕೋಟಿ ರು.
ತೋಟಗಾರಿಕೆ ಮತ್ತು ಪರಿಸರ
- 496 ಉದ್ಯಾನವನಗಳ ನಿರ್ವಹಣೆಗೆ 47.45 ಕೋಟಿ ರು.
- ಮಿಯಾವಾಕಿ ಕಾಡು ಮಾದರಿಯಲ್ಲಿ ಹಸಿರೀಕರಣಕ್ಕಾಗಿ 100 ಮಿಯಾವಾಕಿ ಕಾಡುಗಳ ಸ್ಥಾಪನೆ ಯೋಜನೆ.
- 20 ಉದ್ಯಾನಗಳಲ್ಲಿ ಮಳೆನೀರು ಸಂಗ್ರಹಣಾ ಘಟಕ ಸ್ಥಾಪನೆ, ಮಳೆ ನೀರು ಕೊಯ್ಲು ಜಾರಿಗಾಗಿ 2 ಕೋಟಿ
- ನಾಯಂಡಹಳ್ಳಿ ಕೆರೆ ಸುತ್ತಮುತ್ತ ಮತ್ತು ಇತರ 5 ಸ್ಥಳಗಳಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಾಣ.
ಕೆರೆಗಳ ಸಂರಕ್ಷಣೆ
- 49 ಕೆರೆಗಳ ಅಭಿವೃದ್ಧಿಗಾಗಿ 13.75 ಕೋಟಿ ರು. ಅನುದಾನ.
- ಯಡಿಯೂರು ಮತ್ತು ಚಿಕ್ಕಲ್ಲಸಂದ್ರ ಕೆರೆಗಳ ಹೂಳೆತ್ತಲು ಮತ್ತು ಅಭಿವೃದ್ಧಿಗೆ 5 ಕೋಟಿ ರು.
ಶಿಕ್ಷಣ
- ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ.
- ಪಾಲಿಕೆಯ 5 ಶಾಲೆಗಳನ್ನು ಸ್ಮಾರ್ಟ್ ಶಾಲೆಗಳಾಗಿ ಪರಿವರ್ತನೆ.
- ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 3 ದಿನಗಳ ಶೈಕ್ಷಣಿಕ ಪ್ರವಾಸಕ್ಕೆ 2 ಕೋಟಿ ರು.
ಆರೋಗ್ಯ
- ಬ್ರ್ಯಾಂಡ್ ಬೆಂಗಳೂರು ಅಡಿಯಲ್ಲಿ 6 ಪ್ರಮುಖ ಆಸ್ಪತ್ರೆಗಳ ಉನ್ನತೀಕರಣಕ್ಕೆ 95.73 ಕೋಟಿ ರು.
- 20 ಆರೋಗ್ಯ ಕೇಂದ್ರಗಳಲ್ಲಿ ವರ್ಚುವಲ್ ಕ್ಲಿನಿಕ್ ವಿಸ್ತರಣೆಗೆ 4 ಕೋಟಿ ರು.
- ಗೋವಿಂದರಾಜನಗರ ಆಸ್ಪತ್ರೆಯಲ್ಲಿ ಜಯದೇವ ಸಂಸ್ಥೆಯ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ 10 ಕೋಟಿ ರು.
ಪಶುಪಾಲನೆ
- ಬೀದಿ ನಾಯಿಗಳ ಸಂತಾನಹರಣ ಮತ್ತು ಲಸಿಕೆ ಕಾರ್ಯಕ್ರಮಕ್ಕೆ 1.12 ಕೋಟಿ ರು.
- ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ವಾರ್ಡ್ ಪಶುಪಾಲನಾ ಮಾದರಿ ವಾರ್ಡ್ ಆಗಿ ಅಭಿವೃದ್ಧಿ.
- 500 ನಾಯಿಗಳ ಸಾಮರ್ಥ್ಯದ ಆಶ್ರಯ ತಾಣ ನಿರ್ಮಾಣಕ್ಕೆ 2 ಕೋಟಿ ರು.
ವೆಚ್ಚದ ವಿವರ
ಕ್ರ.ಸಂ ವಿವರಗಳು ಕೋಟಿ ರು.ಗಳಲ್ಲಿ ಶೇಕಡ (%)
1 ಸಾರ್ವಜನಿಕ ಅಭಿವೃದ್ಧಿ ಕಾಮಗಾರಿ 2,834.68 ಶೇ.60
2 ಕಾರ್ಯಾಚರಣೆ ,ನಿರ್ವಹಣೆ ವೆಚ್ಚಗಳು 531.26 ಶೇ.11
3 ಸಿಬ್ಬಂದಿ ವೆಚ್ಚಗಳು 488.54 ಶೇ.10
4 ಘನತ್ಯಾಜ್ಯ ನಿರ್ವಹಣೆ ವೆಚ್ಚ 322 ಶೇ.7
5 ಕಾರ್ಯಕ್ರಮಗಳ ವೆಚ್ಚ (ಆರೋಗ್ಯ, ಶಿಕ್ಷಣ,ಕಲ್ಯಾಣ) 243.49 ಶೇ.5
6 ಠೇವಣಿ, ಕರಗಳ ಮರುಪಾವತಿ 158.56 ಶೇ.4
7 ಆಡಳಿತ ವೆಚ್ಚಗಳು 154.21 ಶೇ.3
ಒಟ್ಟು ಮೊತ್ತ 4,732.73 ಶೇ.100