ಕೆಎಸ್‌ಆರ್‌ಟಿಸಿ ಆಯ್ತ ದೀಪಾವಳಿಗೆ ಖಾಸಗಿ ಬಸ್‌ ದರ 40% ಏರಿಕೆ

Published : Nov 05, 2026, 06:45 AM IST
private buses

ಸಾರಾಂಶ

ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳ ಬಸ್‌ ಪ್ರಯಾಣ ದರ ಹೆಚ್ಚಳದ ಬೆನ್ನಲ್ಲೇ, ದೀಪಾವಳಿ ಹಬ್ಬದ ಸಂದರ್ಭಕ್ಕೆ ಸೀಮಿತವಾಗಿ ಶೇ.40ರವರೆಗೆ ಬಸ್‌ ಪ್ರಯಾಣ ದರ ಹೆಚ್ಚಳ ಮಾಡಲು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ

ಬೆಂಗಳೂರು : ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳ ಬಸ್‌ ಪ್ರಯಾಣ ದರ ಹೆಚ್ಚಳದ ಬೆನ್ನಲ್ಲೇ, ದೀಪಾವಳಿ ಹಬ್ಬದ ಸಂದರ್ಭಕ್ಕೆ ಸೀಮಿತವಾಗಿ ಶೇ.40ರವರೆಗೆ ಬಸ್‌ ಪ್ರಯಾಣ ದರ ಹೆಚ್ಚಳ ಮಾಡಲು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ. ಆದರೆ ದರ ಏರಿಕೆ ಹಬ್ಬದ ಅವಧಿಗೆ ಮಾತ್ರ ಸೀಮಿತ. ಒಟ್ಟಾರೆ ದರ ಹೆಚ್ಚಳ ಸದ್ಯಕ್ಕೆ ಮಾಡುವ ಚಿಂತನೆಯಿಲ್ಲ ಎಂದು ಒಕ್ಕೂಟ ತಿಳಿಸಿದೆ.

ಆ ಕುರಿತಂತೆ ಸ್ಪಷ್ಟನೆ ನೀಡಿರುವ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್‌ ಶರ್ಮಾ, ಡೀಸೆಲ್‌ ಬೆಲೆ ಏರಿಕೆ ಸೇರಿದಂತೆ ಇನ್ನಿತರ ಕಾರಣಗಳಿಂದ ಖಾಸಗಿ ಸಾರಿಗೆಗಳು ಸಂಕಷ್ಟದಲ್ಲಿವೆ. ಆದರೂ ಸಾರ್ವಜನಿಕರಿಗೆ ಸಮಸ್ಯೆಯಾಗುವುದನ್ನು ತಡೆಯಲು ಸದ್ಯಕ್ಕೆ ಖಾಸಗಿ ಬಸ್‌ಗಳ ದರ ಹೆಚ್ಚಳ ಮಾಡುವುದಿಲ್ಲ. ಆದರೆ, ಹಬ್ಬ ಸೇರಿದಂತೆ ದೀರ್ಘ ರಜೆಯ ಸಂದರ್ಭದಲ್ಲಿ ಬಸ್‌ ದರ ಹೆಚ್ಚಳ ಮಾಡುವಂತೆ ಈಗ ಪ್ರಯಾಣ ದರ ಶೇ.40ರವರೆಗೆ ಹೆಚ್ಚಳ ಮಾಡಲಾಗಿದೆ. ನ.6ರಿಂದ 15ರವರೆಗೆ ಈ ಪ್ರಯಾಣ ದರ ಹೆಚ್ಚಳವಿರಲಿದೆ ಎಂದು ತಿಳಿಸಿದ್ದಾರೆ.

ಬಸ್‌ ದರ ಏರಿಕೆ ವಿರುದ್ಧ ಇಂದು ಬಿಜೆಪಿ ಹೋರಾಟ

ಬೆಂಗಳೂರು: ಸಾರಿಗೆ ನಿಗಮಗಳಿಗೆ 5,650 ಕೋಟಿ ರು.ಬಾಕಿ ನೀಡುವ ಬದಲು ಸರ್ಕಾರ ಜನರ ಮೇಲೆ ದರ ಏರಿಕೆ ಹೊರೆ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಈ ದರ ಏರಿಕೆ ವಿರೋಧಿಸಿ ಗುರುವಾರ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತುಘಲಕ್‌ ಸರ್ಕಾರಕ್ಕಿಂತ ಹೀನಾಯವಾಗಿ ಕಾಂಗ್ರೆಸ್‌ ಸರ್ಕಾರ ರಾಜ್ಯದ ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್‌ ಟಿಕೆಟ್‌ ದರ ಏರಿಸಿದೆ. ಈ ಮಟ್ಟಿಗಿನ ದರ ಏರಿಕೆಯನ್ನು ಯಾವುದೇ ಸರ್ಕಾರ ಈವರೆಗೆ ಮಾಡಿಲ್ಲ. ಮನಸೋ ಇಚ್ಛೆ ಹೆಚ್ಚಳ ಮಾಡಲಾಗಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳುವಂತೆ ಸಾರಿಗೆ ಇಲಾಖೆಯಲ್ಲಿ ಸಾಕ್ಷಿಗುಡ್ಡೆಯನ್ನು ಬಿಟ್ಟು ಹೋಗುತ್ತಿದ್ದಾರೆ. ದೀಪಾವಳಿ ಹಬ್ಬ ಬೆಳಕಿನ ಹಬ್ಬವಾಗಿದ್ದರೂ, ಜನರ ಬದುಕಲ್ಲಿ ಕತ್ತಲಿನ ಆಚರಣೆಯಾಗಲಿದೆ. ಇದು ಜನರನ್ನು ಸುಲಿಗೆ ಮಾಡುವ ವಿಧಾನ ಎಂದು ಹರಿಹಾಯ್ದರು.

ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ 5,650.95 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಇದನ್ನು ನೀಡಿದ್ದರೆ ಬಸ್‌ ಟಿಕೆಟ್‌ ದರ ಏರಿಕೆ ಮಾಡುವ ಅಗತ್ಯವೇ ಇರಲಿಲ್ಲ. ಇದನ್ನು ಕೊಡದೆ ಜನರ ಮೇಲೆ ದರ ಏರಿಕೆಯ ಹೊರೆ ಹಾಕಲಾಗಿದೆ. ಸುಮಾರು ಶೇ.40ರವರೆಗೂ ಟಿಕೆಟ್‌ ದರ ಏರಿಸಲಾಗಿದೆ. ಶಕ್ತಿ ಯೋಜನೆಯಡಿ ಉಚಿತ ಎಂದು ಹೇಳಿ ಈಗ ಹೊರೆ ಹಾಕಿದ್ದಾರೆ ಎಂದರು.

ದರ ಏರಿಕೆ ಮಾಡಲು ಒಂದು ಕಾರಣ ಬೇಕು

ದರ ಏರಿಕೆ ಮಾಡಲು ಒಂದು ಕಾರಣ ಬೇಕು. ಆದರೆ ಇಲ್ಲಿ ಸಾಲ ಮಾಡಿರುವುದರಿಂದ ದರ ಏರಿಕೆ ಎನ್ನುತ್ತಿದ್ದಾರೆ. ಸಚಿವ ಬೈರತಿ ಸುರೇಶ್‌ ಸಾಲದಲ್ಲಿದ್ದೇವೆ ಎಂದಿದ್ದಾರೆ. ನಾನು ಸಾರಿಗೆ ಸಚಿವನಾಗಿದ್ದಾಗ ನಿಗಮಗಳು ಐದು ವರ್ಷ ಲಾಭದಲ್ಲಿದ್ದವು. ಆಗ ಸ್ವಂತ ಹಣದಿಂದಲೇ 1,110 ಎಕರೆ ಜಮೀನು ಖರೀದಿಸಿ ಲ್ಯಾಂಡ್‌ ಬ್ಯಾಂಕ್‌ ಮಾಡಲಾಗಿತ್ತು. ಈಗ ಅದಕ್ಕೆ 10,000 ಕೋಟಿ ರೂ. ಮೌಲ್ಯವಿದೆ. ನಾನು ಟಿಟಿಎಂಸಿ ಮಾಡಿದ್ದೆ. ಬಾಡಿಗೆಯಿಂದಲೇ 40-50 ಕೋಟಿ ರು. ಬರುತ್ತಿತ್ತು ಎಂದು ಮಾಜಿ ಸಾರಿಗೆ ಸಚಿವರೂ ಆಗಿರುವ ಅಶೋಕ್‌ ವಿವರಿಸಿದರು.

ಪ್ರತಿ ದಿನ ಬಳಸುವ ಆಹಾರದ ಮೇಲೆ ದರ ಏರಿಕೆ ಮಾಡುವುದನ್ನು ತಪ್ಪಿಸಬೇಕಿತ್ತು. ಹಾಲಿನ ದರ ಏರಿಕೆ ಬಳಿಕ ಈಗ ತಿಂಗಳಿಗೆ ಒಂದು ಕುಟುಂಬ 390 ರೂ. ಅಧಿಕ ಖರ್ಚು ಮಾಡಬೇಕಾಗುತ್ತದೆ. ಜನರಿಗಾಗಿ ಸರ್ಕಾರ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಈ ಸರ್ಕಾರ ಕೊಟ್ಟ ಮಾತಿಗೆ ತಪ್ಪಿ ನಡೆದು ಅನ್ಯಾಯ ಮಾಡಿದೆ ಎಂದರು.

ದರ ಏರಿಕೆ ಬಗ್ಗೆ ನಾನು ಅಧಿವೇಶನದಲ್ಲೇ ಹೋರಾಟ ಮಾಡಿದ್ದೆ. ಮುಂದೆಯೂ ಮಾಡುತ್ತೇನೆ. ಜನರು ಇದಕ್ಕೆ ಇನ್ನಷ್ಟು ಸ್ಪಂದಿಸಿದರೆ ನಿಜವಾದ ಹೋರಾಟವಾಗುತ್ತದೆ. ಇಲ್ಲವಾದರೆ ರಾಜಕೀಯ ಪ್ರತಿಭಟನೆ ಎಂದು ವಾದ ಮಾಡುತ್ತಾರೆ. ಆದ್ದರಿಂದ ಸಾರ್ವಜನಿಕರು ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಕೋರಿದರು.

ಮುಖ್ಯಮಂತ್ರಿ ಶಿವಕುಮಾರ್‌ ಅವರು ಬ್ರ್ಯಾಂಡ್‌ ಬೆಂಗಳೂರು, ಸುರಂಗ ರಸ್ತೆ, ಮೇಕೆದಾಟು, ಬರ ಪರಿಹಾರ ಎಂದು ಹೇಳಿದರೂ ಯಾವುದನ್ನೂ ಮಾಡಿಲ್ಲ. ಇವರು ಖಾಲಿ ಡಬ್ಬವನ್ನು ಇಟ್ಟುಕೊಂಡು ಶಬ್ದ ಮಾಡುವ ಭರವಸೆಗಳ ಸರದಾರ. ಗೃಹಲಕ್ಷ್ಮಿ ಹಣವನ್ನು ಬೇರೆ ಕಡೆ ಬಳಸಲು ಸಾಧ್ಯವಿಲ್ಲ. ಹಾಗೇನಾದರೂ ಮಾಡಿದ್ದರೆ ಅದು ಅಕ್ರಮ. ಇನ್ನು ಏನಾದರೂ ಭರವಸೆ ನೀಡಿದರೆ ಜನರು ನಂಬಬಾರದು. ಆರ್ಥಿಕ ಇಲಾಖೆಯಲ್ಲಿ ಎಷ್ಟು ಹಣವಿದೆ ಎಂದು ಮೊದಲು ಶ್ವೇತಪತ್ರ ಬಿಡುಗಡೆ ಮಾಡಲಿ ಎಂದು ಅಶೋಕ್‌ ಆಗ್ರಹಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಸರ್ಕಾರದ ಶಾಕಿಂಗ್‌ ನ್ಯೂಸ್‌ - ಬಸ್‌ ಟಿಕೆಟ್‌ ದರ ಸಾರ್ವಕಾಲಿಕ ಶೇ.35ವರೆಗೆ ಏರಿಕೆ
ಜಿಲ್ಲಾವಾರು ಪ್ರಯಾಣ ದರ ಹೆಚ್ಚಳದ ವಿವರ - ಬೆಂಗಳೂರಿನಿಂದ ಪ್ರಮುಖ ನಗರಕ್ಕೆ ಎಷ್ಟು ಏರಿಕೆ ?