ಮೈಸೂರು, ಶಿವಮೊಗ್ಗದಲ್ಲೂ ಫುಟ್‌ಪಾತ್‌ ತೆರವು ಕಾರ್ಯ

Published : Jul 11, 2026, 11:02 AM IST
 footpath

ಸಾರಾಂಶ

ಸುಪ್ರೀಂಕೋರ್ಟ್ ನಿರ್ದೇಶನದಂತೆ ಬೆಂಗಳೂರಲ್ಲಿ ಫುಟ್‌ಪಾತ್‌ ಒತ್ತುವರಿ ತೆರವು ಭರದಿಂದ ಸಾಗಿದ ಬೆನ್ನಲ್ಲಿಯೇ ಮೈಸೂರು, ಶಿವಮೊಗ್ಗದಲ್ಲೂ ನಗರ ಪಾಲಿಕೆ-ಪೋಲಿಸ್‌ ಇಲಾಖೆ ಜಂಟಿ ಕಾರ್ಯಾಚರಣೆ ಮೂಲಕ ಒತ್ತುವರಿ ತೆರವು ಆರಂಭಿಸಲಾಗಿದೆ.

  ಬೆಂಗಳೂರು :  ಸುಪ್ರೀಂಕೋರ್ಟ್ ನಿರ್ದೇಶನದಂತೆ ಬೆಂಗಳೂರಲ್ಲಿ ಫುಟ್‌ಪಾತ್‌ ಒತ್ತುವರಿ ತೆರವು ಭರದಿಂದ ಸಾಗಿದ ಬೆನ್ನಲ್ಲಿಯೇ ಮೈಸೂರು, ಶಿವಮೊಗ್ಗದಲ್ಲೂ ನಗರ ಪಾಲಿಕೆ-ಪೋಲಿಸ್‌ ಇಲಾಖೆ ಜಂಟಿ ಕಾರ್ಯಾಚರಣೆ ಮೂಲಕ ಒತ್ತುವರಿ ತೆರವು ಆರಂಭಿಸಲಾಗಿದೆ. ಮಂಗಳೂರಿನಲ್ಲಿ ತಿಂಗಳಿನಿಂದ ಬಂದ್‌ ಮಾಡಿರುವ ಸಂಡೇ ಬಜಾರ್‌ಗೆ ಅವಕಾಶ ಮಾಡಿಕೊಡುವಂತೆ ಬೀದಿ ಬದಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು.

ಮೈಸೂರಿನಲ್ಲಿ ನಗರಪಾಲಿಕೆಯಿಂದ ಕೆಆರ್‌ಎಸ್ ರಸ್ತೆ, ಜಯದೇವ ಆಸ್ಪತ್ರೆ ಜಂಕ್ಷನ್‌ನಿಂದ ಬಸವನ ವಿಗ್ರಹ ಬಳಿಯ ಬೃಂದಾವನ ಬಡಾವಣೆ ಪ್ರವೇಶ ದ್ವಾರದವರೆಗಿನ ರಸ್ತೆ ಬದಿ, ಇತರೆ ರಸ್ತೆ ಬದಿಯ ಚಾಟ್ ಸೆಂಟರ್‌, ಟೀ ಅಂಗಡಿ, ಅನಧಿಕೃತ ಸ್ಟಾಲ್‌ಗಳನ್ನು ಜೆಸಿಬಿ ಯಂತ್ರಗಳ ಸಹಾಯದಿಂದ ಧ್ವಂಸಗೊಳಿಸಲಾಯಿತು. ಕೆಆರ್‌ಎಸ್ ರಸ್ತೆಯಲ್ಲಿ ಫುಟ್‌ಪಾತ್ ವ್ಯಾಪಾರಿಗಳು ಬಸ್ ತಂಗುದಾಣದ ಮುಂಭಾಗವನ್ನೇ ಸಂಪೂರ್ಣ ಆಕ್ರಮಿಸಿಕೊಂಡಿದ್ದರು.

ಜಾಹೀರಾತು ಫಲಕಗಳು ಮತ್ತು ಫ್ಲೆಕ್ಸ್ ಬೋರ್ಡ್‌ಗಳನ್ನು ಸಹ ತೆರವು

 ಇದರಿಂದಾಗಿ ಪ್ರಯಾಣಿಕರು ಬಸ್ ನಿಲ್ದಾಣದ ಒಳಗೆ ಹೋಗಲು ಜಾಗವಿಲ್ಲದೆ ಪರದಾಡುವಂತಾಗಿತ್ತು. ಇದರೊಂದಿಗೆ ಖಾಸಗಿ ಕಂಪನಿಗಳು ಅಳವಡಿಸಿದ್ದ ಅನಧಿಕೃತ ಜಾಹೀರಾತು ಫಲಕಗಳು ಮತ್ತು ಫ್ಲೆಕ್ಸ್ ಬೋರ್ಡ್‌ಗಳನ್ನು ಸಹ ತೆರವುಗೊಳಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆ ನಡುವೆಯೂ ಪಾಲಿಕೆ ಅಧಿಕಾರಿಗಳು ಮಾನವೀಯತೆ ಮೆರೆದಿದ್ದು, ವಯೋವೃದ್ಧ ಮಹಿಳೆ ಹಾಗೂ ವಿಕಲಚೇತನ ವ್ಯಾಪಾರಿಯೊಬ್ಬರಿಗೆ ಬೇರೆಡೆಗೆ ಸ್ಥಳಾಂತರಗೊಳ್ಳಲು ಕಾಲಾವಕಾಶ ನೀಡಿದರು.

ಇನ್ನು, ಶಿವಮೊಗ್ಗದಲ್ಲೂ ಶಂಕರಮಠ ರಸ್ತೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಸಂಚಾರ ದಟ್ಟಣೆ ಇದ್ದು, ಸ್ಥಳೀಯ ವರ್ತಕರು ರಸ್ತೆಯ ಇಕ್ಕೆಲಗಳಲ್ಲಿ ಫುಟ್‌ಪಾತ್ ಅತಿಕ್ರಮಣ ಮಾಡಿ ಅಡ್ಡಿ ಉಂಟು ಮಾಡಿದ ಹಿನ್ನೆಲೆಯಲ್ಲಿ ಟ್ರಾಫಿಕ್ ಇನ್ಸ್‌ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಫುಟ್‌ಪಾತ್ ತೆರವು ಮಾಡಲಾಯಿತು. ಇದೇ ವೇಳೆ ಸಂಚಾರಿ ಪೊಲೀಸರು ಫುಟ್‌ಪಾತ್‌ನಲ್ಲಿ ಯಾವುದೇ ವಾಹನಗಳನ್ನು ನಿಲ್ಲಿಸಬಾರದು ಎಂದು ಎಚ್ಚರಿಕೆ ನೀಡಿದರು.

24 ಗಂಟೆಗಳ ಧರಣಿ ಸತ್ಯಾಗ್ರಹ

ಮಂಗಳೂರಿನಲ್ಲಿ ಬೀದಿಬದಿ ವ್ಯಾಪಾರಿಗಳು ಸಂಡೆ ಬಜಾರ್‌ಗೆ ಮುಕ್ತ ಅವಕಾಶ ನೀಡುವಂತೆ ಆಗ್ರಹಿಸಿ 24 ಗಂಟೆಗಳ ಧರಣಿ ಸತ್ಯಾಗ್ರಹ ನಡೆಸಿದರು. ಪ್ರತಿಭಟನೆಗೆ ಆಗಮಿಸಿ ಮನವಿ ಸ್ವೀಕರಿಸದ ನಗರ ಪಾಲಿಕೆ ಆಯುಕ್ತರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಧರಣಿ ಮುಕ್ತಾಯದ ಸಮಯ ಆಗುತ್ತಿದ್ದಂತೆ ಪಾಲಿಕೆಯ ಮುಖ್ಯ ದ್ವಾರದ ಬಳಿ ಧರಣಿ ನಡೆಸುತ್ತಿದ್ದ ಸ್ಥಳದಿಂದ ತೆರಳಿ ನಗರ ಪಾಲಿಕೆ ಆಡಳಿತಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸದೆ ಇಲ್ಲಿಂದ ತೆರಳುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಜಿಲ್ಲಾಧಿಕಾರಿ ಲಭ್ಯ ಇಲ್ಲದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿಸುವ ಭರವಸೆ ನೀಡಿ ಹೋರಾಟಗಾರರಿಗೆ ಪೊಲೀಸ್ ಅಧಿಕಾರಿಗಳು ಸಮಾಧಾನಪಡಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಧ್ಯಕ್ಷ ಬಿ.ಕೆ ಇಮ್ತಿಯಾಜ್, ಕಳೆದ ಒಂದು ತಿಂಗಳಿನಿಂದ ಸಂಡೆ ಬಜಾರ್ ವ್ಯಾಪಾರಿಗಳು ವ್ಯಾಪಾರಕ್ಕೆ ಅವಕಾಶ ಸಿಗದೇ ಕಂಗಾಲಾಗಿದ್ದಾರೆ. ಮುಂದಿನ ಭಾನುವಾರ ವ್ಯಾಪಾರಕ್ಕೆ ಅವಕಾಶ ನೀಡದಿದ್ದರೆ ಜೈಲ್ ಭರೋ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕೆಆರ್‌ಎಸ್‌ ನೀರು ಕುಡಿಯೋಕೆ ಮಾತ್ರ ಬಳಕೆ : ರೆಡ್ಡಿ
ಜಿಬಿಎ ಚುನಾವಣೆ ಮುಂದೂಡಲು ಸುಪ್ರೀಂಗೆ ರಾಜ್ಯ ಸರ್ಕಾರ ಮನವಿ