ಬರದ ಛಾಯೆ ಇದ್ರೂ ವಿಜೃಂಭಣೆಯ ದಸರಾ: ಸಿಎಂ

Published : Jul 11, 2026, 11:46 AM IST
DK Shivakumar

ಸಾರಾಂಶ

ಬರಗಾಲದ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾ ನಿಲ್ಲಿಸುವ ಅಥವಾ ಸರಳವಾಗಿ ಆಚರಿಸುವ ಪ್ರಶ್ನೆಯಿಲ್ಲ. ನಮ್ಮ ಸಂಸ್ಕೃತಿ, ಇತಿಹಾಸ ನಮ್ಮ ಶಕ್ತಿ. ಆದ್ದರಿಂದ ರಾಜ್ಯದಲ್ಲಿ ಬರದ ಛಾಯೆ ಇದ್ದರೂ ದಸರಾ ಹಬ್ಬವನ್ನು 11 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

  ಬೆಂಗಳೂರು :  ಬರಗಾಲದ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾ ನಿಲ್ಲಿಸುವ ಅಥವಾ ಸರಳವಾಗಿ ಆಚರಿಸುವ ಪ್ರಶ್ನೆಯಿಲ್ಲ. ನಮ್ಮ ಸಂಸ್ಕೃತಿ, ಇತಿಹಾಸ ನಮ್ಮ ಶಕ್ತಿ. ಆದ್ದರಿಂದ ರಾಜ್ಯದಲ್ಲಿ ಬರದ ಛಾಯೆ ಇದ್ದರೂ ದಸರಾ ಹಬ್ಬವನ್ನು 11 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಈ ವರ್ಷದ ನಾಡಹಬ್ಬ ದಸರಾ ಆಚರಣೆ ಸಂಬಂಧ ಪೂರ್ವಭಾವಿ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬರಗಾಲ ಎಂಬ ಕಾರಣಕ್ಕೆ ಸ್ವಲ್ಪ ಹಣ ಉಳಿಸಲು ಹೋಗಿ ನಮ್ಮ ಸಂಸ್ಕೃತಿ ಪರಂಪರೆಯ ವೈಭವ ಕಡಿಮೆ ಮಾಡುವುದು ಬೇಡ. ಬರಗಾಲ ಕಾರಣದಿಂದ ದಸರಾ ನಿಲ್ಲಿಸುವ ಅಥವಾ ಸರಳವಾಗಿ ಆಚರಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮೈಸೂರು ದಸರಾ ಐತಿಹಾಸಿಕ ಹಾಗೂ ಪಾರಂಪರಿಕ ಉತ್ಸವ ಜತೆಗೆ ನಮ್ಮ ರಾಜ್ಯದ ಹೆಮ್ಮೆ. ಹೀಗಾಗಿ ಪ್ರತಿ ವರ್ಷದಂತೆ ಉತ್ಸವ ಸ್ವರೂಪ ಬದಲಿಸಿದರೂ ಅದ್ಧೂರಿಯಾಗಿ ನಡೆಸುತ್ತೇವೆ. ಹೊಸ ಹೊಸ ಆಲೋಚನೆ, ಆವಿಷ್ಕಾರಗಳೊಂದಿಗೆ ಕಾರ್ಯಕ್ರಮ ಅಳವಡಿಸಲು ಬೇಡಿಕೆ ಬರುತ್ತಿದೆ. ಅಂತಾರಾಷ್ಟ್ರೀಯ ಖ್ಯಾತಿಗೆ ತಕ್ಕ ಹಾಗೆ ನಮ್ಮ ಸಂಸ್ಕೃತಿಗೆ ಅನುಗುಣವಾಗಿ ಕಾರ್ಯಕ್ರಮ ಮಾಡಲಾಗುವುದು. ಚೆಸ್ಕಾಂನಿಂದ ದೀಪಾಲಂಕಾರ ಪ್ರತಿ ವರ್ಷದಂತೆ ಮಾಡಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ವಿಜೃಂಭಣೆ ಎಂದರೆ ದುಂದುವೆಚ್ಚವಲ್ಲ:

ವಿಜೃಂಭಣೆಯಿಂದ ಆಚರಿಸುತ್ತೇವೆ ಎಂದರೆ ಹಣ ದುಂದುವೆಚ್ಚ ಮಾಡುವುದಲ್ಲ. ಬದಲಿಗೆ ಹೊಸ ಚಿಂತನೆಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಪರಂಪರೆ ಉಳಿಸಿಕೊಂಡು ಹೋಗುವುದು ನಮ್ಮ ಆದ್ಯತೆ. ಹೀಗಾಗಿ ರಾಜ್ಯದ ಎಲ್ಲ ಸಂಸ್ಕೃತಿ, ಪರಂಪರೆಗಳನ್ನು ಜಗತ್ತಿಗೆ ಪ್ರದರ್ಶಿಸುವ ನಿಟ್ಟಿನಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ ಎಂದು ಹೇಳಿದರು.

ಇದೇ ವೇಳೆ ದಸರಾ ಹಿನ್ನೆಲೆ ಏರ್ ಶೋ ನಡೆಸುವ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಚರ್ಚೆ ನಡೆಸಲಾಗುವುದು ಎಂದು ಶಿವಕುಮಾರ್‌ ಸ್ಪಷ್ಟಪಡಿಸಿದರು.

ಅ.11 ರಂದು ಉದ್ಘಾಟನೆ, 11 ದಿನ ಆಚರಣೆ:

ಆ. 26ರಂದು ಬೆಳಗ್ಗೆ 10 ಗಂಟೆಗೆ ಗಜಪೂಜೆ ನಡೆದು ಗಜಪಯಣ ಶುರುವಾಗಲಿದೆ. ದಸರಾ ಉದ್ಘಾಟನೆ ಅ. 11ರಂದು ಬೆಳಗ್ಗೆ 11.50ಕ್ಕೆ ನಿಗದಿ ಮಾಡಿದ್ದೇವೆ. ಜಂಬೂ ಸವಾರಿ, ನಂದಿ ಪೂಜೆ ಕಾರ್ಯಕ್ರಮ ಅ. 21 ರಂದು ಮಧ್ಯಾಹ್ನ 1.30ಕ್ಕೆ ಹಾಗೂ ಜಂಬೂ ಸವಾರಿ ಪುಷ್ಪಾರ್ಚನೆಯನ್ನು ಅಂದೇ ಸಂಜೆ 4.10ಕ್ಕೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಿಎಂ ತಿಳಿಸಿದರು.

ಉದ್ಘಾಟಕರ ಆಯ್ಕೆ ಸಿಎಂ ವಿವೇಚನೆಗೆ:

ಸಭೆಯಲ್ಲಿ ದಸರಾ ಆಯೋಜನೆ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಕಾರ್ಯಕಾರಿ ಸಮಿತಿ ರಚನೆ ಮಾಡಲು ತೀರ್ಮಾನಿಸಲಾಗಿದೆ. ದಸರಾ ಉದ್ಘಾಟನೆಯನ್ನು ಯಾರಿಂದ ಮಾಡಿಸಬೇಕು ಎಂಬ ತೀರ್ಮಾನದ ಅಧಿಕಾರವನ್ನು ಸಭೆಯು ಮುಖ್ಯಮಂತ್ರಿಗಳಿಗೆ ನೀಡಿದೆ ಎಂದು ತಿಳಿದುಬಂದಿದೆ.

ಸಮಿತಿ ಹೆಸರಿನಲ್ಲಿ ರಾಜಕಾರಣ ಬಿಡಿ:

ಸಮಿತಿ ರಚನೆ ಹೆಸರಿನಲ್ಲಿ ರಾಜಕಾರಣ ಮಾಡುವುದು ಬೇಡ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುತ್ತಿದ್ದೇವೆ. ಎಂಟು ವರ್ಷಗಳ ಕಾಲ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಈ ಹಬ್ಬವನ್ನು ಉತ್ತಮವಾಗಿ ನಡೆಸಿಕೊಂಡು ಬಂದಿದ್ದರು ಅದೇ ರೀತಿ ನಡೆಸಿಕೊಂಡು ಹೋಗೋಣ ಎಂದು ಶಿವಕುಮಾರ್‌ ಹೇಳಿದರು.

ಉಪಮುಖ್ಯಮಂತ್ರಿ ಡಾ.ಪರಮೇಶ್ವರ್‌, ಸಚಿವರಾದ ಕೆ.ಜೆ ಜಾರ್ಜ್, ಪ್ರಿಯಾಂಕ್ ಖರ್ಗೆ, ಡಾ.ಯತೀಂದ್ರ ಸಿದ್ದರಾಮಯ್ಯ, ಸಂಸದ ಯದುವೀರ್ ಒಡೆಯರ್ ಸೇರಿ ಶಾಸಕರು, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಹಾಜರಿದ್ದರು.

ಗೋಲ್ಡನ್‌ ಪಾಸ್‌ ಬಗ್ಗೆ ಚರ್ಚಿಸಿ ತೀರ್ಮಾನ

ಗೋಲ್ಡನ್‌ ಪಾಸ್‌ ವಿತರಣೆ ಬಗ್ಗೆ ಕೆಲವರು ಸಲಹೆ ನೀಡಿದ್ದು, ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಜೊತೆ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ. ಹೊರಗಡೆಯಿಂದ ಬರುವವರಿಗೆ ಗೌರವ ಕೊಡಬೇಕು. ಮೈಸೂರು ಆತಿಥ್ಯಕ್ಕೆ ಹೆಸರುವಾಸಿ. ಅದನ್ನು ಹಾಳುಮಾಡಿಕೊಳ್ಳುವುದು ಬೇಡ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಕಂಬಳ ಬಗ್ಗೆ ಪ್ರತಿಕ್ರಿಯಿಸದ ಸಿಎಂ

ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆಗೆ ಮೈಸೂರು ಸಂಸದ ಯದುವೀರ್‌ ಅವರು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಿರಾಕರಿಸಿದರು.

ಸಭೆಯಲ್ಲಿ ಹಾಜರಿದ್ದ ಪುತ್ತೂರು ಶಾಸಕ ಅಶೋಕ್‌ ರೈ, ಮೈಸೂರಿನ ದಸರಾದಲ್ಲಿ ಕಂಬಳ ಕ್ರೀಡೆ ಆಯೋಜಿಸುವ ಬಗ್ಗೆ ಸಭೆಯಲ್ಲಿ ಯಾವುದೇ ವಿರೋಧ ಬಂದಿಲ್ಲ. ಕಂಬಳ ಆಯೋಜನೆಗೆ ನಾವು ಈಗಾಗಲೇ ತಯಾರಿ ಆರಂಭಿಸಿದ್ದು, ಐದು ಕೋಟಿ ಅನುದಾನ ಕೇಳಿದ್ದೇವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಆಗಲಿದೆ ಎಂದು ಹೇಳಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಮೈಸೂರು, ಶಿವಮೊಗ್ಗದಲ್ಲೂ ಫುಟ್‌ಪಾತ್‌ ತೆರವು ಕಾರ್ಯ
ಕೆಆರ್‌ಎಸ್‌ ನೀರು ಕುಡಿಯೋಕೆ ಮಾತ್ರ ಬಳಕೆ : ರೆಡ್ಡಿ