3 ಪಂಚಾಯ್ತಿಗೆ ಒಂದು ಸರ್ಕಾರಿ ಶಾಲೆ : ಸಿಎಂ

Published : Jul 10, 2026, 11:25 AM IST
DK Shivakumar

ಸಾರಾಂಶ

ತಮ್ಮ ಮಕ್ಕಳ ವಿದ್ಯಾಭ್ಯಾಸ ಹಾಗೂ ಉದ್ಯೋಗ ಅರಸಿ ಜನರು ನಗರ, ಪಟ್ಟಣಕ್ಕೆ ವಲಸೆ ಬರುತ್ತಾರೆ. ಇದನ್ನು ತಡೆಯಲು ಸಿಎಸ್‌ಆರ್ ನೀತಿಯಡಿ ₹8000 ಕೋಟಿ ವೆಚ್ಚದಲ್ಲಿ ರಾಜ್ಯಾದ್ಯಂತ ಕನಿಷ್ಠ 2000 ಶಾಲೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಘೋಷಿಸಿದರು.

  ಬೆಳಗಾವಿ :  ತಮ್ಮ ಮಕ್ಕಳ ವಿದ್ಯಾಭ್ಯಾಸ ಹಾಗೂ ಉದ್ಯೋಗ ಅರಸಿ ಜನರು ನಗರ, ಪಟ್ಟಣಕ್ಕೆ ವಲಸೆ ಬರುತ್ತಾರೆ. ಇದನ್ನು ತಡೆಯಲು ಸಿಎಸ್‌ಆರ್ ನೀತಿಯಡಿ ₹8000 ಕೋಟಿ ವೆಚ್ಚದಲ್ಲಿ ರಾಜ್ಯಾದ್ಯಂತ ಕನಿಷ್ಠ 2000 ಶಾಲೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಘೋಷಿಸಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಗುರುವಾರ ಜರುಗಿದ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೂರು ಪಂಚಾಯಿತಿ ಸೇರಿಸಿ ₹10-15 ಕೋಟಿ ವೆಚ್ಚದಲ್ಲಿ ಒಂದು ಸರ್ಕಾರಿ ಶಾಲೆಯನ್ನು ನಿರ್ಮಾಣ ಮಾಡಲಾಗುವುದು. ಅಲ್ಲದೇ, ಆಯಾ ಜಿಲ್ಲೆಯ ದೊಡ್ಡ ಶಿಕ್ಷಣ ಸಂಸ್ಥೆಗಳು ಮೂರು ಶಾಲೆಗಳನ್ನು ದತ್ತು ಪಡೆದುಕೊಳ್ಳುವಂತೆ ಕ್ರಮ‌ ವಹಿಸಲಾಗುವುದು. ಎಲ್ಲರಿಗೂ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ಒದಗಿಸಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.

ಜನರ ಬಳಿಗೆ ಸರ್ಕಾರ:

ಜನರು ಸರ್ಕಾರವನ್ನು ಹುಡುಕಬಾರದು. ಜನರ ಬಳಿಗೆ ಸರ್ಕಾರ ಇರಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು, ಗ್ರಾಮ‌ಲೆಕ್ಕಾಧಿಕಾರಿಗಳು ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಕೇಂದ್ರ ಸ್ಥಾನದಲ್ಲಿದ್ದುಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ, ತಾಲೂಕುಮಟ್ಟದ ಪ್ರತಿ ಅಧಿಕಾರಿಯು ಕೇಂದ್ರಸ್ಥಾನದಲ್ಲಿರುವ ಬಗ್ಗೆ ಡೀಸಿ, ಸಿಇಒಗಳು ಖಚಿತಪಡಿಸಿಕೊಳ್ಳಬೇಕು. ಚಲನವಲನಗಳ ಮೇಲೆಯೂ ನಿರಂತರ ನಿಗಾ ವಹಿಸಬೇಕು. ಸರ್ಕಾರವನ್ನು ಜನರು ಹುಡುಕಬಾರದು. ಜನರ ಬಳಿ ಸರ್ಕಾರ ಇರಬೇಕು ಎಂಬುದು ನನ್ನ ಮೊದಲ ಆದ್ಯತೆ. ಜನರನ್ನು ಕಚೇರಿಗೆ ಅಲೆಸುವುದು ನಿಲ್ಲಬೇಕು. ಅಧಿಕಾರಿಗಳು ಘನತೆಯಿಂದ ಇರಬೇಕು ಎಂದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕುಡಿಯುವ ನೀರಿಗೆ ₹1 ಕೋಟಿ

ಮುಂಗಾರು ಮಳೆ ಕೊರತೆಯಿಂದಾಗಿ ಕುಡಿಯುವ ನೀರಿನ‌ ಸಮಸ್ಯೆ ಎದುರಾಗಿದ್ದು, ಗ್ರಾಮೀಣ ಪ್ರದೇಶದ ಎಲ್ಲ ಶಾಸಕರಿಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹1 ಕೋಟಿ ಅನುದಾನ ಒದಗಿಸಲಾಗುವುದು ಎಂದು ಸಿಎಂ ತಿಳಿಸಿದರು. ಸರ್ಕಾರದ ಮಾರ್ಗಸೂಚಿ ಪ್ರಕಾರ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅನುದಾನ ಬಳಕೆ ಮಾಡಬೇಕು. ಮಳೆ ಕಡಿಮೆ ಆಗಿರುವ ಜಿಲ್ಲೆಗಳಲ್ಲಿ‌ ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗಬಾರದು. ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸಿ ನೀರಿನ ಸಮಸ್ಯೆ ಇರುವ ಪ್ರದೇಶಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲು‌ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಹದಾಯಿ ಜಾರಿಗೆ ಕೇಂದ್ರದ ಮೇಲೆ ನಿರಂತರ ಒತ್ತಡ: ಡಿಕೆಶಿ

ಮಹದಾಯಿ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಯೋಜನೆಗೆ ಸಂಬಂಧಿಸಿದ ಬಾಕಿ ಇರುವ ಎಲ್ಲ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಲು ಕೇಂದ್ರ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಲಾಗುತ್ತಿದೆ. ಮಹದಾಯಿ ಸೇರಿದಂತೆ ರಾಜ್ಯದ ಜಲಸಂಪನ್ಮೂಲ ಯೋಜನೆಗಳ ಕುರಿತು ಕೇಂದ್ರದೊಂದಿಗೆ ನಿರಂತರ ಮಾತುಕತೆ ನಡೆಸಲಾಗುತ್ತಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಸಂಬಂಧಪಟ್ಟ ಸಚಿವರನ್ನು ಹಲವು ಬಾರಿ ಭೇಟಿ ಮಾಡಿ ಯೋಜನೆಗಳಿಗೆ ಅಗತ್ಯ ಅನುಮತಿಗಳನ್ನು ಶೀಘ್ರ ನೀಡುವಂತೆ ಮನವಿ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು.

ಕೇಂದ್ರ ಸಚಿವರನ್ನು ಹಲವು ಬಾರಿ ಭೇಟಿ ಮಾಡಿ ಚರ್ಚಿಸಿದ್ದೇನೆ. ದೆಹಲಿಯಲ್ಲೂ ಮತ್ತೆ ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ. ಜಲಸಂಪನ್ಮೂಲ ಯೋಜನೆಗಳ ವಿಚಾರದಲ್ಲಿ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ. ರೈತರ ಹಿತಾಸಕ್ತಿಯೇ ನಮ್ಮ ಮೊದಲ ಆದ್ಯತೆ ಎಂದರು.

ಅದ್ಧೂರಿ ಸ್ವಾಗತ:

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರಿಗೆ ಜಿಲ್ಲಾ ಕಾಂಗ್ರೆಸ್ ನಾಯಕರು, ಶಾಸಕರು ಹಾಗೂ ಸಾವಿರಾರು ಕಾರ್ಯಕರ್ತರು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದರು. ಕಾರ್ಯಕರ್ತರು ಹಾಗೂ ಅಭಿಮಾನಿಗಳು ‘ಡಿಕೆ... ಡಿಕೆ...’ ಎಂಬ ಜಯಘೋಷ ಮೊಳಗಿಸಿದರು. ಪುಷ್ಪವೃಷ್ಟಿ, ಹೂಗುಚ್ಛಗಳ ಸಮರ್ಪಣೆ ಹಾಗೂ ಸಂಭ್ರಮಾಚರಣೆಯ ಮೂಲಕ ತಮ್ಮ ನೆಚ್ಚಿನ ನಾಯಕನನ್ನು ಬರಮಾಡಿಕೊಂಡರು.

ಸಚಿವರಾದ ಎಂ.ಬಿ. ಪಾಟೀಲ, ಸತೀಶ ಜಾರಕಿಹೊಳಿ, ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ್, ಅಶೋಕ ಪಟ್ಟಣ, ಬಾಬಾಸಾಹೇಬ ಪಾಟೀಲ, ಆಸೀಫ್ ಸೇಠ್, ವಿಜಯಾನಂದ ಕಾಶಪ್ಪನವರ, ಮಹೇಂದ್ರ ತಮ್ಮಣ್ಣವರ, ವಿಶ್ವಾಸ ವೈದ್ಯ ಸೇರಿದಂತೆ ಪಕ್ಷದ ಹಲವು ಮುಖಂಡರು ಮುಖ್ಯಮಂತ್ರಿ ಅವರನ್ನು ಸ್ವಾಗತಿಸಿದರು. ಬಳಿಕ ಮುಖ್ಯಮಂತ್ರಿ ಪೊಲೀಸ್ ಗೌರವ ವಂದನೆ ಸ್ವೀಕರಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ದಲಿತ ದೌರ್ಜನ್ಯ ಪ್ರದೇಶದಲ್ಲಿ ಶೋಷಣೆ ತಡೆಗೆ ಡಿಸಿಆರ್‌ಇ ಪ್ಲ್ಯಾನ್‌
ಯುವಕರೇ ಆರೆಸ್ಸೆಸ್‌ ತಂಟೆಗೆ ಹೋಗ್ಬೇಡಿ: ಪ್ರಿಯಾಂಕ್‌ ಖರ್ಗೆ