ಕೆಪಿಎಸ್‌ಸಿ ಅಧ್ಯಕ್ಷರ ಹಗರಣ ಈಗ ಹೈಕೋರ್ಟ್‌ ಕಟಕಟೆಗೆ

Published : Jul 11, 2026, 06:23 AM IST
KPSC Chairman Shivashankarappa Sahukar

ಸಾರಾಂಶ

ಕರ್ನಾಟಕ ಲೋಕಸೇವಾ ಆಯೋಗದ(ಕೆಪಿಎಸ್ಸಿ) ಅಧ್ಯಕ್ಷ ಸ್ಥಾನಕ್ಕೆ ಶಿವಶಂಕರಪ್ಪ ಸಾಹುಕಾರ್ ತಕ್ಷಣವೇ ರಾಜೀನಾಮೆ ನೀಡಿ, ಹುದ್ದೆ ತ್ಯಜಿಸಬೇಕು ಎಂದು ಆಯೋಗದ ಸದಸ್ಯರ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.

 ಬೆಂಗಳೂರು :  ಸರ್ಕಾರಿ ಉದ್ಯೋಗಕ್ಕೆ ಪುತ್ರಿ ಅಕ್ರಮವಾಗಿ ನೇಮಕವಾಗಲು ಸಹಕರಿಸುವ ಮೂಲಕ ಅಧಿಕಾರ ದುರುಪಯೋಗ ಹಾಗೂ ಸ್ವಜನಪಕ್ಷಪಾತ ಎಸಗಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ(ಕೆಪಿಎಸ್ಸಿ) ಅಧ್ಯಕ್ಷ ಸ್ಥಾನಕ್ಕೆ ಶಿವಶಂಕರಪ್ಪ ಸಾಹುಕಾರ್ ತಕ್ಷಣವೇ ರಾಜೀನಾಮೆ ನೀಡಿ, ಹುದ್ದೆ ತ್ಯಜಿಸಬೇಕು ಎಂದು ಆಯೋಗದ ಸದಸ್ಯರ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.

ಜೂ.19ರಂದು ಆಯೋಗದ ಸಭೆಯಲ್ಲಿ ಕೈಗೊಂಡ ನಿರ್ಣಯ ಪ್ರಶ್ನಿಸಿ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿರುವ ಅರ್ಜಿ‌‌ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ‌ ಪೀಠ ಈ ಮಧ್ಯಂತರ ಆದೇಶ ಮಾಡಿದೆ.

ಜೂ.19ರಂದು ನಡೆದಿದ್ದ ಸಭೆ:

ಆಯೋಗದ ಹಿರಿಯ ಸದಸ್ಯ ಡಾ.ಬಿ.ಪ್ರಭುದೇವ ಅವರ ಅಧ್ಯಕ್ಷತೆಯಲ್ಲಿ ಜೂ.19ರಂದು ನಡೆದ ಸಭೆಯಲ್ಲಿ ‘ಶಿವಶಂಕರಪ್ಪ ಸಾಹುಕಾರ್ ತಕ್ಷಣ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹುದ್ದೆ ತ್ಯಜಿಸಬೇಕು’ ಎಂದು ಕೈಗೊಂಡ ನಿರ್ಣಯ ಹಾಗೂ ಆ ನಿರ್ಣಯ ಅಂಗೀಕರಿಸಿದ ಸಂಬಂಧ ವರದಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯಪಾಲರ ಕಚೇರಿಗೆ ಕ್ರಮವಾಗಿ ಜು.6 ಮತ್ತು 7ರಂದು ಕಳುಹಿಸಿಕೊಟ್ಟ ಆಯೋಗದ ಕಾರ್ಯದರ್ಶಿ ಪತ್ರಗಳಿಗೆ ತಡೆ‌ನೀಡಲಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಆ.11ಕ್ಕೆ ವಿಚಾರಣೆ ಮುಂದೂಡಿಕೆ:

ಅಲ್ಲದೇ, ಅರ್ಜಿ ಸಂಬಂಧ ಆಯೋಗದ ಸಭೆಯಲ್ಲಿ ಭಾಗಿಯಾಗಿದ್ದ ಸದಸ್ಯರಾದ ಡಾ.ಬಿ.ಪ್ರಭುದೇವ, ಡಾ.ಶಾಂತಾ ಹೊಸಮನಿ, ಡಾ.ಎಚ್.ಎಸ್.ನರೇಂದ್ರ, ಬಿ.ವಿ.ಗೀತಾ, ಶಕುಂತಲಾ ಎಸ್.ದುಂಡಿಗೌಡರ್, ಡಾ.ಆರ್.ಕಾವಲ್ಲಮ್ಮ, ಎಂ.ವಿ.ರಾಮಕೃಷ್ಣ ಪ್ರಸಾದ್, ಶಿವನಗೌಡ, ಪ್ರೊ.ವಿ.ದೇವಪ್ಪ, ಡಾ.ಹೆಚ್.ಎಸ್. ಭೋಜ್ಯನಾಯ್ಕ್ ಹಾಗೂ ಆಯೋಗದ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿದ ಪೀಠ ವಿಚಾರಣೆಯನ್ನು ಆ.11ಕ್ಕೆ ಮುಂದೂಡಿತು.

ಅರ್ಜಿದಾರ ಶಿವಶಂಕರಪ್ಪ ಸಾಹುಕಾರ್ ಪರ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್ ವಾದ ಮಂಡಿಸಿ, ಕೆಪಿಎಸ್‌ಸಿ ಅಧ್ಯಕ್ಷರ ವಿರುದ್ಧ ಆರೋಪಗಳು ಕೇಳಿ ಬಂದಾಗ ಸಂವಿಧಾನದ ಪರಿಚ್ಛೇದ 317 ಪ್ರಕಾರವೇ ಕ್ರಮ ಆಗಬೇಕು. ಅಧ್ಯಕ್ಷರ ರಾಜೀನಾಮೆ ಕೇಳುವ ಅಥವಾ ಹಂಗಾಮಿ ಅಧ್ಯಕ್ಷರನ್ನು ನಿಯೋಜಿಸಿಕೊಂಡು ಸಭೆ ನಡೆಸುವ ಅಧಿಕಾರ ಕೆಪಿಎಸ್‌ಸಿ ಸದಸ್ಯರಿಗೆ ಇಲ್ಲ. ಆಯೋಗದ ಸದಸ್ಯರು ಅಂಗೀಕರಿಸಿರುವ ನಿರ್ಣಯ ಹಾಗೂ ಅದರ ನಂತರದ ಬೆಳವಣಿಗೆಗಳು ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಕಾರ್ಯಗಳು) ಕಾಯ್ದೆ-1959ರ ಸೆಕ್ಷನ್ 5,7 ಮತ್ತು 11ಕ್ಕೆ ವಿರುದ್ಧವಾಗಿದೆ. ಆದ್ದರಿಂದ ಸಭೆಯ ನಿರ್ಣಯ, ಕಾರ್ಯದರ್ಶಿಗಳ ಪತ್ರಗಳನ್ನು ರದ್ದುಪಡಿಸಬೇಕು‌ ಎಂದು ಕೋರಿದರು.

ಹಾಗೆಯೇ, ಅರ್ಜಿ ಇತ್ಯರ್ಥ ಆಗುವ ತನಕ ಆಯೋಗದ ಸದಸ್ಯರ ನಿರ್ಣಯಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ಮಧ್ಯಂತರ ಆದೇಶ ಮಾಡಿತು.

‘ಕನ್ನಡಪ್ರಭ’ ಬಯಲಿಗೆಳೆದ ಹಗರಣ

ಕೆಪಿಎಸ್ಸಿ ಮೂಲಕ ನಡೆದ ನೇಮಕಾತಿ ವೇಳೆ ತಮ್ಮ ಪುತ್ರಿಗೆ ಹುದ್ದೆ ಕೊಡಿಸಲು ಸುಳ್ಳು ಆದಾಯ ಪ್ರಮಾಣ ಪತ್ರವನ್ನು ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಕೊಡಿಸಿದ್ದಾರೆ ಎಂಬ ಸ್ಫೋಟಕ ವರದಿಯನ್ನು ‘ಕನ್ನಡಪ್ರಭ’ ಮಾತ್ರ ಜು.1ರಂದು ವರದಿ ಮಾಡಿತ್ತು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಶಾಶ್ವತ ನಿವಾಸಿ ಪತ್ರಕ್ಕೆ ಬಿಜೆಪಿಯಿಂದ ವಿರೋಧ
ಕೆಪಿಎಸ್ಸಿ ಅಧ್ಯಕ್ಷರ ಪುತ್ರಿ ವಿರುದ್ಧ ಎಫ್‌ಐಆರ್‌