;Resize=(412,232))
ಬೆಂಗಳೂರು : ಒಂದೇ ಹೆಸರಿನಲ್ಲಿ ಮೂರು ರಾಜ್ಯಗಳಲ್ಲಿ ನಾಲ್ಕು ಮತದಾರರ ಗುರುತಿನ ಚೀಟಿ ಹೊಂದಿದ ಆರೋಪ ಸಂಬಂಧ ನಟ ಪ್ರಕಾಶ್ ರಾಜ್ ಅವರಿಗೆ ನಗರದ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಪ್ರಕರಣ ಸಂಬಂಧ ಪ್ರಕಾಶ್ ರಾಜ್ ವಿರುದ್ಧ ನಗರದ 48ನೇ ಎಸಿಜೆಎಂ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕಾಶ್ ರಾಜ್ ಶುಕ್ರವಾರ ನಗರದ 48ನೇ ಎಸಿಜೆಎಂ ಕೋರ್ಟ್ ಗೆ ಹಾಜರಾಗಿದ್ದರು.
ಒಬ್ಬ ವ್ಯಕ್ತಿ ಒಂದೇ ಮತದಾರರ ಗುರುತಿನ ಚೀಟಿ ಹೊಂದಲು ಅವಕಾಶವಿದೆ. ಆದರೆ, ಪ್ರಕಾಶ್ ರಾಜ್ ತಮಿಳುನಾಡಿನ ವೇಲಚರಿ ಕ್ಷೇತ್ರದಲ್ಲೇ ಎರಡು, ತೆಲಂಗಾಣದ ಸೆರಿಲಿಂಗಪಲ್ಲಿ ಕ್ಷೇತ್ರದಲ್ಲೊಂದು, ಬೆಂಗಳೂರಿನ ಶಾಂತಿನಗರ ಕ್ಷೇತ್ರದಲ್ಲೊಂದು ವೋಟರ್ ಐಡಿ ಹೊಂದಿದ್ದಾರೆ. ಶಾಂತಿನಗರ ಕ್ಷೇತ್ರದ ಮತದಾರ ಎಂದು ಚುನಾವಣಾ ಪ್ರಮಾಣ ಪತ್ರದಲ್ಲಿ ಪ್ರಕಾಶ್ ಉಲ್ಲೇಖಿಸಿದ್ದಾರೆ. ಆ ಮೂಲಕ ಜನಪ್ರತಿನಿಧಿಗಳ ಕಾಯ್ದೆ ಸೆಕ್ಷನ್ 31 ಮತ್ತು 125(ಎ) ಅನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ 2019ರ ಏ.10ರಂದು ಹಲಸೂರು ಗೇಟ್ ಪೊಲೀಸ್ ಠಾಣೆಗೆ ವಕೀಲ ಕೆ. ದಿಲೀಪ್ ಕುಮಾರ್ ದೂರು ಸಲ್ಲಿಸಿದ್ದರು.
ಪ್ರಕರಣದ ಸಂಬಂಧ ಮ್ಯಾಜಿಸ್ಟ್ರೇಟ್ ಕೋರ್ಟ್ 2 ಬಾರಿ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದ್ದರೂ ಪ್ರಕಾಶ್ ರಾಜ್ ಸ್ಪಂದಿಸಿರಲಿಲ್ಲ. ಇದರಿಂದ ಕೋರ್ಟ್ ಜೂ. 12ರಂದು ಮೂರನೇ ಬಾರಿಗೆ ಪ್ರಕಾಶ್ ರಾಜ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿತ್ತು.
ಪ್ರಕಾಶ್ ರಾಜ್ ಅವರು ವಿಚಾರಣೆಗೆ ಖುದ್ದು ಹಾಜರಾಗಿ, ಜಾಮೀನು ರಹಿತ ಬಂಧನ ವಾರೆಂಟ್ ವಾಪಸ್ ಪಡೆಯಲು ಕೋರಿ ಅರ್ಜಿ ಸಲ್ಲಿಸಿದರು.
ಈ ವೇಳೆ ಪ್ರಕಾಶ್ ರಾಜ್ ಪರ ವಕೀಲರು, ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಕಕ್ಷಿದಾರರಿಗೆ ನ್ಯಾಯಾಲಯ ಜಾರಿ ಮಾಡಿರುವ ಜಾಮೀನು ರಹಿತ ವಾರೆಂಟ್ ಆದೇಶ ತಲುಪಿಲ್ಲ. ಆದರೆ, ನ್ಯಾಯಾಲಯದ ಆದೇಶ ಕುರಿತ ಮಾಧ್ಯಮದ ವರದಿ ತಿಳಿದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ ಎಂದು ತಿಳಿಸಿದರು.
ಅಲ್ಲದೆ, ತಮಿಳುನಾಡಿನಲ್ಲಿ ಪ್ರಕಾಶ್ ರಾಜ್ ಅವರು ಮತದಾರರ ಗುರುತಿನ ಚೀಟಿ ಹೊಂದಿದ್ದರು. ಅದನ್ನು ಡಿಲೀಟ್ ಮಾಡಿಸಲಾಗಿದೆ. ಈ ಖಾಸಗಿ ದೂರನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ಅದು ಇನ್ನೂ ವಿಚಾರಣೆಗೆ ನಿಗದಿಯಾಗಿಲ್ಲ. ಜಾಮೀನು ರಹಿತ ವಾರೆಂಟ್ ಹಿಂಪಡೆಯಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಈ ಮನವಿ ಪರಿಗಣಿಸಿದ ನ್ಯಾಯಾಲಯ ಪ್ರಕಾಶ್ ರಾಜ್ ಅವರ ವಿರುದ್ಧದ ಜಾಮೀನು ರಹಿತ ಬಂಧನ ವಾರೆಂಟ್ ಆದೇಶ ಹಿಂಪಡೆದು ಜಾಮೀನು ಮಂಜೂರು ಮಾಡಿತು. ಹಾಗೆಯೇ, ನಾಲ್ಕು ಸಾವಿರ ರುಪಾಯಿ ನಗದು ಭದ್ರತಾ ಖಾತರಿ ಒದಗಿಸಲು ಪ್ರಕಾಶ್ ರಾಜ್ ಅವರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.