;Resize=(412,232))
ಬೆಂಗಳೂರು : ಬೀದಿಬದಿ ವ್ಯಾಪಾರಿಗಳು ಸರ್ಕಾರ ಗುರುತಿಸುವ ಸ್ಥಳಗಳಲ್ಲಿ ವ್ಯಾಪಾರ ಮಾಡಬೇಕು. ಅವರು ಇಚ್ಛಿಸುವ ಸ್ಥಳಗಳಲ್ಲಿ ವ್ಯಾಪಾರ ಮಾಡಲು ಅವಕಾಶ ಇಲ್ಲ. ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ, ತಳ್ಳುಗಾಡಿಗಳನ್ನು ಆದಷ್ಟು ಶೀಘ್ರ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ವಿವಿಧೆಡೆ ನಡೆದಿರುವ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಶುಕ್ರವಾರ ಖುದ್ದಾಗಿ ಪರಿಶೀಲಿಸಿದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿ, ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರದಿಂದ ನೀಡಿದ್ದ ಗುರುತಿನ ಚೀಟಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ, ಮತ್ತೆ ಈ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಬೀದಿಬದಿ ವ್ಯಾಪಾರಿಗಳಿಗಾಗಿಯೇ ಗುರುತಿಸಲಾಗುವ ಪ್ರತ್ಯೇಕ ಜಾಗಗಳಲ್ಲಿಯೇ ಅವರು ವ್ಯಾಪಾರ ಮಾಡಬಹುದು ಎಂದರು.
ತಾವು ನಗರಾಭಿವೃದ್ದಿ ಸಚಿವರಾಗಿದ್ದ ವೇಳೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಶಾಸಕರ ಸಭೆ ನಡೆಸಿ ಪಾದಚಾರಿಗಳಿಂದ ಎಲ್ಲೆಲ್ಲಿ ವಾಹನಗಳಿಗೆ ಅಡಚಣೆಯಾಗುತ್ತದೆಯೋ ಅವುಗಳನ್ನು ತೆರವುಗೊಳಿಸಲು ಕೇಳಿದಾಗ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ. ಅದೇ ಅವಧಿಯಲ್ಲಿ ಬೀದಿಬದಿ ವ್ಯಾಪಾರಿಗಳ ಸರ್ವೇ ಮಾಡಿಸಿದ್ದೆ. 60 ಸಾವಿರ ಜನ ಬೀದಿ ಬದಿ ವ್ಯಾಪಾರಿಗಳಿದ್ದಾರೆ. 30 ಸಾವಿರ ಜನರು ತ್ರಿಚಕ್ರ ವಾಹನ ಕೇಳಿದ್ದರು.ಆದಷ್ಟು ಬೇಗ ಟೆಂಡರ್ ಕರೆದು ಅವರಿಗೆ ವಾಹನ ವಿತರಿಸಲು ಹೇಳಿದ್ದೇನೆ. ಬೀದಿಬದಿ ವ್ಯಾಪಾರಿಗಳು ಇರಬೇಕು. ಹಾಗಂತ ಮುಖ್ಯ ರಸ್ತೆಗಳಲ್ಲೇ ಟೆಂಟ್ ಹಾಕಿ ಕೂರಲು ಅವಕಾಶವಿಲ್ಲ ಎಂದರು.
ಸುಪ್ರೀಂ ಕೋರ್ಟ್ ಆದೇಶ ಪಾಲನೆಯನ್ನೂ ಮಾಡಬೇಕು. ಜನರ ಅಭಿಪ್ರಾಯವನ್ನೂ ಕೇಳಬೇಕು. ಕೆಲವರಿಗೆ ಇದು ಕಠಿಣವಾಗುತ್ತದೆ. ಇಲ್ಲಿಯವರೆಗೆ ಕೃಷ್ಣಬೈರೇಗೌಡರು ಏನೆಲ್ಲಾ ಕಾರ್ಯರೂಪಕ್ಕೆ ತಂದಿದ್ದಾರೆ. ಅದನ್ನು ಅವರೊಬ್ಬರ ಮೇಲೆ ಬಿಡುವುದಲ್ಲ. ಇಡೀ ನಗರದ ಶಾಸಕರೆಲ್ಲಾ ಸೇರಿ, ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ ಈ ತೀರ್ಮಾನ ಕೈಗೊಂಡಿದ್ದೇವೆ. ಕೃಷ್ಣ ಬೈರೇಗೌಡ ಒಬ್ಬರ ಮೇಲೆ ಹಾಕುವುದು ಸರಿಯಲ್ಲ. ಎಲ್ಲ ನಾಗರಿಕರ ಮನೆಗಳ ಮುಂದೆ ಟೆಂಟ್ ಹಾಕಿದರೆ ಸುಮ್ಮನಿರುತ್ತಾರೆಯೇ ಎಂದರು.
ಇಲ್ಲಿವರೆಗೆ 435 ಕಿ.ಮೀ. ಪಾದಚಾರಿ ಮಾರ್ಗಗಳ ರಸ್ತೆಗಳ ಒತ್ತುವರಿ ತೆರವುಗೊಳಿಸಲಾಗಿದೆ. ಒಟ್ಟು 1,340 ಅಂಗಡಿಗಳಿದ್ದವು, ಸುಮಾರು 1,800 ತಳ್ಳುವ ಗಾಡಿಗಳಿದ್ದವು. ತಳ್ಳುವ ಗಾಡಿಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ. ಸುಮಾರು 2,267 ಅಂಗಡಿ ಮುಂಭಾಗದಲ್ಲಿ ಅಳವಡಿಸಿದ್ದ ತಗಡಿನ ಶೀಟ್ ಗಳನ್ನು ಸಹ ತೆಗೆಯಲಾಗಿದೆ. 2,300 ಮೆಟ್ಟಿಲು, ರ‍್ಯಾಂಪ್‌ಗಳು, 2,662 ಪಿಲ್ಲರ್‌ಗಳು ಬೋರ್ಡ್‌ಗಳು, 2,247 ಶೆಡ್‌ಗಳನ್ನು ತೆರವುಗೊಳಿಸಲಾಗಿದೆ. ತೆರವಾದ ತ್ಯಾಜ್ಯವನ್ನು ವಿಲೇವಾರಿ ಮಾಡಿದ್ದು ಜೊತೆಗೆ ಪಾದಚಾರಿ ಮಾರ್ಗಗಳನ್ನು ದುರಸ್ತಿ ಮಾಡಿಕೊಂಡು ಬರಲಾಗುತ್ತಿದೆ ಎಂದು ವಿವರಿಸಿದರು.
ಬೆಂಗಳೂರಿನ ಸುಧಾರಣೆಗಾಗಿ ನಾವು ಟೀಕೆಗಳನ್ನು ಸ್ವೀಕರಿಸಲು ಸಿದ್ಧರಿದ್ದೇವೆ. ಇದರ ಹಿಂದೆ ದೊಡ್ಡ ಮಾಫಿಯಾ ಇದೆ. ರೌಡಿಗಳು ವ್ಯಾಪಾರಿಗಳಿಂದ ವಸೂಲಿ ಮಾಡುವ ಕೆಲಸಗಳು ನಡೆದಿವೆ. ಈ ಬಗ್ಗೆ ಮಾಹಿತಿಯೂ ನಮಗಿದೆ. ಪೊಲೀಸ್ ಹಾಗೂ ಜಿಬಿಎ ಅಧಿಕಾರಿಗಳಿಗೆ ನಾವು ಸ್ವಾತಂತ್ರ್ಯ ನೀಡಿದ್ದೇವೆ ಎಂದರು. 3 ವರ್ಷಗಳಲ್ಲಿ ಸುಮಾರು 900ಕ್ಕೂ ಹೆಚ್ಚು ಪಾದಚಾರಿಗಳು ಮೃತಪಟ್ಟಿದ್ದಾರೆ. ಅದ್ದರಿಂದ ನಾಗರಿಕರ ಅನುಕೂಲಕ್ಕಾಗಿ ಈ ಕೆಲಸ ಮಾಡುತ್ತಿದ್ದೇವೆ. ಸ್ವಂತ ಲಾಭಕ್ಕಾಗಿ ಮಾಡುತ್ತಿರುವ ಕೆಲಸವಲ್ಲ. ಪಾದಚಾರಿ ಮಾರ್ಗ ಇಲ್ಲ ಎಂದರೆ ಜನ ರಸ್ತೆಯಲ್ಲಿ ನಡೆಯುತ್ತಾರೆ. ಆಗ ವಾಹನಗಳ ಓಡಾಟಕ್ಕೂ ತೊಂದರೆ ಉಂಟಾಗಲಿದೆ ಎಂದರು. ಜಯನಗರ ಮಾರುಕಟ್ಟೆ ಬಗ್ಗೆ ಸದ್ಯದಲ್ಲೇ ತೀರ್ಮಾನ ಮಾಡಲಾಗುವುದು. ಅರ್ಧ ಕಟ್ಟಡ ನಿರ್ಮಾಣವಾಗಿದೆ. ಉಳಿದಿರುವ ಕೆಲಸವನ್ನೂ ಯಾವುದಾದರೂ ಒಂದು ಯೋಜನೆಯ ಅಡಿಯಲ್ಲಿ ಮಾಡಲಾಗುವುದು ಎಂದು ಹೇಳಿದರು.
ಬೆಳಗಾವಿಯಿಂದ ಮಧ್ಯಾಹ್ನ 12.30ಕ್ಕೆ ಎಚ್ಎಎಲ್ ಏರ್ಪೋರ್ಟ್ ಆಗಮಿಸಿದ ಸಿಎಂ ಡಿ.ಕೆ.ಶಿವಕುಮಾರ್ ಹಳೇ ಏರ್ಪೋರ್ಟ್ ರಸ್ತೆಯಲ್ಲಿ ಪಾದಚಾರಿ ಮಾರ್ಗ ವೀಕ್ಷಿಸಿದರು. ನಂತರ ತಮ್ಮ ಕಾರನ್ನು ಬಿಟ್ಟು ಮಿನಿ ಬಸ್ ಏರಿ ಎಚ್ಎಎಲ್ ಮುಂದಿರುವ ದೊಡ್ಡನೆಕುಂದಿ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿ ತೆರವು ಮಾಡಿರುವ ಪಾದಚಾರಿ ಮಾರ್ಗ ವೀಕ್ಷಿಸಿದರು. ನಂತರ ಎಚ್ಎಸ್‌ಆರ್ ಲೇಔಟ್, ಜಯನಗರ ಸೇರಿದಂತೆ ಹಲವೆಡೆ ಪರಿಶೀಲನೆ ನಡೆಸಿದರು. ಸಿಎಂ ಜೊತೆಗಿದ್ದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಪಾಲಿಕೆ ಆಯುಕ್ತ ಮಹೇಶ್ವರ ರಾವ್ ತೆರವು ಕಾರ್ಯಾಚರಣೆಯ ಮಾಹಿತಿ ನೀಡಿದರು. ಮುಖ್ಯಮಂತ್ರಿಗಳು ಭೇಟಿ ನೀಡುವ ಮಾರ್ಗಗಳಲ್ಲಿ ಅಲ್ಲಲ್ಲಿ ಹಸಿರು ಪರದೆಗಳನ್ನು ಕಟ್ಟಿ ಕಾಮಗಾರಿ, ಕಸ ಚೆಲ್ಲಿದ ಜಾಗಗಳು, ವಾಸನೆ ಬರುವ ಪ್ರದೇಶಗಳನ್ನು ಮುಚ್ಚಿದ್ದರು. ಇನ್ನೂ ಕೆಲವೆಡೆ ಎಂ ಸ್ಯಾಂಡ್ ಸುರಿದು ಕೊಳಚೆ ಪ್ರದೇಶಗಳನ್ನು ಮುಚ್ಚಿದ್ದು ಕಂಡು ಬಂದಿತ್ತು.